ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ವಾರ್ಷಿಕ ಸಭೆ, ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಇದೇ ತಿಂಗಳ ಕೊನೆಯಲ್ಲಿ ಹರಿಯಾಣದ ಸಮಾಲ್ಖದಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ವಕ್ತಾರ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಸಭೆಯ ಕಾರ್ಯಸೂಚಿ ಸಂಬಂಧ ಇದೇ 12ರಿಂದ 14ರವರೆಗೆ ನಡೆಯುವ ಮೂರು ದಿನಗಳ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಅಲ್ಲದೆ ಸಂಘದ ಕಳೆದ ವರ್ಷದ ಚಟುವಟಿಕೆಗಳ ಪರಾಮರ್ಶೆ, ಮುಂದಿನ ಯೋಜನೆಗಳು, ಮುಂದಿನ ವರ್ಷ ನಡೆಯುವ ಸಂಘದ ಶತಮಾನೋತ್ಸವದ ರೂಪರೇಷೆ ಕುರಿತು ಸರಣಿ ಚಿಂತನಾ ಗೋಷ್ಠಿಗಳು ನಿಗದಿಯಾಗಿವೆ.
ಮೂರು ದಿನಗಳ ಈ ಸಭೆಯಲ್ಲಿ ಕಾರ್ಯಕರ್ತರ ನಿರ್ಮಾಣ ಮತ್ತು ತರಬೇತಿ, ಶಿಕ್ಷಾ ವರ್ಗಗಳ (ವಾರ್ಷಿಕ ಶಿಬಿರಗಳು) ಯೋಜನೆ ಮತ್ತು ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ದೇಶದ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಜತೆಗೆ ಪ್ರಮುಖ ವಿಷಯಗಳ ಕುರಿತು ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ. ಈ ಸಭೆಯಲ್ಲಿ 1,400 ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅಂಬೇಕರ್ ಹೇಳಿದ್ದಾರೆ.
ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಂಘದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು, ರಾಜ್ಯ ಮತ್ತು ವಲಯ ಕಾರ್ಯಕಾರಿಗಳು, ಎಬಿಪಿಎಸ್ ಚುನಾಯಿತ ಪ್ರತಿನಿಧಿಗಳು, ವಿಭಾಗ ಪ್ರಚಾರಕರು ಸೇರಿ ಸಂಘಟನೆಯ ಸಂಯೋಜಿತ ಸಂಘಟನೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಿಂದಿನ ಸಭೆಯಲ್ಲಿ ದೇಶದ ಪ್ರತಿ ಮಂಡಲದಲ್ಲಿ ಸಂಘದ ಅಸ್ತಿತ್ವ ಹೊಂದುವ ಮೂಲಕ ಒಂದು ಲಕ್ಷ ಶಾಖೆ ಸ್ಥಾಪಿಸುವ ಗುರಿಯನ್ನು ಮೂರು ವರ್ಷಗಳಲ್ಲಿ ಸಾಧಿಸುವ ಬಗ್ಗೆ ಪ್ರಮುಖ ಚರ್ಚೆ ನಡೆದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.