ಸೋಮವಾರ, ನವೆಂಬರ್ 28, 2022
20 °C

ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಗೆ ತಿರುಗೇಟು ನೀಡಲು ಬಿಜೆಪಿಯಿಂದ 'ರಥ ಯಾತ್ರೆ'

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಜೈಪುರ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ನಡೆಸುತ್ತಿರುವ ಭಾರತ್‌ ಜೋಡೊ ಯಾತ್ರೆಗೆ ತಿರುಗೇಟು ನೀಡಲು ರಾಜಸ್ಥಾನ ಬಿಜೆಪಿ ಸಿದ್ಧತೆ ನಡೆಸಿದೆ. ಬೃಹತ್‌ 'ರಥ ಯಾತ್ರೆ'ಗೆ ಚಾಲನೆ ನೀಡುವ ಮೂಲಕ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡಲು ಸಜ್ಜಾಗಿದೆ.

ರಥಗಳನ್ನಾಗಿ ಮಾರ್ಪಾಡು ಮಾಡಲಾದ 200 ಹವಾ ನಿಯಂತ್ರಿತ ಬಸ್ಸುಗಳನ್ನು ನವೆಂಬರ್‌ 17ರಿಂದ ಡಿಸೆಂಬರ್‌ 17ರ ವರೆಗೆ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ನಿಯೋಜಿಸಲು ಬಿಜೆಪಿ ಮುಂದಾಗಿದೆ.

ಪ್ರತಿ ವಿಧಾನಸಭೆಯಲ್ಲಿ ನಡೆಯುವ ಯಾತ್ರೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಅಭ್ಯರ್ಥಿಗಳು, ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ. ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಉತ್ಸಾಹ ಮತ್ತು ಆತ್ಮ ವಿಶ್ವಾಸ ತುಂಬುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಬಿಜೆಪಿ ಹೇಳಿದೆ.

ಬೃಹತ್‌ 'ರಥ ಯಾತ್ರೆ'ಗೆ ಸಿದ್ಧತೆ ನಡೆಸಿದ್ದೇವೆ. ನಿರ್ದಿಷ್ಟ ಕ್ಷೇತ್ರದಲ್ಲಿರುವ ಯಾವುದೇ ಹಿರಿಯ ರಾಜಕಾರಣಿಯನ್ನು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಹಾಲಿ ಶಾಸಕರು, ಮಾಜಿ ಅಭ್ಯರ್ಥಿ ಅಥವಾ ಜಿಲ್ಲಾಧ್ಯಕ್ಷರು ಆಹ್ವಾನಿಸಬಹುದಾಗಿದೆ ಎಂದೂ ತಿಳಿಸಿದೆ.

10 ಜನರು ಕೂರಲು ಸಾಧ್ಯವಾಗುವಂತೆ ರಥವನ್ನು ವಿನ್ಯಾಸಗೊಳಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಬಿಜೆಪಿಯ ತತ್ವಗಳನ್ನು ವಿವರಿಸುವ ಪೋಸ್ಟರ್‌ಗಳನ್ನು ರಥದ ಮೇಲೆ ಅಂಟಿಸಲಾಗುತ್ತದೆ.

'ರಥ ಯಾತ್ರೆ' ಸಾಗಬೇಕಿರುವ ಮಾರ್ಗ ನಕ್ಷೆ ಸಿದ್ಧಪಡಿಸಲಾಗುತ್ತಿದೆ. ಯಾತ್ರೆ ಸಾಗುವ ಮಾರ್ಗದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳ ಕುರಿತು ಮಾಹಿತಿ ಪ್ರಸಾರ ಮಾಡಲಾಗುತ್ತದೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ, ರಾಜ್ಯ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಬಗ್ಗೆ ಜನರ ಗಮನ ಸೆಳೆಯುವ ಪ್ರಯತ್ನಗಳು ನಡೆಯಲಿವೆ ಎಂದು ವರದಿಯಾಗಿದೆ.

ಏತನ್ಮಧ್ಯೆ, ಡಿಸೆಂಬರ್‌ 6ರಂದು ಭಾರತ್‌ ಜೋಡೊ ಯಾತ್ರೆಯು ಝಲವರ್‌ ಜಿಲ್ಲೆ ಮೂಲಕ ರಾಜಸ್ಥಾನಕ್ಕೆ ಪ್ರವೇಶಿಸಲಿದೆ. ಬಳಿಕ, ಸವಾಯ್‌ ಮಧೋಪುರ್‌, ದೌಸಾ ಮತ್ತು ಅಲ್ವಾರ್‌ ಮಾರ್ಗವಾಗಿ ಹರಿಯಾಣದತ್ತ ಸಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು