ಬುಧವಾರ, ಅಕ್ಟೋಬರ್ 21, 2020
21 °C
ರಾಜ್ಯ ಸರ್ಕಾರದ ಗಮನಕ್ಕೆ ತಾರದೇ ವಿಶ್ವವಿದ್ಯಾಲಯಕ್ಕೆ ‘ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ (ಐಒಒ)’ ಕೋರಿ ಕೇಂದ್ರಕ್ಕೆ ಪತ್ರ ಬರೆದ ಆರೋಪ

ಅಣ್ಣಾ ವಿ.ವಿ. ಕುಲಪತಿ ಸ್ಥಾನದಿಂದ ಕನ್ನಡಿಗ ಸೂರಪ್ಪ ವಜಾಕ್ಕೆ ಸ್ಟಾಲಿನ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ಎಂಜಿನಿಯರಿಂಗ್ ವಿಶ್ವವಿದ್ಯಾಲಯದ ಕುಲಪತಿ, ಕನ್ನಡಿಗ ಎಂ.ಕೆ. ಸೂರಪ್ಪ ಅವರನ್ನು ಕುಲಪತಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸೋಮವಾರ ಆಗ್ರಹಿಸಿದ್ದಾರೆ.

‘ಸೂರಪ್ಪ ಅವರು, ರಾಜ್ಯ ಸರ್ಕಾರದ ಗಮನಕ್ಕೆ ತಾರದೇ ವಿಶ್ವವಿದ್ಯಾಲಯಕ್ಕೆ ‘ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ (ಐಒಒ)’ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ಕುಲಪತಿ ಹುದ್ದೆಯಿಂದ ವಜಾಗೊಳಿಸಬೇಕು’ ಎಂದು ಸ್ಟಾಲಿನ್ ಒತ್ತಾಯಿಸಿದ್ದಾರೆ.

ಮೈಸೂರು ಮೂಲದ ಸೂರಪ್ಪ ಅವರು 2018ರಲ್ಲಿ ಅಣ್ಣಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿದ್ದು, ಅವರು ತಮಿಳುನಾಡಿಗೆ ಸೇರಿದವರಲ್ಲ ಎಂದು ವಿರೋಧಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ, ಅಣ್ಣಾ ವಿಶ್ವವಿದ್ಯಾಲಯವು ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದ್ದು, ಸ್ವಂತ ಬಲದಿಂದಲೇ ₹1,500 ಕೋಟಿಯಷ್ಟು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಹೀಗಿದ್ದೂ, ಕುಲಪತಿ ಅವರು ಕೇಂದ್ರಕ್ಕೆ ಶ್ರೇಷ್ಠತಾ ಮಾನ್ಯತಾ ನೀಡಿ ಎಂದು ಪತ್ರ ಬರೆದಿರುವುದು ಸರಿಯಲ್ಲ ಎಂದು ವಿರೋಧಪಕ್ಷಗಳು ದೂರಿವೆ.

ಒಂದು ವೇಳೆ ಕೇಂದ್ರ ಸರ್ಕಾರ ವಿಶ್ವವಿದ್ಯಾಲಯಕ್ಕೆ ಐಒಇ ನೀಡಿದ್ದಲ್ಲಿ ಈಗಿರುವ ಶೇ 69 ಮೀಸಲಾತಿಗೆ ಧಕ್ಕೆ ಒದಗಬಹುದೆಂದೂ ಡಿಎಂಕೆ ಮತ್ತು ಇತರ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಆದರೆ, ಕೇಂದ್ರ ಸರ್ಕಾರ ಮೀಸಲಾತಿ ಧಕ್ಕೆಯಾಗುವುದಿಲ್ಲವೆಂದು ಮೌಖಿಕವಾಗಿ ಭರವಸೆ ನೀಡಿದೆ. ಆದರೆ, ವಿರೋಧಪಕ್ಷಗಳು ಈ ಮಾತನ್ನು ನಂಬಲು ಸಿದ್ಧವಿಲ್ಲ.

ಮೀಸಲಾತಿಗೆ ಧಕ್ಕೆ ಇಲ್ಲ: ‘ಕೇಂದ್ರವು ಐಒಇ ನೀಡಿದರೂ, ವಿಶ್ವವಿದ್ಯಾಲಯದ ಮೀಸಲಾತಿ ನಿಯಮ ಹಿಂದಿನಂತೆಯೇ ಮುಂದುವರಿಯುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಆಗದು. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ನಿಯಮಗಳಷ್ಟೇ ಅಲ್ಲ ಬೋಧಕ ಸಿಬ್ಬಂದಿಗೂ ಸಂಬಂಧಿಸಿದ ನಿಯಮಗಳಲ್ಲಿ  ಯಾವುದೇ ಬದಲಾವಣೆ ಆಗದು’ ಎಂದು ಸೂರಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಎದ್ದಿರುವ ವಿವಾದದ ಬಗ್ಗೆ ನಾನು ಏನೂ ಹೇಳಲಾರೆ. ಅಸಹಾಯಕನಾಗಿದ್ದೇನೆ’ ಎಂದೂ ಅವರು ಹೇಳಿದರು.

ಕೇಸರಿಕರಣದ ಹುನ್ನಾರ: ‘ವಿಶ್ವವಿದ್ಯಾಲಯದ ಕುಲಪತಿ ಸೂರಪ್ಪ, ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಮತ್ತು ಮುಖ್ಯಮಂತ್ರಿ ಇಡಪ್ಪಡಿ ಕೆ. ಪಳನಿಸ್ವಾಮಿ ಅವರು ವಿಶ್ವವಿದ್ಯಾಲಯವನ್ನು ಕೇಸರಿಕರಣಗೊಳಿಸಲು ಹೊರಟಿದ್ದಾರೆ’ ಎಂದು ಸ್ಟಾಲಿನ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

‘ಒಂದು ವೇಳೆ ಇದರಲ್ಲಿ ಮುಖ್ಯಮಂತ್ರಿ ಅವರ ಪಾತ್ರವಿರದಿದ್ದರೆ, ಸೂರಪ್ಪ ಏಕಪಕ್ಷೀಯವಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಅವರನ್ನು ಕುಲಪತಿ ಹುದ್ದೆಯಿಂದ ಕೆಳಗಿಳಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿ. ಅಷ್ಟೇ ಅಲ್ಲ ಪ್ರಧಾನ ಮಂತ್ರಿಗೂ ಈ ಸಂಬಂಧ ಪತ್ರ ಬರೆಯಲಿ’ಎಂದೂ ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು