ದೆಹಲಿಯ ಖುತುಬ್ ಮಿನಾರ್ ಬಳಿ ಹನುಮಾನ್ ಚಾಲೀಸಾ ಪಠಣ: 30 ಮಂದಿ ಬಂಧನ, ಬಿಡುಗಡೆ

ನವದೆಹಲಿ: ಇಲ್ಲಿನ ಐತಿಹಾಸಿಕ ಸ್ಮಾರಕ ಖುತುಬ್ ಮಿನಾರ್‌ಗೆ ‘ವಿಷ್ಣು ಸ್ತಂಭ’ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಸ್ಮಾರಕದ ಆವರಣದಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದ ಬಲಪಂಥೀಯ ಸಂಘಟನೆಯ 30 ಸದಸ್ಯರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.
‘ವಾಹನ ಸಂಚಾರಕ್ಕೆ ತಡೆಯೊಡ್ಡಿ ಅವರು ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರಿಂದ ವಶಕ್ಕೆ ಪಡೆಯಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪ್ರತಿಭಟನನಿರತರು ಜೈ ಶ್ರೀರಾಮ್ ಘೋಷಣೆ ಕೂಗಿ, ಹನುಮಾನ್ ಚಾಲೀಸಾ ಪಠಿಸಿದರು. ಖುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭವೆಂದು ಮರು ನಾಮಕರಣ ಮಾಡಬೇಕೆಂದು ಒತ್ತಾಯಿಸುವ ಫಲಕ ಪ್ರದರ್ಶಿಸಿದರು.
‘ಈಗ ಖುತುಬ್ ಮಿನಾರ್ ಎಂದು ಕರೆಯುತ್ತಿರುವ ವಿಷ್ಣು ಸ್ತಂಭವನ್ನು ರಾಜ ವಿಕ್ರಮಾದಿತ್ಯ ನಿರ್ಮಿಸಿದ್ದರು. ಆದರೆ, ಇದನ್ನು ತಾನೇ ನಿರ್ಮಿಸಿದ್ದಾಗಿ ಕುತುಬುದ್ದೀನ್ ಐಬಕ್ ಘೋಷಿಸಿಕೊಂಡ. ಮಿನಾರ್ ಆವರಣದಲ್ಲಿ 27 ದೇವಸ್ಥಾನಗಳಿದ್ದವು. ಅವು ಐಬಾಕ್ ದಾಳಿಯಿಂದ ನಾಶ ಗೊಂಡವು. ಮಿನಾರ್ ಆವರಣದಲ್ಲಿ ಇಂದಿಗೂ ಹಿಂದೂ ದೇವತೆಗಳ ಮೂರ್ತಿಗಳನ್ನು ಕಾಣಬಹುದು. ಹೀಗಾಗಿ ಖುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭವೆಂದು ಘೋಷಣೆ ಮಾಡಬೇಕೆಂಬುದು ನಮ್ಮ ಆಗ್ರಹ’ ಎಂದು ಯುನೈಟೆಡ್ ಹಿಂದೂ ಫ್ರಂಟ್‌ನ ಅಂತರರಾಷ್ಟ್ರೀಯ ಕಾರ್ಯನಿರ್ವಾಹಕ ಅಧ್ಯಕ್ಷ ಭಗವಾನ್ ಗೋಯಲ್ ಹೇಳಿದರು.
ಮಿನಾರ್ ಆವರಣದಲ್ಲಿ ವಿವಿಧೆಡೆ ಇರುವ ದೇವತೆಗಳ ಮೂರ್ತಿಗಳನ್ನು ಒಂದೆಡೆ ಇರಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಓದಿ... ದೆಹಲಿಯಲ್ಲಿ ಮದ್ಯದ ಹೋಮ್ ಡೆಲಿವರಿ.. ಸಂಪುಟ ಸಭೆ ಅನುಮೋದನೆ ಬಳಿಕ ಜಾರಿ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.