ದೆಹಲಿಗೆ ಟ್ರ್ಯಾಕ್ಟರ್ ಎಂಟ್ರಿ, ಸಂಸತ್ತಿನಲ್ಲಿ ಮಂಡಿ ತೆರೆಯುತ್ತೇವೆ: ಟಿಕಾಯತ್

ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನಿರ್ಣಯಿಸುವ ಆ ದಿನದಂದು ಟ್ರ್ಯಾಕ್ಟರ್ಗಳು ಮತ್ತೆ ದೆಹಲಿಗೆ ಪ್ರವೇಶಿಸಲಿದ್ದು, ಸಂಸತ್ತಿನಲ್ಲಿ ಹೊಸ ಮಂಡಿ ತೆರೆಯಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ.
ಶನಿವಾರ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ನಡೆದ ಮಹಾಪಂಚಾಯತ್ನಲ್ಲಿ ಭಾಗವಹಿಸಿದ ಟಿಕಾಯತ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೋರೇಟ್ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸುವ ಆ ದಿನ ಸಂಸತ್ತಿನಲ್ಲಿ ಹೊಸ ಮಂಡಿ ತೆರೆಯಲಾಗುವುದು. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಟ್ರ್ಯಾಕ್ಟರ್ಗಳು ಮತ್ತೆ ದೆಹಲಿಗೆ ಪ್ರವೇಶಿಸಲಿದೆ. 3.5 ಲಕ್ಷ ಟ್ರ್ಯಾಕ್ಟರ್ಗಳು ಮತ್ತು 25 ಲಕ್ಷ ರೈತರು ಒಂದೇ ಆಗಿದ್ದಾರೆ. ಮುಂದಿನ ಗುರಿ ಸಂಸತ್ತಿನಲ್ಲಿ ಬೆಳೆಗಳನ್ನು ಮಾರಾಟ ಮಾಡುವುದಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಎಲ್ಲರೂ ಹೆಣಗಾಡುತ್ತಿರುವಾಗ ಅದಾನಿ ಸಂಪತ್ತು ಶೇ.50ರಷ್ಟು ವೃದ್ಧಿ ಹೇಗೆ? ರಾಹುಲ್
ರೈತರು ಎಲ್ಲಿ ಬೇಕಾದರೂ ಬೆಳೆಗಳನ್ನು ಮಾರಾಟ ಮಾಡಬಹುದು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ರಾಕೇಶ್ ಟಿಕಾಯತ್ ಬೊಟ್ಟು ಮಾಡಿದರು.
ಸಂಸತ್ತಿನಲ್ಲಿ ಮಂಡಿ ತೆರೆಯುವುದು ಉತ್ತಮ ಎಂದು ಭಾವಿಸುತ್ತೇನೆ. ರೈತರು ಹೊರಗಿನವರಾಗಿದ್ದು, ವ್ಯಾಪಾರಿಗಳು ಹೊರಗಿನವರಾಗಿರುತ್ತಾರೆ. ಖಂಡಿತವಾಗಿಯೂ ಅಲ್ಲಿ ಖರೀದಿ ನಡೆಯಲಿದೆ ಎಂದು ಹೇಳಿದರು.
ಏತನ್ಮಧ್ಯೆ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸದಂತೆ ರಾಕೇಶ್ ಟಿಕಾಯತ್ ಮನವಿ ಮಾಡಿದರು.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ರೈತರು ಕಳೆದ 100 ದಿನಗಿಂತಲೂ ಹೆಚ್ಚು ಸಮಯದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ಗಿಟ್ಟಿಸುವ ನಿಟ್ಟಿನಲ್ಲಿ ದೇಶದ ವಿವಿದೆಡೆಗಳಲ್ಲಿ ರೈತರ ಮಹಾಪಂಚಾಯತ್ಗಳನ್ನು ಆಯೋಜಿಸಲಾಗುತ್ತಿದೆ.
ಬಿಜೆಪಿಗೆ ಮತ ಹಾಕಬೇಡಿ. ಅವರಿಗೆ ಮತ ಹಾಕಿದರೆ ನಿಮ್ಮ ಜಮೀನನ್ನು ದೊಡ್ಡ ಕಾರ್ಪೋರೇಟ್ ಮತ್ತು ಕೈಗಾರಿಕೆಗಳಿಗೆ ಬಿಟ್ಟುಕೊಡುತ್ತಾರೆ. ನಿಮ್ಮನ್ನು ಭೂರಹಿತರನ್ನಾಗಿ ಮಾಡುತ್ತಾರೆ. ನಿಮ್ಮ ಜೀವನೋಪಾಯವನ್ನು ಪಣಕ್ಕಿಟ್ಟು ಅವರು ದೇಶವನ್ನು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುತ್ತಾರೆ ಎಂದು ಆರೋಪಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.