ಸೋಮವಾರ, ಮಾರ್ಚ್ 27, 2023
24 °C

ಕಿಟಕಿಯಿಲ್ಲದ ಕೋಣೆಯಲ್ಲಿ ಬಂದಿ; ಶಿವಸೇನಾ ಸಂಸದ ಸಂಜಯ ರಾವುತ್ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ : ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಯಲ್ಲಿರುವ ಶಿವಸೇನಾ ಸಂಸದ ಸಂಜಯ ರಾವುತ್ ಅವರ ಕಸ್ಟಡಿ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ, ರಾವುತ್ ಅವರ ಪತ್ನಿ ವರ್ಷಾ ಅವರಿಗೆ ಸಮನ್ಸ್ ಜಾರಿ ಮಾಡಿರುವ ಇ.ಡಿ., ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈ ಹಿಂದೆ ವರ್ಷಾ ಅವರನ್ನು ಒಮ್ಮೆ ವಿಚಾರಣೆಗೆ ಒಳಪಡಿಸಿದ್ದ ಇ.ಡಿ. ಈಗ ಮತ್ತಷ್ಟು ಮಾಹಿತಿ ಲಭ್ಯವಾಗಿರುವ ಕಾರಣ, ಅವರನ್ನು ಮತ್ತೆ ವಿಚಾರಣೆಗೆ ಕರೆದಿದೆ. 

ಸರಿಯಾದ ಗಾಳಿ ವ್ಯವಸ್ಥೆ ಇಲ್ಲದ ಹಾಗೂ ಕಿಟಿಕಿಗಳಿಲ್ಲದ ಕೋಣೆಯಲ್ಲಿ ತಮ್ಮನ್ನು ಬಂಧಿಸಿಡಲಾಗಿದೆ ಎಂದು ವಿಶೇಷ ನ್ಯಾಯಾಲಯದ ಎದುರು ರಾವುತ್ ಗುರುವಾರ ಆರೋಪಿಸಿದ್ದಾರೆ. ವಿಚಾರಣೆ ವೇಳೆ, ಇ.ಡಿ ವಿರುದ್ಧ ಏನಾದರೂ ದೂರುಗಳಿವೆಯೇ ಎಂದು ರಾವುತ್ ಅವರನ್ನು ಕೋರ್ಟ್ ಪ್ರಶ್ನಿಸಿತು. ಅವರು ನಿರ್ದಿಷ್ಟವಾಗಿ ಯಾವ ದೂರು ಸಲ್ಲಿಸದಿದ್ದರೂ, ತಮಗೆ ಇ.ಡಿ. ಒದಗಿಸಿರುವ ಕೋಣೆಯಲ್ಲಿ ಗಾಳಿ ಸರಿಯಾಗಿ ಬರುತ್ತಿಲ್ಲ ಹಾಗೂ ಕಿಟಕಿಗಳು ಇಲ್ಲ ಎಂದು ಹೇಳಿದರು.

ರಾವುತ್ ಅವರ ಆರೋಪಕ್ಕೆ ಸ್ಪಷ್ಟನೆ ನೀಡುವಂತೆ ಕೋರ್ಟ್ ಸೂಚಿಸಿತು. ರಾವುತ್ ಅವರನ್ನು ಹವಾನಿಯಂತ್ರಿತ (ಎ.ಸಿ) ಕೋಣೆಯಲ್ಲಿ ಇರಿಸಲಾಗಿರುವ ಕಾರಣ, ಕೋಣೆಗೆ ಕಿಟಕಿಗಳಿಲ್ಲ ಎಂದು ಇ.ಡಿ ಪರ ಹಾಜರಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೆನ್ ವಿನೆಗಾಂವ್ಕರ್ ಅವರು ಹೇಳಿದರು. ಆದರೆ ತಮಗೆ ಆರೋಗ್ಯ ಸಮಸ್ಯೆ ಇರುವುದರಿಂದ ಎ.ಸಿ ಬಳಸುವುದಿಲ್ಲ ಎಂದು ರಾವುತ್ ಹೇಳಿದರು. ರಾವುತ್ ಅವರಿಗೆ ಕಿಟಕಿ
ಯಿರುವ ಬೇರೆ ಕೋಣೆಯ ವ್ಯವಸ್ಥೆ ಮಾಡಲಾಗುವುದು ಎಂದು ಹಿತೆನ್ ಭರವಸೆ ನೀಡಿದರು. 

ಹಣ ಅಕ್ರಮ ವರ್ಗಾವಣೆ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ ದೇಶಪಾಂಡೆ ಅವರ ಎದುರು ರಾವುತ್ ಅವರನ್ನು ಹಾಜರುಪಡಿಸಿದ ಇ.ಡಿ., ಆಗಸ್ಟ್ 10ರವರೆಗೆ ಕಸ್ಟಡಿ ಅವಧಿ ವಿಸ್ತರಿಸುವಂತೆ ಕೋರಿತು. ಆದರೆ, ನ್ಯಾಯಾಧೀಶರು ಆಗಸ್ಟ್ 8ರವರೆಗೆ ಕಸ್ಟಡಿ ಅವಧಿ ವಿಸ್ತರಿಸಿದರು. 

ಪಾತ್ರಾ ಚಾಳ್‌ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ ಸಂಬಂಧ ರಾವುತ್ ಅವರನ್ನು ಇ.ಡಿ ಬಂಧಿಸಿತ್ತು. ಕಸ್ಟಡಿ ಅವಧಿ ಗುರುವಾರ ಮುಗಿದಿದ್ದರಿಂದ ಅಧಿಕಾರಿಗಳು ರಾವುತ್ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು