ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಸಂಸದರೆಲ್ಲರ ರಾಜೀನಾಮೆ? ಪಕ್ಷದ ಮುಂದೆ ಪ್ರಸ್ತಾವವಿಟ್ಟ ಯುವ ಎಂ.ಪಿಗಳು

ಪಕ್ಷದ ಮುಂದೆ ಪ್ರಸ್ತಾವವಿಟ್ಟ ಯುವ ಎಂ.ಪಿಗಳು: ಪಕ್ಷದ ನಾಯಕತ್ವದ ಬೆಂಬಲ ಇಲ್ಲ
Last Updated 28 ಮಾರ್ಚ್ 2023, 19:36 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಬಳಿಕ ಸುದೀರ್ಘ ರಾಜಕೀಯ ಹೋರಾಟಕ್ಕೆ ಪಕ್ಷವು ಸಜ್ಜಾಗಿದೆ. ರಾಹುಲ್ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದ್ದನ್ನು ಖಂಡಿಸಿ ಪಕ್ಷದ ಎಲ್ಲ ಸಂಸದರೂ ರಾಜೀನಾಮೆ ನೀಡಬೇಕು ಎಂಬ ಸಲಹೆಯನ್ನು ಕೆಲವು ಯುವ ಸಂಸದರು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ರವನೀತ್ ಬಿಟ್ಟು ಅವರು, ಪಕ್ಷದ ಮುಖಂಡರು ಕಳೆದ ಶುಕ್ರವಾರ ನಡೆಸಿದ ಸಭೆಯಲ್ಲಿ ಮೊದಲ ಬಾರಿಗೆ ಈ ವಿಚಾರ
ವನ್ನು ಮುಂದಿಟ್ಟಿದ್ದಾರೆ. ಅನರ್ಹತೆಯ ಅಧಿಸೂಚನೆ ಪ್ರಕಟವಾದ ಕೆಲವೇ ತಾಸುಗಳಲ್ಲಿ ಈ ಸಭೆ ನಡೆದಿತ್ತು. ಬಿಟ್ಟು ಅವರು ಮುಂದಿಟ್ಟ ಪ್ರಸ್ತಾವವನ್ನು ಪಕ್ಷದ ಸಂಸದ ಮಾಣಿಕಂ ಟ್ಯಾಗೋರ್‌ ಬೆಂಬಲಿಸಿದರು.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದರು.

ಸಂಸದೀಯ ಪಕ್ಷದ ಸಭೆಯಲ್ಲಿ ಈ ವಿಚಾರ ಇನ್ನೂ ಚರ್ಚೆಗೆ ಬಂದಿಲ್ಲ ಎಂದು ಪ್ರಧಾನ ಕಾರ್ಯದರ್ಶಿಯೊಬ್ಬರು
‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಈ ವಿಚಾರದ ಚರ್ಚೆ ಶೀಘ್ರದಲ್ಲಿಯೇ ನಡೆಯುವ ಸಂಭವವೂ ಇಲ್ಲ ಎಂದು ಅವರು ಹೇಳಿದ್ದಾರೆ. ಸಾಮೂಹಿಕ ರಾಜೀನಾಮೆಯ ವಿಚಾರವು ಕಾಂಗ್ರೆಸ್‌ನ 10ಕ್ಕೂ ಹೆಚ್ಚು ಸಂಸದರು ನಡೆಸಿದ ಅನೌಪಚಾರಿಕ ಸಭೆಯಲ್ಲಿ ಮುನ್ನೆಲೆಗೆ ಬಂದಿದೆ. ಬಳಿಕ ಅದಕ್ಕೆ ಒಂದಷ್ಟು ಬೆಂಬಲವೂ ವ್ಯಕ್ತವಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಸದಸ್ಯರು ಸೋಮವಾರ ಮತ್ತು ಮಂಗಳವಾರ ಸಭೆ ನಡೆಸಿದ್ದಾರೆ. ಆದರೆ, ಸಾಮೂಹಿಕ ರಾಜೀನಾಮೆ ವಿಚಾರವು ಚರ್ಚೆಗೆ ಬಂದಿಲ್ಲ. ಸಾಮೂಹಿಕ ರಾಜೀನಾಮೆಯು ರಾಜಕೀಯವಾಗಿ ಚಾತುರ್ಯದ ನಡೆ ಅಲ್ಲ ಎಂದು ಪಕ್ಷದ ನಾಯಕತ್ವವು ಹೇಳಿದೆ ಎನ್ನಲಾಗಿದೆ.

ರಾಹುಲ್ ಅವರಿಗೆ ಬೆಂಬಲವಾಗಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೇವೆ. ಆದರೆ, ಈ ದಿಸೆಯಲ್ಲಿ ಒತ್ತಡ ಹೆಚ್ಚಿಸಿದರೆ ಪಕ್ಷಕ್ಕೆ ಮುಜುಗರವಾಗಬಹುದು ಎಂದು ಪಕ್ಷದ ನಾಯಕರು ಹೇಳಿದ್ದಾರೆ ಎಂದು ಆ ಸಂಸದ ತಿಳಿಸಿದ್ದಾರೆ.

ಗಾಂಧಿ ಕುಟುಂಬದವರು ಹಿನ್ನೆಲೆಗೆ ಸರಿದಿರುವ ಕಾರಣ ಭಿನ್ನಮತ ಕಾಣಿಸಿಕೊಂಡಿದೆ ಮತ್ತು ಉತ್ತರದಾಯಿತ್ವದ ಕೊರತೆ ಇದಕ್ಕೆ ಕಾರಣ ಎಂದು ರಾಹುಲ್ ಅವರಿಗೆ ಆಪ್ತರಾಗಿರುವ ಸಂಸದರೊಬ್ಬರು ಹೇಳಿದ್ದಾರೆ. ‘ಪಕ್ಷದ ವ್ಯವಹಾರಗಳಲ್ಲಿ ರಾಹುಲ್ ಅವರು ನೇರವಾಗಿ ಭಾಗಿಯಾಗದೇ ಇದ್ದರೆ ಹೆಚ್ಚಿನ ಚಟುವಟಿಕೆ ಕಷ್ಟ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಜ್‌ಘಾಟ್‌ನಲ್ಲಿ ನಡೆದ ಸಂಕಲ್ಪ ಸತ್ಯಾಗ್ರಹದಲ್ಲಿ ಕಾರ್ಯಕರ್ತರ ಸಂಖ್ಯೆ ಕಡಿಮೆ ಇದ್ದುದಕ್ಕೂ ಇದೇ ಕಾರಣ ಎಂದು ಅವರು ಹೇಳಿದ್ದಾರೆ. ರಾಜ್‌ಘಾಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 500ಕ್ಕೂ ಕಡಿಮೆ ಜನರಿದ್ದರು.

ಬಂಗಲೆ ತೆರವು: ನೋಟಿಸ್‌ ಪಾಲಿಸುವುದಾಗಿ ರಾಹುಲ್‌ ಹೇಳಿಕೆ

ಅಧಿಕೃತ ನಿವಾಸ ತೆರವುಗೊಳಿಸಲು ಲೋಕಸಭಾ ಕಾರ್ಯಾಲಯವು ನೀಡಿದ ನೋಟಿಸ್‌ ಅನ್ನು ಪಾಲಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ರಾಹುಲ್ ಅವರನ್ನು ಅವಮಾನಿಸುವ ಉದ್ದೇಶದಿಂದ ಸರ್ಕಾರ ಕೈಗೊಂಡ ಕ್ರಮ ಇದು ಎಂದು ಕಾಂಗ್ರೆಸ್‌ ಟೀಕಿಸಿದೆ. ರಾಹುಲ್ ಅವರು ಬಂಗಲೆಯನ್ನು ಏಪ್ರಿಲ್‌ 22ಕ್ಕೆ ಮೊದಲು ತೆರವು ಮಾಡಬೇಕಾಗಿದೆ.

ಲೋಕಸಭೆಯ ವಸತಿ ಸಮಿತಿಯು ಈ ನಿರ್ಧಾರ ಕೈಗೊಂಡಿದೆ. ರಾಹುಲ್ ಅವರು ತುಘಲಕ್ ಲೇನ್‌ನ 12ನೇ ಸಂಖ್ಯೆಯ ಬಂಗಲೆಯಲ್ಲಿ 2005ರಿಂದ ವಾಸವಿದ್ದಾರೆ. ಝಡ್‌+ ಭದ್ರತೆ ಹೊಂದಿರುವ ರಾಹುಲ್ ಅವರ ಭದ್ರತೆಯ ಮೇಲೆಯೂ ಬಂಗಲೆ ತೆರವು ಪರಿಣಾಮ ಬೀರಬಹುದು ಎಂದು ಕೂಡ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.

ವಿವಿಧ ಬೆಳವಣಿಗೆಗಳು

l ಅನರ್ಹತೆಯನ್ನು ಖಂಡಿಸಿ ಕಾಂಗ್ರೆಸ್‌ ಸಂಸದರು ಮತ್ತು ಕಾರ್ಯಕರ್ತರು ದೆಹಲಿಯ ಕೆಂಪುಕೋಟೆಯ ಬಳಿ ಮಂಗಳವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು. ಆದರೆ, ಹಲವು ಸಂಸದರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು

l ಸರ್ಕಾರ ನಿವಾಸವನ್ನು ತೆರವು ಮಾಡುವಂತೆ ರಾಹುಲ್‌ ಅವರಿಗೆ ನೋಟಿಸ್‌ ನೀಡಿದ್ದನ್ನು ಖಂಡಿಸಿ, ಉತ್ತರ ಪ್ರದೇಶ ಕಾಂಗ್ರೆಸ್‌ ವಿನೂತನ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಮನೆಯ ಮುಂದೆ, ‘ನಮ್ಮ ಮನೆ, ರಾಹುಲ್‌ ಗಾಂಧಿಯ ಮನೆ’ ಎಂಬ ಪೋಸ್ಟರ್‌ ಅಂಟಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಿಂದಲೇ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ

l ಸಂಸದ ಸ್ಥಾನದಿಂದ ರಾಹುಲ್ ಅವರನ್ನು ಅನರ್ಹಗೊಳಿಸುವಲ್ಲಿ ಪಕ್ಷಪಾತ ತೋರಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ ಎಂದು ಮೂಲಗಳು ಹೇಳಿವೆ

l ಏಪ್ರಿಲ್‌ನಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ಕರೆಯಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT