ಗುರುವಾರ , ಜೂನ್ 24, 2021
21 °C

ರಷ್ಯಾದ ಕೋವಿಡ್ ಲಸಿಕೆಯ ಕಾರ್ಯಕ್ಷಮತೆ, ಸುರಕ್ಷತೆ ಬಗ್ಗೆ ಮಾಹಿತಿಯಿಲ್ಲ: ಸಿಸಿಎಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಕೋವಿಡ್‌–19ರ ಚಿಕಿತ್ಸೆ ಸಲುವಾಗಿ ರಷ್ಯಾ ಅಭಿವೃದ್ಧಿ ಪಡಿಸಿರುವ ಲಸಿಕೆಯ ಕಾರ್ಯಕ್ಷಮತೆ ಬಗ್ಗೆ ತಿಳಿಸುವ ದತ್ತಾಂಶಗಳು ಲಭ್ಯವಿಲ್ಲ. ಹೀಗಾಗಿ ಲಸಿಕೆಯ ಕಾರ್ಯಕ್ಷಮತೆ ಮತ್ತು ಸುರಕ್ಷತೆ ಬಗ್ಗೆ ಅಂದಾಜಿಸಲು ಸಾಧ್ಯವಿಲ್ಲ ಎಂದು ‘ಸೆಂಟರ್‌ ಫಾರ್‌ ಸೆಲ್ಯುಲರ್‌ ಅಂಡ್‌ ಮೊಲಿಕ್ಯುಲರ್‌ ಬಯಾಲಜಿ’ (ಸಿಸಿಎಂಬಿ) ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದರು.

ಕೊರೊನಾ ವೈರಸ್ ವಿರುದ್ಧ ವಿಶ್ವದ ಮೊದಲ ಲಸಿಕೆಯನ್ನು ತಮ್ಮ ದೇಶ ಅಭಿವೃದ್ಧಿಪಡಿಸಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಕಟಿಸಿದ್ದರು. 

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಎಂಬಿ ನಿರ್ದೇಶಕ ರಾಕೇಶ್‌ ಕೆ ಮಿಶ್ರಾ, ‘ಜನರು ಅದೃಷ್ಟವಂತರಾಗಿದ್ದಲ್ಲಿ ಈ ಲಸಿಕೆ ಸಕ್ರಿಯವಾಗಿ ಕೆಲಸ ಮಾಡಬಹುದು. ಲಸಿಕೆಯ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ತಿಳಿಯಲು ಮೂರನೇ ಹಂತದ‌ ಪ್ರಯೋಗ ಬಹಳ ಮಹತ್ವದ್ದು. ಜನರ ಮೇಲೆ ಈ ಪ್ರಯೋಗ ನಡೆಸಿದ ಎರಡು ತಿಂಗಳಿನ ಬಳಿಕ ಲಸಿಕೆಯ ಕಾರ್ಯಕ್ಷಮತೆ ಖಚಿತವಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಆದರೆ ಈ ಲಸಿಕೆಗೆ ಸಂಬಂಧಿಸಿದಂತೆ ರಷ್ಯಾ ಈವರೆಗೂ 3ನೇ ಹಂತದ ಪ್ರಯೋಗ ನಡೆಸಿಲ್ಲ. ಒಂದು ವೇಳೆ ಈ ಪ್ರಯೋಗವನ್ನು ನಡೆಸಿದ್ದಲ್ಲಿ ಅದರ ಬಗ್ಗೆ ಮಾಹಿತಿ ನೀಡಬೇಕು. ಇದನ್ನು ಗೋಪ್ಯವಾಗಿ ಇಡಬಾರದು’ ಎಂದು ಅವರು ಹೇಳಿದರು.

ಈ ಲಸಿಕೆಯನ್ನು ಯಾವುದೇ ಕಂಪನಿ, ದೇಶಗಳಿಗೆ ನೀಡುವ ಮೊದಲು ಸರಿಯಾಗಿ ಪರಿಶೀಲಿಸಬೇಕು. ಈ ಲಸಿಕೆಯು ಮೂರು ಪ್ರಾಯೋಗಿಕ ಹಂತಗಳಲ್ಲಿ ಸಫಲತೆ ಕಂಡಾಗ ಮಾತ್ರ ಇತರೆ ರಾಷ್ಟ್ರಗಳಿಗೆ ನೀಡುವುದು ಒಳಿತು ಎಂದು ರಾಕೇಶ್‌ ಮಿಶ್ರಾ ಅಭಿಪ್ರಾಯ ವ್ಯಕ್ತಪಡಿಸಿದರು.

‘ಭಾರತ ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ ಲಸಿಕೆಯ ಮೊದಲನೇ ಮತ್ತು ಎರಡನೇ ಪ್ರಾಯೋಗಿಕ ಹಂತದ ಕುರಿತ ಮಾಹಿತಿಯನ್ನು ಇನ್ನೂ ಪ್ರಕಟಿಸಿಲ್ಲ. ಈ ಬಗ್ಗೆ ಆಗಸ್ಟ್‌ ಅಂತ್ಯ ಅಥವಾ ಸೆಪ್ಟೆಂಬರ್‌ ತಿಂಗಳಲ್ಲಿ ತಿಳಿಸುತ್ತೇವೆ’ ಎಂದು ಅವರು ಪ್ರತಿಕ್ರಿಯಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು