ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಗಾಂಧಿ ಹತ್ಯೆ ಅಪರಾಧಿ ಬಿಡುಗಡೆ: 31 ವರ್ಷಗಳ ಜೈಲುವಾಸ ಶಿಕ್ಷೆ ಬಳಿಕ ಮುಕ್ತ

ರಾಜ್ಯಪಾಲರ ವಿಳಂಬ ಧೋರಣೆ ವಿರುದ್ಧ ಸುಪ್ರೀಂನಿಂದ ಪರಮಾಧಿಕಾರ ಬಳಕೆ
Last Updated 18 ಮೇ 2022, 19:03 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೇರರಿವಾಳನ್ ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬುಧವಾರ ಬಿಡುಗಡೆ ಮಾಡಲಾಗಿದೆ.

ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂಕೋರ್ಟ್‌ಗೆ ನೀಡಲಾಗಿರುವ ಪರಮಾಧಿಕಾರವನ್ನು ಚಲಾ ಯಿಸಿನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತುಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯ ಪೀಠವು ಪೇರರಿವಾಳನ್ ಅವರನ್ನು ಬಿಡುಗಡೆ ಮಾಡಲು ಆದೇಶ ನೀಡಿದೆ.

ಸಂವಿಧಾನದ 161ನೇ ವಿಧಿಯಡಿ ಪೇರರಿವಾಳನ್‌ ದೋಷಮುಕ್ತಿಗೆ ತೀರ್ಮಾನ ಕೈಗೊಳ್ಳಲು ತಮಿಳುನಾಡು ರಾಜ್ಯಪಾಲರು ಬಹಳಷ್ಟು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಪೀಠವು 142ನೇ ವಿಧಿಯಡಿ ಅಧಿಕಾರ ಚಲಾ ಯಿಸಿ ಬಿಡುಗಡೆಗೆ ಆದೇಶಿಸಿದೆ. ಜಾಮೀನು ಪ್ರಕಟಿಸುವ ಸಮಯದಲ್ಲಿ ನ್ಯಾಯಪೀಠವು, ‘ಅಪರಾಧಿಯು 30 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಶಿಕ್ಷೆ ಅನುಭವಿಸಿದ್ದು, ಅವರ ನಡವಳಿಕೆಯು ತೃಪ್ತಿದಾಯಕವಾಗಿದೆ’ ಎಂದೂ ಹೇಳಿದೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ 7 ಮಂದಿ ಅಪರಾಧಿಗಳಲ್ಲಿ ಪೇರರಿವಾಳನ್‌ ಒಬ್ಬರಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಪೇರರಿವಾಳನ್‌ ಅವರ ತಾಯಿ ಅರ್ಪುತಮ್ಮ ಅಮ್ಮಾಳ್
ಪೇರರಿವಾಳನ್‌ ಅವರ ತಾಯಿ ಅರ್ಪುತಮ್ಮ ಅಮ್ಮಾಳ್

‘ಪ್ರಕರಣದ ಎಲ್ಲ 7 ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿರುವ ತಮಿಳುನಾಡು ರಾಜ್ಯ ಸಚಿವ ಸಂಪುಟದ ಸಲಹೆಯು ರಾಜ್ಯ ಪಾಲರಿಗೆ ಬದ್ಧವಾಗಿದೆ’ ಎಂದು ಹೇಳಿದ ನ್ಯಾಯಪೀಠವು, ‘ಐಪಿಸಿ ಸೆಕ್ಷನ್ 302ರ ಅಡಿಯಲ್ಲಿರುವ ಪ್ರಕರಣದಲ್ಲಿ ಕ್ಷಮಾದಾನ ನೀಡಲು ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರವಿದೆ’ ಎಂಬ ಕೇಂದ್ರ ಸರ್ಕಾರದ ವಾದವನ್ನು ತಳ್ಳಿಹಾಕಿತು.

ರಾಜ್ಯ ಸ್ವಾಯತ್ತತೆ ಸಿಕ್ಕ ಗೆಲುವು: ಸ್ಟಾಲಿನ್

ಚೆನ್ನೈ: ಸು‍ಪ್ರೀಂ ಕೋರ್ಟ್‌ ನಿಂದಪೇರರಿವಾಳನ್‌ ಅವರ ಬಿಡುಗಡೆಯು ರಾಜ್ಯದ ಸ್ವಾಯತ್ತತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಸಿಕ್ಕ ಗೆಲುವು. ಅಲ್ಲದೇ, ರಾಜ್ಯ ಸರ್ಕಾರಗಳ ನೀತಿ ನಿರ್ಧಾರ ಗಳಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದನ್ನೂ ನ್ಯಾಯಾಲಯ ತಿಳಿಸಿದಂತಾಗಿದೆ ಎಂದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟ್ಯಾಲಿನ್‌ ಪ್ರತಿಕ್ರಿಯಿಸಿದ್ದಾರೆ.

‘ವಕೀಲರೊಂದಿಗೆ ಚರ್ಚಿಸಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಇತರೆ ಆರು ಅಪರಾಧಿಗಳ ಬಿಡು ಗಡೆಗಾಗಿ ಕ್ರಮ ಕೈಗೊಳ್ಳಲಾಗು ವುದು’ ಎಂದು ತಿಳಿಸಿದ್ದಾರೆ.

ತಾಯಿಯ ದಶಕಗಳ ಹೋರಾಟ

ಚೆನ್ನೈ: ‘ನಾನು ಮುಗ್ಧ ಹುಡುಗನ ತಾಯಿ, 28 ವರ್ಷಗಳ ಹಿಂದೆ ನನ್ನ ಮಗನನ್ನು ನನ್ನಿಂದ ದೂರ ಮಾಡಲಾಗಿತ್ತು. ಆಗ ಅವನಿಗೆ ಕೇವಲ 19 ವರ್ಷ. ಆ ದಿನದಿಂದ ನಾನು ಅವನ ಹಿಂದೆ ಓಡಲು ಆರಂಭಿಸಿದೆ, ಈಗಲೂ ಓಡುತ್ತಿದ್ದೇನೆ’ ಎಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ ಪೇರರಿವಾಳನ್‌ ಅವರ ತಾಯಿ ಅರ್ಪುತಮ್ಮ ಅಮ್ಮಾಳ್ ಅವರು ತಮ್ಮ ಟ್ವಿಟರ್‌ ಪ್ರೊಫೈಲ್‌ನಲ್ಲಿ ಬರೆದು
ಕೊಂಡಿದ್ದಾರೆ.

ಮಗನ ಬಿಡುಗಡೆಗಾಗಿಅರ್ಪುತಮ್ಮ ಅಮ್ಮಾಲ್‌ ಅವರು 31 ವರ್ಷಗಳ ಕಾಲ ಪಟ್ಟುಬಿಡದೇ ಹೋರಾಟ ನಡೆಸಿದ್ದಾರೆ. ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಡಿಎ.ಜಿ ಪೇರರಿವಾಳನ್‌ ಅವರನ್ನು 1991ರ ಜೂನ್‌ 19ರಂದು ಬಂಧಿಸಲಾಗಿತ್ತು.

ರಾಜೀವ್‌ ಹಂತಕನ ಬಿಡುಗಡೆ: ಕಾಂಗ್ರೆಸ್‌ ಬೇಸರ

ನವದೆಹಲಿ: ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೇರರಿವಾಳನ್ ಬಿಡುಗಡೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಮಾಜಿ ಪ್ರಧಾನಿಯ ಹಂತಕನನ್ನು ‘ಕ್ಷುಲ್ಲಕ ಮತ್ತು ಅಗ್ಗದ ರಾಜಕೀಯ’ಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಬೆಳವಣಿಗೆಯು ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರ ಜತೆಗೆ ದೇಶದ ಪ್ರತಿಯೊಬ್ಬ ನಾಗರಿಕರಲ್ಲಿಯೂ ದುಃಖ ಮತ್ತು ಕೋಪವನ್ನು ತರಿಸಿದೆ ಎಂದುಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

‘ಭಯೋತ್ಪಾದಕನನ್ನು ಭಯೋತ್ಪಾದಕನೆಂದೇ ಪರಿಗಣಿಸಬೇಕು. ರಾಜೀವ್ ಗಾಂಧಿ ಹಂತಕನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದ ನಮಗೆ ತೀವ್ರ ನೋವು ಮತ್ತು ನಿರಾಶೆಯಾಗಿದೆ’ಎಂದು ಅವರು ತಿಳಿಸಿದ್ದಾರೆ.

ಮಾಜಿ ಪ್ರಧಾನಿಯ ಹಂತಕನನ್ನು ಬಿಡುಗಡೆ ಮಾಡಿರುವುದು ಖಂಡನೀಯ ಮತ್ತು ಅತ್ಯಂತ ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT