ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಪುರ್ ಪ್ರಕರಣ: ಸುಪ್ರೀಂ ಹೇಳಿಕೆಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ಟೀಕೆ

‘ಲಕ್ಷ್ಮಣ ರೇಖೆ ದಾಟಿದ ನ್ಯಾಯಮೂರ್ತಿಗಳು’
Last Updated 5 ಜುಲೈ 2022, 16:18 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ಹೇಳಿಕೆಯನ್ನು ದುರದೃಷ್ಟಕರ ಹಾಗೂ ಅನಿರೀಕ್ಷಿತ’ ಎಂದು ಹೇಳಿರುವ ವಿವಿಧ ಹೈಕೋರ್ಟ್‌ಗಳ 15 ನಿವೃತ್ತ ನ್ಯಾಯಮೂರ್ತಿಗಳು, 77 ನಿವೃತ್ತ ಅಧಿಕಾರಿಗಳು ಹಾಗೂ ಸೇನೆಯ 25 ನಿವೃತ್ತ ಅಧಿಕಾರಿಗಳು, ‘ನ್ಯಾಯಮೂರ್ತಿಗಳು ಲಕ್ಷ್ಮಣ ರೇಖೆ ದಾಟಿದ್ದಾರೆ’ ಎಂದು ಪ್ರತಿಪಾದಿಸಿದ್ದಾರೆ.

ಈ ಸಂಬಂಧ 117 ಮಂದಿಯ ಪರವಾಗಿ ಮೂರು ಪುಟಗಳ ಹೇಳಿಕೆ ಬಿಡುಗಡೆ ಮಾಡಿರುವ ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ರವೀಂದ್ರನ್‌ ಹಾಗೂ ಕೇರಳ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಆನಂದ ಬೋಸ್‌, ‘ನ್ಯಾಯಮೂರ್ತಿಗಳ ಹೇಳಿಕೆಯುದೇಶ ಮತ್ತು ವಿದೇಶಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ’ ಎಂದು ಹೇಳಿದ್ದಾರೆ.

ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕ್ಷಿತಿಜ್‌ ವ್ಯಾಸ್‌, ಗುಜರಾತ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್‌.ಎಂ.ಸೋನಿ, ರಾಜಸ್ಥಾನ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಎಸ್‌.ರಾಥೋಡ್‌, ಪ್ರಶಾಂತ್ ಅಗರವಾಲ್‌, ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್‌.ಎನ್‌.ಧಿಂಗ್ರಾ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಆರ್‌.ಎಸ್‌.ಗೋಪಾಲನ್‌, ಎಸ್.ಕೃಷ್ಣಕುಮಾರ್‌, ಮಾಜಿ ರಾಯಭಾರಿ ನಿರಂಜನ್‌ ದೇಸಾಯಿ, ನಿವೃತ್ತ ಡಿಜಿಪಿಗಳಾದ ಎಸ್‌.ಪಿ.ವೈದ್‌, ಬಿ.ಎಲ್‌.ವೋಹ್ರಾ, ನಿವೃತ್ತಲೆಫ್ಟಿನೆಂಟ್‌ ಜನರಲ್‌ ವಿ.ಕೆ.ಚತುರ್ವೇದಿ, ಏರ್‌ ಮಾರ್ಷಲ್‌ (ನಿವೃತ್ತ) ಎಸ್‌.ಪಿ.ಸಿಂಗ್‌ ಅವರೂ ಹೇಳಿಕೆಗೆ ಸಹಿ ಹಾಕಿದ್ದಾರೆ.

‘ಇಬ್ಬರು ನ್ಯಾಯಮೂರ್ತಿಗಳ ಹೇಳಿಕೆಯು ನ್ಯಾಯಾಂಗದ ನೈತಿಕತೆಗೆ ಹೊಂದಿಕೆ ಆಗುವುದಿಲ್ಲ. ಅವರ ಅಭಿಪ್ರಾಯಗಳು ಎಲ್ಲ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿ ಎಲ್ಲ ಕಡೆ ಚರ್ಚೆಗೆ ಗ್ರಾಸವಾಗಿದೆ. ತೀರ್ಪಿನ ಭಾಗವಾಗಿಲ್ಲದ ನ್ಯಾಯಮೂರ್ತಿಗಳ ಅಭಿಪ್ರಾಯಗಳು ನ್ಯಾಯಾಂಗದ ಔಚಿತ್ಯ ಹಾಗೂ ನ್ಯಾಯಸಮ್ಮತೆಗೆ ಕಪ್ಪುಚುಕ್ಕೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಇಂತಹ ಅತಿರೇಕದ ಹೇಳಿಕೆಗಳಿಂದ ನ್ಯಾಯಾಂಗದ ಘನ ಇತಿಹಾಸಕ್ಕೆ ಧಕ್ಕೆ ಉಂಟಾಗುತ್ತದೆ. ತಮ್ಮ ವಿರುದ್ಧದಪ್ರಕರಣಗಳನ್ನು ಒಂದೇ ಕಡೆ ವಿಚಾರಣೆಗೆ ನಡೆಸಬೇಕು ಎಂದು ಕೋರಿ ನೂಪುರ್‌ ಶರ್ಮಾ ಅವರುದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಮೂರ್ತಿಗಳು ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿಲ್ಲ. ಜತೆಗೆ, ಅವರು ಅರ್ಜಿಯನ್ನೇ ವಾಪಸ್‌ ಪಡೆಯುವಂತೆ ಮಾಡಿದ್ದಾರೆ. ಜತೆಗೆ,ನ್ಯಾಯಮೂರ್ತಿಗಳ ಹೇಳಿಕೆಗಳು, ಅರ್ಜಿಯಲ್ಲಿದ್ದ ಅಂಶಗಳಿಗೆ ಸಂಬಂಧಪಟ್ಟಿರಲಿಲ್ಲ. ಇಂತಹ ಹೇಳಿಕೆಗಳು ನ್ಯಾಯಾಂಗದ ಇತಿಹಾಸದಲ್ಲಿ ದುರದೃಷ್ಟಕರ ಬೆಳವಣಿಗೆ. ಇದರಿಂದ ಅತಿದೊಡ್ಡ ಪ್ರಜಾಪ್ರಭುತ್ವದ ನ್ಯಾಯ ವ್ಯವಸ್ಥೆಯಲ್ಲಿ ಅಳಿಸಲಾಗದ ಗಾಯ ಉಂಟಾಗಿದೆ’ ಎಂದು ಅವರು ಹೇಳಿದ್ದಾರೆ.

ಸುದ್ದಿವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ದಿ ಮಾತನಾಡುವಾಗ ಪ್ರವಾದಿ ಮಹಮ್ಮದರ ಕುರಿತು ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.ನೂಪುರ್ ಅವರ ಹೇಳಿಕೆ ವಿರುದ್ಧ ದೇಶದ ಹಲವೆಡೆ ಎಫ್‌ಐಆರ್‌ ದಾಖಲಾಗಿದ್ದವು. ಆ ಎಲ್ಲ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ನೂಪುರ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ.ಪಾರ್ದೀವಾಲಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ನೂಪುರ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ‘ನೂಪುರ್‌ ಶರ್ಮಾ ಅವರ ಹಿಡಿತವಿಲ್ಲದ ಮಾತು ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ. ದೇಶದಲ್ಲಿ ಈಗ ಏನಾಗುತ್ತಿದೆಯೋ ಅದಕ್ಕೆಲ್ಲಾ ಅವರೊಬ್ಬರೇ ಹೊಣೆ’ ಎಂದೂ ಹೇಳಿತ್ತು.

ನ್ಯಾಯಮೂರ್ತಿಗಳ ವಿರುದ್ಧ ಟೀಕೆ: ಅಟಾರ್ನಿ ಜನರಲ್‌ಗೆ ಪತ್ರ
ನವದೆಹಲಿ:
ನೂಪುರ್‌ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನು ಟೀಕಿಸಿರುವ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್‌.ಎನ್‌.ಡಿಂಗ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರಿಗೆ ಮನವಿ ಸಲ್ಲಿಸಲಾಗಿದೆ.

ನ್ಯಾಯಮೂರ್ತಿಗಳ ಅಭಿಪ್ರಾಯ ಕಾನೂನುಬಾಹಿರ ಹಾಗೂ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಡಿಂಗ್ರಾ ಟೀಕೆ ಮಾಡಿದ್ದರು. ಈ ಬಗ್ಗೆ ಅಟಾರ್ನಿ ಜನರಲ್‌ ಅವರಿಗೆ ಪತ್ರ ಬರೆದಿರುವ ವಕೀಲರಾದ ಸಿ.ಆರ್‌. ಜಯಾ ಸುಕಿನ್‌ ಅವರು, ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮನ್‌ ಲೆಖಿ ಹಾಗೂ ಹಿರಿಯ ವಕೀಲ ಕೆ. ರಾಮ ಕುಮಾರ್ ಅವರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದಾರೆ. ಈ ಇಬ್ಬರೂ ನ್ಯಾಯಮೂರ್ತಿಗಳ ಅಭಿಪ್ರಾಯಗಳನ್ನು ಪ್ರಶ್ನಿಸಿದ್ದರು. ‘ಈ ಮೂವರು ಸುಪ್ರೀಂ ಕೋರ್ಟ್‌ಗೆ ಅಗೌರವ ತೋರಿದ್ದಾರೆ. ನ್ಯಾಯಾಂಗಕ್ಕೆ ನಿಂದನೆ ಮಾಡಿದ್ದಾರೆ. ಹಾಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT