ಶನಿವಾರ, ಮೇ 21, 2022
19 °C
‘ಅನುಪಯೋಗಿ ಮುಖ್ಯಮಂತ್ರಿ‘ ಆಳ್ವಿಕೆಯಲ್ಲಿ ಯುವ ಜನರಿಗೆ ಉದ್ಯೋಗ ಸಿಗುತ್ತಿಲ್ಲ: ಎಸ್‌ಪಿ ಮುಖ್ಯಸ್ಥ ಆರೋಪ

ಪ್ರತಿ ಸಂಜೆ ರೆಕಾರ್ಡಿಂಗ್ ಕೇಳುವ ಯೋಗಿ; ಪೋನ್‌ ಕದ್ದಾಲಿಕೆ ಆರೋಪ ಮಾಡಿದ ಅಖಿಲೇಶ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Prajavani

 ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಭಾನುವಾರ ಆರೋಪಿಸಿದ್ದಾರೆ. 

‘ನನ್ನ ಮತ್ತು ನನ್ನ ಪಕ್ಷದ ಇತರ ಮುಖಂಡರ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ. ರೆಕಾರ್ಡ್‌ ಮಾಡಲಾದ ದೂರವಾಣಿ ಕರೆಗಳನ್ನು ಮುಖ್ಯಮಂತ್ರಿಯೇ ಸಂಜೆ ಹೊತ್ತು ಆಲಿಸುತ್ತಾರೆ. ಕೆಲವು ಹಿರಿಯ ಅಧಿಕಾರಿಗಳೇ ರಾಜ್ಯ ಸರ್ಕಾರದ ಕುಮ್ಮಕ್ಕಿನಂತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ’ ಎಂದು ಅಖಿಲೇಶ್‌ ಹೇಳಿದ್ದಾರೆ. ‘ಸರ್ಕಾರದ ಸೂಚನೆಯಂತೆ ದೂರವಾಣಿ ಕರೆ ಕದ್ದಾಲಿಸುತ್ತಿರುವ ಅಧಿಕಾರಿಗಳ ಹೆಸರು ನನ್ನ ಬಳಿ ಇದೆ. ವಿಧಾನಸಭಾ ಚುನಾವಣೆಯ ಬಳಿಕ, ನಮ್ಮ ಸರ್ಕಾರ ಆಳ್ವಿಕೆಗೆ ಬಂದ ನಂತರ ಈ ಅಧಿಕಾರಿಗಳ ವಿರುದ್ಧ
ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ಮೂಲನೆ ಆಗಲಿದೆ ಎಂಬುದು ಮುಖ್ಯಮಂತ್ರಿಗೆ ತಿಳಿದಿದೆ. ಹಾಗಾಗಿಯೇ, ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಹರಿಸಿ ಹತ್ಯೆ ನಡೆಸಿದ ಆರೋಪಿಯ ಅಪ್ಪ ಅಜಯ್‌ ಮಿಶ್ರಾ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ಇನ್ನೂ ಯಾಕೆ ವಜಾ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.  

ಮೀಸಲಾತಿ: ನಿಷಾದ್‌ ಎಚ್ಚರಿಕೆ
ಉತ್ತರ ಪ್ರದೇಶ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ನಿಷಾದ್‌ (ಮೀನುಗಾರರು) ಸಮುದಾಯದ ಮತಗಳು ಬಿಜೆಪಿಗೆ ಸಿಗಬೇಕಿದ್ದರೆ, ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಚುನಾವಣೆಗೆ ಮೊದಲೇ ಘೋಷಿಸಬೇಕು ಎಂದು ನಿಷಾದ್‌ ಪಕ್ಷವು ಹೇಳಿದೆ. ನಿಷಾದ್‌ ಪಕ್ಷ ಮತ್ತು ಬಿಜೆಪಿಯ ಜಂಟಿ ಸಮಾವೇಶವು ಇತ್ತೀಚೆಗಷ್ಟೇ ನಡೆದಿತ್ತು. ನಿಷಾದ್‌ ಸಮುದಾಯದ ಜನರು ರಾಮಭಕ್ತರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸಮಾವೇಶದಲ್ಲಿ ಹೇಳಿದ್ದರು. ನಿಷಾದ್‌ ಪಕ್ಷವು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾಗಿದೆ. 

ನಿಷಾದ್‌ ಪಕ್ಷದ ಅಧ್ಯಕ್ಷ ಸಂಜಯ್‌ ನಿಷಾದ್‌ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿದ್ದಾರೆ. ಸಮುದಾಯಕ್ಕೆ ಮೀಸಲಾತಿ ನೀಡಲು ಇರುವ ಸಮಸ್ಯೆಯನ್ನು ಚುನಾವಣೆಗೆ ಮುನ್ನವೇ ಬಗೆಹರಿಸಿಕೊಳ್ಳಿ ಎಂದು ಈ ಪತ್ರದಲ್ಲಿ ಹೇಳಿದ್ದಾರೆ. 

ಚುನಾವಣೆ ನಿರ್ವಹಣೆ: ದೆಹಲಿ ಮುಖಂಡರ ನಿಯೋಜನೆ
ನವದೆಹಲಿ (ಪಿಟಿಐ):
ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ, ದೆಹಲಿಯ 150ಕ್ಕೂ ಹೆಚ್ಚು ಬಿಜೆಪಿ ಮುಖಂಡರನ್ನು ಈ ಎರಡೂ ರಾಜ್ಯಗಳಿಗೆ ನಿಯೋಜನೆ ಮಾಡಲಾಗಿದೆ. 

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ 44 ವಿಧಾನಸಭಾ ಕ್ಷೇತ್ರಗಳ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಲು 100ಕ್ಕೂ ಹೆಚ್ಚು ಮುಖಂಡರನ್ನು ನಿಯೋಜನೆ ಮಾಡಲಾಗಿದೆ. ಮತಗಟ್ಟೆ ಮಟ್ಟದಲ್ಲಿ ಚುನಾವಣೆ ನಿರ್ವಹಣೆ, ತಳಮಟ್ಟದಿಂದ ಪ್ರಚಾರ, ಪಕ್ಷ– ಕಾರ್ಯಕರ್ತರ ನಡುವೆ ಸಂವಹನ ಏರ್ಪಡಿಸುವ ಜವಾಬ್ದಾರಿ ವಹಿಸಲಾಗಿದೆ. ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡಲಿರುವ ಮುಖಂಡರ ತಂಡದ ಮೇಲ್ವಿಚಾರಣೆಯನ್ನು ದೆಹಲಿ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ವಿಜೇಂದ್ರ ಗುಪ್ತಾ ಮತ್ತು ಪ್ರಧಾನ ಕಾರ್ಯದರ್ಶಿ ದಿನೇಶ್ ಪ್ರತಾಪ್ ಸಿಂಗ್ ನೋಡಿಕೊಳ್ಳಲಿದ್ದಾರೆ.

‘ಚುನಾವಣೆ ನಡೆಯುವ ರಾಜ್ಯಗಳಿಗೆ ಬೇರೆ ರಾಜ್ಯಗಳಿಂದ ಮುಖಂಡರನ್ನು ಕಳುಹಿಸುವುದು ಸಾಮಾನ್ಯ ಪ್ರಕ್ರಿಯೆ. ದೆಹಲಿಗೆ ಹತ್ತಿರದಲ್ಲಿರುವ ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ಮುಖಂಡರು ಕೆಲಸ ಮಾಡುವುದರಿಂದ ಆಯಾ ಭಾಗದ ಚುನಾವಣಾ ಫಲಿತಾಂಶದ ಮೇಲೆ ಒಂದಷ್ಟು ಪರಿಣಾಮ ಉಂಟಾಗಲಿದೆ’ ಎಂದು ಮುಖಂಡರೊಬ್ಬರು ಹೇಳಿದ್ದಾರೆ. 

ಐ.ಟಿ ದಾಳಿ ಸಮರ್ಥಿಸಿದ ಯೋಗಿ
ಲಖನೌ: ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್‌ ಅವರ ಆಪ್ತರ ಕಚೇರಿ ಮತ್ತು ಮನೆಗಳಲ್ಲಿ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಶೋಧ ನಡೆಸಿದ್ದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಸಮರ್ಥಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಐ.ಟಿ ತಪಾಸಣೆಯನ್ನು ಟೀಕಿಸಿದ್ದಾರೆ.

ಮಥುರಾದಲ್ಲಿ ಸಾರ್ವಜನಿಕ ಸಭೆ ನಡೆಸಿದ ಆದಿತ್ಯನಾಥ, ‘ಯಾರಿಗೆ ತಮ್ಮ ತಪ್ಪಿನ ಅರಿವಿರುತ್ತದೆಯೊ ಅವರಿಗೆ ಶೋಧದ ಕುರಿತು ಭಯವಿರುತ್ತದೆ. ಐದು ವರ್ಷಗಳಲ್ಲಿ ವ್ಯಕ್ತಿಯ ಸಂಪತ್ತು ಹೇಗೆ ದುಪ್ಪಟ್ಟಾಗಲು ಸಾಧ್ಯ. ಇದು ಸಾಧ್ಯವಾಗುವುದು ಕೇವಲ ಎಸ್‌ಪಿ ಆಡಳಿತದಲ್ಲಿ’ ಎಂದಿದ್ದಾರೆ. 

ವಿರೋಧ ಪಕ್ಷಗಳನ್ನು ಬೆದರಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ‘ಚುನಾವಣೆಗಳು ಹತ್ತಿರ ಆಗುತ್ತಿದ್ದಂತೆಯೇ ವಿರೋಧಿಗಳ ಮೇಲೆ ಒತ್ತಡ ತರಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಚಟವಾಗಿದೆ’ ಎಂದಿದ್ದಾರೆ. 

*
ಕೇಂದ್ರದ ಹೆಚ್ಚಿನ ಸಂಖ್ಯೆಯ ಸಚಿವರು ಉತ್ತರ ಪ್ರದೇಶಕ್ಕೆ ಬರುತ್ತಿರುವುದೇ ಬಿಜೆಪಿ ಸೋಲಲಿದೆ ಎಂಬುದರ ಸೂಚನೆ. ಮುಂದೆ, ಕೇಂದ್ರ ಸಚಿವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ.
–ಅಖಿಲೇಶ್‌ ಯಾದವ್‌, ಎಸ್‌ಪಿ ಮುಖ್ಯಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು