ಶುಕ್ರವಾರ, ಏಪ್ರಿಲ್ 23, 2021
28 °C
ಸಾಮಾಜಿಕ ಜಾಲತಾಣ, ಒಟಿಟಿ ವೇದಿಕೆ, ಸುದ್ದಿ ಪೋರ್ಟಲ್‌ಗಳ ನಿಯಂತ್ರಣಕ್ಕೆ ನಿಯಮ ಪ್ರಕಟ

ಡಿಜಿಟಲ್‌ ವೇದಿಕೆ, ಪೋರ್ಟಲ್‌ಗಳಿಗೆ ಮೂಗುದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾಮಾಜಿಕ ಮಾಧ್ಯಮ, ಒಟಿಟಿ ವೇದಿಕೆಗಳು ಮತ್ತು ಡಿಜಿಟಲ್‌ ಸುದ್ದಿ ಪೋರ್ಟಲ್‌ಗಳನ್ನು ನಿಯಂತ್ರಿಸಿ, ಅವುಗಳ ಮೇಲಿನ ಹಿಡಿತ ಬಿಗಿಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಗುರುವಾರ ಪ್ರಕಟಿಸಿದೆ. ದೂರು ನಿರ್ವಹಣಾ ವ್ಯವಸ್ಥೆಗಳನ್ನು ಸ್ಥಾಪಿಸುವಂತೆ ಈ ಕ್ಷೇತ್ರಗಳ ಸಂಸ್ಥೆಗಳಿಗೆ ಸೂಚಿಸಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳ ವ್ಯಾಪಕ ದುರ್ಬಳಕೆಯ ದೂರುಗಳ ಕಾರಣಕ್ಕೆ ಸರ್ಕಾರವು ‘ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್‌ ನೀತಿ ಸಂಹಿತೆ) ನಿಯಮಗಳು 2021’ ಅನ್ನು ರೂಪಿಸಿದೆ. ಸರ್ಕಾರವು ‘ಸೌಮ್ಯ ಮಟ್ಟದ ನಿಯಂತ್ರಣ ಧೋರಣೆ’ ಅನುಸರಿಸಿದೆ. ಸಾಮಾನ್ಯ ಬಳಕೆದಾರರ ದೂರುಗಳನ್ನು ಆಲಿಸಿ, ಸಕಾಲದಲ್ಲಿ ಪರಿಹಾರ ಒದಗಿಸಲು ದೂರು ನಿರ್ವಹಣಾ ವ್ಯವಸ್ಥೆ ಸ್ಥಾಪನೆ ಅಗತ್ಯ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. 

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳು, ನೆಟ್‌ಫ್ಲಿಕ್ಸ್‌, ಯೂಟ್ಯೂಬ್‌ ಮತ್ತು ಅಮೆಜಾನ್‌ ಪ್ರೈಮ್‌ ವಿಡಿಯೊದಂತಹ ಒಟಿಟಿ ವೇದಿಕೆಗಳು ಮತ್ತು ಡಿಜಿಟಲ್‌ ಸುದ್ದಿ ಪೋರ್ಟಲ್‌ಗಳಿಗೆ ಈ ನಿಯಮಗಳು ಅನ್ವಯ ಆಗಲಿವೆ. 

ಚಿತ್ರಮಂದಿರ ಮತ್ತು ಟಿ.ವಿ. ಮೂಲಕ ಕಾರ್ಯಕ್ರಮ ವೀಕ್ಷಣೆ ಮತ್ತು ಇಂಟರ್‌ನೆಟ್ ಮೂಲಕ ವೀಕ್ಷಣೆಯ ನಡುವಣ ವ್ಯತ್ಯಾಸವನ್ನು ಗಮನದಲ್ಲಿ ಇರಿಸಿಕೊಂಡೇ ಒಟಿಟಿ ವೇದಿಕೆ ನಿಯಂತ್ರಣದ ಮಾರ್ಗಸೂಚಿಯನ್ನು ರೂಪಿಸಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಈ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರುತ್ತವೆ. ಸಾಮಾಜಿಕ ಮಾಧ್ಯಮದ ಪ್ರಮುಖ ಸಂಸ್ಥೆಗಳು (ಬಳಕೆದಾರರ ಸಂಖ್ಯೆಯ ಆಧಾರದಲ್ಲಿ) ಈ ನಿಯಮಗಳನ್ನು ಪಾಲಿಸಲು ಮೂರು ತಿಂಗಳ ಗಡುವು ನೀಡಲಾಗಿದೆ. 

ನಿಯಂತ್ರಣದ ಹಿಂದಿನ ಕಾರಣವೇನು

ನವದೆಹಲಿ: ರೈತರ ಪ್ರತಿಭಟನೆಗೆ ಬೆಂಬಲವಾಗಿ ‘ಪ್ರಚೋದನಕಾರಿ’ ಎಂದು ಹೇಳಲಾದ ಟ್ವೀಟ್‌ಗಳಿಗೆ ಸಂಬಂಧಿಸಿ ಟ್ವಿಟರ್‌ ಮತ್ತು ಸರ್ಕಾರದ ನಡುವೆ ಇತ್ತೀಚೆಗೆ ಜಟಾಪಟಿ ನಡೆದಿತ್ತು. ಸರ್ಕಾರ ಸೂಚಿಸಿದ 1,500 ಟ್ವೀಟ್‌ಗಳು ಅಥವಾ ಖಾತೆಗಳನ್ನು ಅಳಿಸಿ ಹಾಕಲು ಟ್ವಿಟರ್ ಆರಂಭದಲ್ಲಿ ಹಿಂದೇಟು ಹಾಕಿತ್ತು. ಕಾನೂನು ಕ್ರಮದ ಬೆದರಿಕೆ ಒಡ್ಡಿದ ನಂತರವೇ ಸರ್ಕಾರದ ಆದೇಶವನ್ನು ಟ್ವಿಟರ್‌ ಪಾಲಿಸಿತ್ತು. ಟ್ವಿಟರ್‌ಗೆ ಪರ್ಯಾಯವಾಗಿ ‘ಕೂ’ ಎಂಬ ಆ್ಯಪ್‌ ಅನ್ನು ಕೇಂದ್ರದ ಹಲವು ಸಚಿವರು ಬೆಂಬಲಿಸಿದ್ದರು.

ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಪ್ರಸಾರವಾದ ‘ತಾಂಡವ್‌’ ಸರಣಿಯಲ್ಲಿ ಹಿಂದೂ ದೇವ–ದೇವತೆಗಳನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅವಹೇಳನಕಾರಿಯಾಗಿರುವ ಭಾಗಗಳನ್ನು ಕತ್ತರಿಸಬೇಕು ಎಂದು ಅಧಿಕಾರಿಗಳು ಆದೇಶಿಸಿದ್ದರು. ಈ ಕಾರಣಗಳಿಂದಾಗಿಯೇ ಸರ್ಕಾರವು ನಿಯಂತ್ರಣದ ನಿಯಮಗಳನ್ನು ರೂಪಿಸಿದೆ ಎಂದು ಹೇಳಲಾಗುತ್ತಿದೆ. 

ಈಗ ರೂ‍ಪಿಸಿರುವ ನಿಯಮಗಳು ಬಳಕೆದಾರರ ಖಾಸಗಿತನವನ್ನು ಕುಗ್ಗಿಸುತ್ತದೆ ಮತ್ತು ಸೆನ್ಸಾರ್‌ಶಿಪ್‌ ಅನ್ನು ಹೆಚ್ಚಿಸುತ್ತದೆ ಎಂದು ವಾಕ್‌ ಸ್ವಾತಂತ್ರ್ಯದ ಹಕ್ಕಿನ ಪ್ರತಿಪಾದಕರು ಮತ್ತು ತಂತ್ರಜ್ಞಾನ ವ್ಯಾಪಾರ ಗುಂಪುಗಳು ಟೀಕಿಸಿವೆ. 

*ನಿಯಮ ಪಾಲನಾ ಅಧಿಕಾರಿ ನೇಮಕ ಮಾಡಬೇಕು. ಸಾಮಾಜಿಕ ಮಾಧ್ಯಮಗಳಿಗೆ ಅನ್ವಯವಾಗುವ ಎಲ್ಲಾ ನಿಯಮಗಳ ಪಾಲನೆಯ ಹೊಣೆ ಈ ಅಧಿಕಾರಿಯದ್ದು. ಪ್ರಧಾನ ಸಂಪರ್ಕ ಅಧಿಕಾರಿಯನ್ನು ನೇಮಕ ಮಾಡಬೇಕು. ಸರ್ಕಾರಕ್ಕೆ ಬಂದಿರುವ ದೂರುಗಳ ಸಂಬಂಧ ಸಾಮಾಜಿಕ ಮಾಧ್ಯಮಗಳ ಮಧ್ಯಸ್ಥ ಸಂಸ್ಥೆಯನ್ನು ಸಂಪರ್ಕಿಸಲು ಪ್ರಧಾನ ಸಂಪರ್ಕ ಅಧಿಕಾರಿಯು ದಿನದ 24 ಗಂಟೆಯೂ ಲಭ್ಯವಿರಬೇಕು. ದೂರು ಪರಿಹಾರ ಅಧಿಕಾರಿಯನ್ನು ನೇಮಕ ಮಾಡಬೇಕು. ಈ ಎಲ್ಲ ಅಧಿಕಾರಿಗಳು ಭಾರತದಲ್ಲಿಯೇ ನೆಲೆಸಿರಬೇಕು

1.2 ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆ

ಕಡಿಮೆ ಬಳಕೆದಾರರು ಇರುವ ಸಾಮಾಜಿಕ ಮಾಧ್ಯಮಗಳು ದೂರ ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು. ಆದರೆ ಈ ಬಳಕೆದಾರರ ಸಂಖ್ಯೆಯನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇನ್ನೂ ನಿಗದಿ ಮಾಡಿಲ್ಲ. ಬೃಹತ್ ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆಗಳಿಗೆ ಅನ್ವಯವಾಗುವ ಎಲ್ಲಾ ನಿಯಮಗಳು ಇವಕ್ಕೆ ಅನ್ವಯವಾಗುವುದಿಲ್ಲ.

1.3 ಬೃಹತ್ ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆ

ಹೆಚ್ಚು ಬಳಕೆದಾರರು ಇರುವ ಸಾಮಾಜಿಕ ಮಾಧ್ಯಮಗಳು ದೂರ ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು. ಆದರೆ ಬಳಕೆದಾರರ ಸಂಖ್ಯೆಯನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇನ್ನೂ ನಿಗದಿ ಮಾಡಿಲ್ಲ.

*ಕಂಟೆಂಟ್‌ಗಳನ್ನು (ಚಿತ್ರ, ಫೋಟೊ, ವಿಡಿಯೊ ಸೇರಿದಂತೆ ಯಾವುದೇ ಕಾರ್ಯಕ್ರಮ) ತೆರವು ಮಾಡಬೇಕು ಎಂದು ಸರ್ಕಾರವಾಗಲೀ, ನ್ಯಾಯಾಲಯವಾಗಲೀ ಆದೇಶ ನೀಡಿದ 24 ಗಂಟೆಗಳ ಒಳಗೆ ಅದನ್ನು ಅನುಷ್ಠಾನಕ್ಕೆ ತರಬೇಕು

*ದೂರು ಮತ್ತು ಪರಿಹಾರಗಳ ಬಗ್ಗೆ ಪ್ರತಿ ತಿಂಗಳೂ ವರದಿ ಪ್ರಕಟಿಸಬೇಕು

*ಕಂಟೆಂಟ್‌ಗಳು ಮತ್ತು ಸುಳ್ಳುಸುದ್ದಿಗಳ ಮೂಲ ಯಾರು ಎಂಬುದನ್ನು ಪತ್ತೆಮಾಡಬೇಕು. ತನಿಖೆಯ ಕಾರಣಕ್ಕೆ ಈ ಮಾಹಿತಿಯನ್ನು ತನಿಖಾ ಸಂಸ್ಥೆಗಳ ಜತೆ ಹಂಚಿಕೊಳ್ಳಬೇಕು

*ರಾಷ್ಟ್ರೀಯ ಏಕತೆ, ಸಾರ್ವಭೌಮತೆ, ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧ, ಕಾನೂನು ಸುವ್ಯವಸ್ಥೆ ಪಾಲನೆಗೆ ಧಕ್ಕೆ ತರುವಂತಹ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಕಂಟೆಂಟ್‌ಗಳಿಗೆ ಸಂಬಂಧಿಸಿದಂತೆ ಈ ನಿಯಮ ಅನ್ವಯ 

*ದೂರು, ತನಿಖೆಗೆ ಸಂಬಂಧಿಸಿದಂತೆ ಕಂಟೆಂಟ್‌ನ ಮೂಲಕರ್ತೃವಿಗೆ ಮಾಹಿತಿ ನೀಡುವ ಅವಶ್ಯಕತೆ ಇಲ್ಲ

*ಬಳಕೆದಾರರು ತಮ್ಮನ್ನು ತಾವು ದೃಢೀಕರಿಸಿಕೊಳ್ಳಲು ವ್ಯವಸ್ಥೆ ಇರಬೇಕು; ದೃಢೀಕರಣ ಆಗಿದೆ ಎಂಬುದು ಬಳಕೆದಾರರಿಗೆ ಸ್ಪಷ್ಟವಾಗಿ ಅರಿವಾಗುವ ವ್ಯವಸ್ಥೆ ಇರಬೇಕು

*ಸಾಮಾಜಿಕ ಜಾಲತಾಣದ ಖಾತೆಯಿಂದ ಯಾವುದೇ ಕಂಟೆಂಟ್‌ ಅನ್ನು ಸಂಸ್ಥೆಯು ಅಳಿಸಿ ಹಾಕುವುದಕ್ಕೆ ಮುಂಚೆ, ಬಳಕೆದಾರರಿಗೆ ಆ ಬಗ್ಗೆ ಮಾಹಿತಿ ನೀಡಬೇಕು; ಅಳಿಸಿ ಹಾಕಲು ಕಾರಣವೇನು ಎಂಬ ವಿವರಣೆಯನ್ನೂ ನೀಡಬೇಕು. ಮಧ್ಯಸ್ಥ ಸಂಸ್ಥೆಯ ಕ್ರಮವನ್ನು ಪ‍್ರಶ್ನಿಸಲು ಬಳಕೆದಾರರಿಗೆ ನ್ಯಾಯಬದ್ಧ ಅವಕಾಶ ಮತ್ತು ಸಮಯವನ್ನೂ ನೀಡಬೇಕು

1.4 ದೂರು ಪರಿಹಾರ ವ್ಯವಸ್ಥೆ

* ಬಳಕೆದಾರರು ಮತ್ತು ಸಂತ್ರಸ್ತರು ದೂರು ನೀಡಲು ಅವಕಾಶವಿರಬೇಕು

* ದೂರು ಪರಿಹಾರ ಅಧಿಕಾರಿ ನೇಮಕ ಮತ್ತು ಸಂಪರ್ಕ ಸಂಖ್ಯೆಯನ್ನು ಬಹಿರಂಗಪಡಿಸಬೇಕು

* ದೂರು ಬಂದ 24 ಗಂಟೆಗಳ ಒಳಗೆ ಅದನ್ನು ಸ್ವೀಕರಿಸಬೇಕು

* ದೂರು ಬಂದ 15 ದಿನಗಳ ಒಳಗೆ ಪರಿಹರಿಸಬೇಕು

1.5 ಮಹಿಳೆಯ ಗೌರವ ರಕ್ಷಣೆ

* ಮಹಿಳೆಯ ಗೌರವ ರಕ್ಷಣೆಗೆ ಆದ್ಯತೆ ನೀಡಬೇಕು. ಬೆತ್ತಲೆ, ಅರೆಬೆತ್ತಲೆ, ಲೈಂಗಿಕಕ್ರಿಯೆಗಳ ಚಿತ್ರ ಮತ್ತು ವಿಡಿಯೊಗಳಿಗೆ ಸಂಬಂಧಿಸಿದ ದೂರುಗಳ ವಿಭಾಗ

* ದೂರು ಬಂದ 24 ಗಂಟೆಗಳ ಒಳಗೆ ಕಂಟೆಂಟ್‌ಗಳನ್ನು ತೆರವು ಮಾಡಬೇಕು

* ಸಂತ್ರಸ್ತೆ ನೇರವಾಗಿ ಅಥವಾ ಸಂತ್ರಸ್ತೆಯ ಪರವಾಗಿ ದೂರು ನೀಡಬಹುದು

2.2 ಒಟಿಟಿ ಪ್ಲಾಟ್‌ಫಾರಂಗಳು

* ಕಂಟೆಂಟ್ ನಿರ್ಮಾಣ ಮತ್ತು ಪ್ರಸಾರದಲ್ಲಿ ಒಟಿಟಿ ಪ್ಲಾಟ್‌ಫಾರಂಗಳು ಸ್ವಯಂನಿಯಂತ್ರಣ ವ್ಯವಸ್ಥೆ ರೂಪಿಸಿಕೊಳ್ಳಬೇಕು

* ಕಂಟೆಂಟ್‌ಗಳನ್ನು ವಯಸ್ಸು ಆಧರಿತ ವರ್ಗೀಕರಣ ಮಾಡಬೇಕು. ಯು, ಯು/ಎ 7+, ಯು/ಎ 13+, ಯು/ಎ 16+ ಮತ್ತು ಎ (ವಯಸ್ಕ) ಕಂಟೆಂಟ್‌ಗಳೆಂದು ವರ್ಗೀಕರಣ ಮಾಡಬೇಕು

* ಯು/ಎ 13+ ಮತ್ತು ಅದಕ್ಕಿಂತ ಹೆಚ್ಚಿನ ಕಂಟೆಂಟ್‌ಗಳಿಗೆ ಹೆತ್ತವರು ಲಾಕ್‌ ಮಾಡಲು ಸಾಧ್ಯವಾಗುವ ವ್ಯವಸ್ಥೆ ಇರಬೇಕು

* ಎ (ವಯಸ್ಕ) ಕಂಟೆಂಟ್‌ಗಳಿಗೆ ವಯಸ್ಸು ದೃಢೀಕರಣ ವ್ಯವಸ್ಥೆಯನ್ನು ರೂಪಿಸಬೇಕು; ಇದು ವಿಶ್ವಾಸಾರ್ಹವಾಗಿರಬೇಕು

2.3 ಡಿಜಿಟಲ್ ನ್ಯೂಸ್ ಪೋರ್ಟಲ್‌ಗಳು

* ಭಾರತೀಯ ಪ್ರೆಸ್ ಕೌನ್ಸಿಲ್‌ನ ನಿಯಮಗಳು ಮತ್ತು ಕೇಬಲ್ ಟಿವಿ ನೆಟ್‌ವರ್ಕ್ ನಿಯಂತ್ರಣ ಕಾಯ್ದೆಯ ಕಾರ್ಯಕ್ರಮ ಸಂಹಿತೆಗಳು ಡಿಜಿಟಲ್ ನ್ಯೂಸ್ ಅನ್ವಯ.

* ಪೋರ್ಟಲ್‌ಗಳ ಮಾಲೀಕತ್ವವನ್ನು ಬಹಿರಂಗಪಡಿಸಬೇಕು

* ಪಬ್ಲಿಷರ್‌ಗಳು ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರಬೇಕು. ದೂರು ಪರಿಹಾರ ಅಧಿಕಾರಿಯನ್ನು ನೇಮಕ ಮಾಡಬೇಕು. ದೂರು ಬಂದ 15 ದಿನಗಳ ಒಳಗೆ, ಅವುಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಬೇಕು

* ಹಲವು ಪಬ್ಲಿಷರ್‌ಗಳು ಸೇರಿ, ಎರಡನೇ ಹಂತದ ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಗಣ್ಯವ್ಯಕ್ತಿಗಳು ಈ ಮಂಡಳಿಯಲ್ಲಿ ಇರಬೇಕು. ಪಬ್ಲಿಷರ್‌ ಸ್ವಯಂ ನಿಯಂತ್ರಣ ವ್ಯವಸ್ಥೆಯು 15 ದಿನಗಳ ಒಳಗೆ ಪರಿಹರಿಸದ ದೂರುಗಳನ್ನು, ಈ ಮಂಡಳಿಯು ಪರಿಹರಿಸಬೇಕು.

***

ಎಲ್ಲಾ ಸಾಮಾಜಿಕ ಮಾಧ್ಯಮಗಳು ಭಾರತದ ಕಾನೂನುಗಳಿಗೆ ಬದ್ಧವಾಗಿರಬೇಕು. ಇಂದು ಹೊಸ ನಿಯಮಗಳನ್ನು ಘೋಷಿಸಲಾಗಿದೆ. ದೂರು ಪರಿಹಾರ ವ್ಯವಸ್ಥೆಗೆ ಸಾಂಸ್ಥಿಕ ರೂಪ ನೀಡಿರುವ ಕಾರಣ ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ. ಡಿಜಿಟಲ್ ಮಾಧ್ಯಮಗಳ ಮೇಲೆ ನೀತಿ ಸಂಹಿತೆ ಜಾರಿ ಮಾಡಿರುವುದು ಮತ್ತು ಮೂರು ಹಂತದ ನಿಯಂತ್ರಣ ವ್ಯವಸ್ಥೆ ರೂಪಿಸಿರುವದು ಸ್ವಾಗತಾರ್ಹ ಕ್ರಮ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

 

ಅಸಭ್ಯ, ಅಶ್ಲೀಲ ಕಂಟೆಂಟ್‌ಗಳನ್ನು ಪ್ರಸಾರ ಮಾಡುತ್ತಿದ್ದ ಒಟಿಟಿ ಪ್ಲಾಟ್‌ಫಾರಂಗಳ ಮೇಲೆ ಇಂತಹ ನಿಯಂತ್ರಣದ ಅವಶ್ಯಕತೆ ಇತ್ತು

 @SrivastvaSaloni

ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲೆಂದೇ ಸರ್ಕಾರ ಈ ನಿಯಮಗಳನ್ನು ರೂಪಿಸಿದೆ. ಇದು ಸ್ವಾಗತಾರ್ಹ. 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸುಳ್ಳನ್ನು ಸರ್ಕಾರವೇ ಸೃಷ್ಟಿಸಿದೆ. ಈ ಸುಳ್ಳಿನ ಮೂಲಕರ್ತೃವನ್ನು ಸರ್ಕಾರವು ಶಿಕ್ಷಿಸಲಿದೆ

 @3Eamiya

ನಮ್ಮ ಅಭಿವ್ಯಕ್ತಿ ಮತ್ತು ವೀಕ್ಷಿಸುವ ಹಕ್ಕೂ ಈಗ ಸರ್ಕಾರದ ಕೈಯಲ್ಲಿದೆ. ಇದು ದುರಂತ

 @SoultakerAsura

ಸರ್ಕಾರದ ಸುಳ್ಳುಗಳನ್ನು ಬಹಿರಂಗಪಡಿಸುತ್ತಿದ್ದ ಸ್ವತಂತ್ರ ಪತ್ರಕರ್ತರನ್ನು ನಿಯಂತ್ರಿಸಲು ಈ ನಿಯಮಗಳನ್ನು ರೂಪಿಸಲಾಗಿದೆ. ಆದರೆ ಸುಳ್ಳುಸುದ್ದಿಗಳನ್ನು ಹರಡುವ ಬಿಜೆಪಿಯ ಐಟಿ ವಿಭಾಗಕ್ಕೆ ಮಾತ್ರ ರಕ್ಷಣೆ ನೀಡಲಾಗಿದೆ

 @haris__016

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು