ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರದಲ್ಲಿ ಸೇನಾ ಜಮಾವಣೆ ತೀವ್ರ: 2019ರಂತೆ ಏನಾದರೂ ಆಗಲಿದೆಯೇ?

Last Updated 7 ಜೂನ್ 2021, 8:24 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಸೇನಾಪಡೆಗಳ ಚಲನವಲನವು ಭಾರೀ ಊಹಾಪೋಹಗಳಿಗೆ ಕಾರಣವಾಗಿದೆ. 2019ರಂತೆಯೇ ಈ ಬಾರಿಯೂ ಮಹತ್ತರವಾದದ್ದು ಸಂಭವಿಸಲಿದೆ ಎಂಬ ಶಂಕೆ ಜಮ್ಮು ಕಾಶ್ಮೀರದಲ್ಲಿ ವೇಗವಾಗಿ ಮತ್ತು ಗಾಢವಾಗಿ ಆವರಿಸುತ್ತಿದೆ.

ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು 2019ರ ಆ. 5ರಂದು ಹಿಂತೆಗೆದುಕೊಳ್ಳುವುದಕ್ಕೂ ಮೊದಲು ಕಾಶ್ಮೀರದಲ್ಲಿ ಇದೇ ರೀತಿಯ ವದಂತಿಗಳು ಹಬ್ಬಿದ್ದವು. ಕೇಂದ್ರ ತೆಗೆದುಕೊಂಡ ಮಹತ್ವದ ನಿರ್ಧಾರಕ್ಕೂ 10 ದಿನಗಳ ಮೊದಲಿನಿಂದಲೇ ಕಾಶ್ಮೀರದಲ್ಲಿ ಈಗಿನಂತೆಯೇ ಸೇನಾ ಪಡೆಗಳನ್ನು ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಕಳೆದ ಕೆಲವು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಅರೆಸೇನಾಪಡೆಗಳು ಕೇಂದ್ರಾಡಳಿತ ಪ್ರದೇಶಕ್ಕೆ ಆಗಮಿಸಿವೆ. ಉತ್ತರ ಕಾಶ್ಮೀರ ಮತ್ತು ಜಮ್ಮು ಪ್ರದೇಶದ ಕೆಲವು ಭಾಗಗಳಲ್ಲಿ ಸೇನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಕೇಂದ್ರವು 2019ರಂತೆಯೇ ಏನಾದರೂ ದೊಡ್ಡದೊಂದನ್ನು ಯೋಜಿಸುತ್ತಿದೆಯೇ ಎಂಬ ಚರ್ಚೆಗಳು ಮನೆ, ಕಚೇರಿ, ಮಾರುಕಟ್ಟೆ, ಆಟದ ಮೈದಾನ, ಸಾಮಾಜಿಕ ಮಾಧ್ಯಮಗಳಲ್ಲಿ ಆವರಿಸಿಕೊಂಡಿದೆ.

‘ಜಮ್ಮು ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡಲಾಗುತ್ತದೆ. ಕಾಶ್ಮೀರವನ್ನು ಎರಡು ಅಥವಾ ಮೂರು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗುತ್ತದೆ,’ ಎಂಬುದು ಗಾಢವಾಗಿ ಹರಡಿರುವ ಗುಲ್ಲು.

‘ಕಾಶ್ಮೀರ ಪಂಡಿತರ ಬಹುದಿನಗಳ ಬೇಡಿಕೆಯಂತೇ ಜಮ್ಮು ಕಾಶ್ಮೀರದಲ್ಲಿ ಅವರಿಗಾಗಿ ಪ್ರತ್ಯೇಕ ರಾಜ್ಯ ರಚಿಸಲಾಗುತ್ತದೆ,‘ ಎಂಬುದು ಮತ್ತೊಂದು ಬಗೆಯ ವದಂತಿ.

ಸಾಮಾನ್ಯ ಜನರಷ್ಟೇ ಅಲ್ಲ, ಪ್ರಮುಖ ರಾಜಕಾರಣಗಳೂ ಇಂಥದ್ದೇ ಅನುಮಾನಗಳನ್ನು ಬಹಿರಂಗವಾಗಿಯೇ ಹೊರಹಾಕುತ್ತಿದ್ದಾರೆ. ‌

‘ಕಳೆದ ಕೆಲವು ದಿನಗಳಿಂದ ಬರೀ ವದಂತಿಗಳದ್ದೇ ಸುದ್ದಿ. ವದಂತಿಗಳು ವದಂತಿಗಳೆಂದು ವದಂತಿಗಳಿವೆ ಎಂಬುದನ್ನು ನಾವು ನಂಬ ಬಯಸಿದ್ದೇವೆ,‘ ಎಂದು ಪೀಪಲ್ಸ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಸಜದ್‌ ಲೋನ್‌ ಟ್ವೀಟ್‌ ಮಾಡಿ ವ್ಯಂಗ್ಯವಾಡಿದ್ದಾರೆ. 2015–2018ರ ಬಿಜೆಪಿ ಪಿಡಿಪಿ ಸರ್ಕಾರದಲ್ಲಿ ಸಜದ್‌ ಲೋನ್‌ ಸಚಿವರಾಗಿದ್ದರು.

ಹೀಗೆ ಹಲವರು ಹಲವು ಬಗೆಯ ಅನುಮಾನಗಳನ್ನು ತಮ್ಮೊಳಗೆ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT