ಭಾನುವಾರ, ಸೆಪ್ಟೆಂಬರ್ 25, 2022
29 °C

ನಿಯಮ ಮೀರಿ ಮಗಳಿಗೆ ಗುತ್ತಿಗೆ ಆರೋಪ: ದೆಹಲಿ ಲೆ. ಗವರ್ನರ್ ವಜಾಕ್ಕೆ ಎಎಪಿ ಆಗ್ರಹ

ಪಿಟಿಐ/ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ (ಕೆವಿಐಸಿ) ಅಧ್ಯಕ್ಷರಾಗಿದ್ದಾಗ ಖಾದಿ ಕಾಯ್ದೆ ಉಲ್ಲಂಘಿಸಿ ತಮ್ಮ ಮಗಳಿಗೆ ವಿನ್ಯಾಸದ ಗುತ್ತಿಗೆ ನೀಡಿದ್ದರು ಎಂದು ಎಎಪಿ ಶುಕ್ರವಾರ ಆರೋಪಿಸಿದೆ.

‘ಒಳಾಂಗಣ ವಿನ್ಯಾಸ(interior design)ವೃತ್ತಿಯಲ್ಲಿ ಯಾವುದೇ ಅನುಭವ ಇರಲಿಲ್ಲವೆಂದು ಅವರ ಮಗಳು ಒಪ್ಪಿಕೊಂಡಿದ್ದಾರೆ. ಆದರೂ ಯಾವ ಆಧಾರದ ಮೇಲೆ ಖಾದಿ ಗ್ರಾಮೋದ್ಯೋಗ ಗುತ್ತಿಗೆ ನೀಡಲಾಯಿತು’ಎಂದು ಎಎಪಿ ರಾಷ್ಟ್ರೀಯ ವಕ್ತಾರ ಮತ್ತು ಸಂಸದ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ. ಕೂಡಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರನ್ನು ಹುದ್ದೆಯಿಂದ ವಜಾ ಮಾಡಿ, ಕಾನೂನಿನ ಪ್ರಕಾರ ತನಿಖೆ ನಡೆಸುವಂತೆ ಸಿಂಗ್ ಒತ್ತಾಯಿಸಿದ್ದಾರೆ.

2016ರಲ್ಲಿ ಅಮಾನ್ಯೀಕರಣಗೊಂಡಿದ್ದ ₹ 1,400 ಕೋಟಿ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಡುವಂತೆ ತಮ್ಮ ಸಹೋದ್ಯೋಗಿಗಳಿಗೆ ಒತ್ತಡ ಹೇರಿದ್ದರು ಎಂದು ಆಮ್ ಆದ್ಮಿ ಪಕ್ಷದ ಶಾಸಕ ದುರ್ಗೇಶ್ ಪಾಠಕ್ ಅವರು ಸೋಮವಾರ ದೆಹಲಿ ವಿಧಾನಸಭೆಯಲ್ಲಿ ಆರೋಪಿಸಿದ್ದರು. ಇದನ್ನೂ ಪ್ರಸ್ತಾಪಿಸಿದ ಸಂಜಯ್ ಸಿಂಗ್, ಅಂತಹ ಗಂಭೀರ ಆರೋಪ ಬಂದಾಗಲೂ ಕ್ರಮ ಕೈಗೊಂಡಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.

ಆಮ್ ಆದ್ಮಿ ಪಕ್ಷವು ಹಿರಿಯ ವಕೀಲರ ಜೊತೆ ಚರ್ಚೆ ನಡೆಸುತ್ತಿದ್ದು, ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಲು ತಯಾರಿ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

‘ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮ ಅಕ್ರಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಖಾದಿ ಗ್ರಾಮೋದ್ಯೋಗ ಮಂಡಳಿಯ ಗುತ್ತಿಗೆ ನೀಡುವಾಗ ನಿಯಮ ಪಾಲನೆಯಾಗದಿರುವ ಬಗ್ಗೆ ಸದ್ಯದಲ್ಲೇ ನ್ಯಾಯಾಲಯದ ಮೆಟ್ಟಿಲೇರುತ್ತೇವೆ’ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು