ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತೀಶ್ ಕೌಶಿಕ್ ಸಾವಿನ ವಿಚಾರ: ಫಾರಂಹೌಸ್ ಮಾಲೀಕನ ವಿಚ್ಛೇದಿತ ಪತ್ನಿಯ ವಿಚಾರಣೆ

Last Updated 12 ಮಾರ್ಚ್ 2023, 14:35 IST
ಅಕ್ಷರ ಗಾತ್ರ

ನವದೆಹಲಿ: ನಟ, ಚಿತ್ರ ನಿರ್ಮಾಪಕ ಸತೀಶ್ ಕೌಶಿಕ್ ಅವರು ಸಾವಿಗೀಡಾಗುವ ಒಂದು ದಿನ ಮುನ್ನ ದೆಹಲಿಯ ಫಾರ್ಮ್‌ಹೌಸ್‌ವೊಂದರಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದು, ಫಾರ್ಮ್‌ಹೌಸ್ ಮಾಲೀಕನ ವಿಚ್ಛೇದಿತ ಪತ್ನಿಯ ವಿಚಾರಣೆ ನಡೆಸುವುದಾಗಿ ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ.

ಈ ಕುರಿತು ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಫಾರ್ಮ್‌ಹೌಸ್ ಮಾಲೀಕನ ವಿಚ್ಛೇದಿತ ಪತ್ನಿಯು, ‘ತಮ್ಮ ಮಾಜಿ ಪತಿಯು ಸತೀಶ್ ಕೌಶಿಕ್ ಅವರಿಂದ ₹ 15 ಕೋಟಿ ಸಾಲ ಪಡೆದಿದ್ದರು. ಆದರೆ, ಅದನ್ನು ಹಿಂತಿರುಗಿಸುವ ಇಚ್ಛೆ ಅವರಿಗೆ ಇರಲಿಲ್ಲ’ ಎಂದು ದೂರಿದ್ದಾರೆ.

‘ಈ ಹೇಳಿಕೆಯನ್ನು ಆಧರಿಸಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ಬಗ್ಗೆ ನೈರುತ್ಯ ಜಿಲ್ಲೆಯ ಇನ್‌ಸ್ಟೆಕ್ಟರ್ ಮಟ್ಟದ ಅಧಿಕಾರಿಯೊಬ್ಬರಿಂದ ತನಿಖೆ ನಡೆಸಲಾಗುವುದು. ಮಹಿಳೆಯ ವಿಚಾರಣೆ ನಡೆಸಿ, ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಸತೀಶ್‌ ಕೌಶಿಕ್‌ ಅವರ ಸಾವಿನಲ್ಲಿ ಯಾವುದೇ ಶಂಕೆ ಇಲ್ಲ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು. ಅವರ ಸಾವಿಗೆ ಹೃದಯಸ್ತಂಭನ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಅವರದ್ದು ಸಹಜ ಸಾವು ಎಂದು ಪೊಲೀಸರು ತಿಳಿಸಿದ್ದರು.

‘ನನ್ನ ಪತಿ, ಕೌಶಿಕ್‌ ಅವರನ್ನು ನನಗೆ ಪರಿಚಯ ಮಾಡಿಕೊಟ್ಟಿದ್ದರು. 2022ರ ಆಗಸ್ಟ್ 23ರಂದು ಕೌಶಿಕ್‌ ಅವರು ದುಬೈನಲ್ಲಿ ನಮ್ಮನ್ನು ಭೇಟಿ ಮಾಡಿದ್ದರು. ಆಗ ₹ 15 ಕೋಟಿ ಹಿಂದಿರುಗಿಸುವಂತೆ ತನ್ನ ಪತಿಗೆ ಹೇಳಿದ್ದರು’ ಎಂದು ಮಹಿಳೆ ಮಾಹಿತಿ ನೀಡಿದ್ದಾರೆ.

‘ನಾನು ಡ್ರಾಯಿಂಗ್ ರೂಮ್‌ನಲ್ಲಿ ಇದ್ದೆ. ಅಲ್ಲಿ ಕೌಶಿಕ್ ಮತ್ತು ನನ್ನ ಪತಿ ಇಬ್ಬರೂ ಜಗಳವಾಡಿದರು. ನನ್ನ ಪತಿ ಕೌಶಿಕ್‌ಗೆ ಶೀಘ್ರದಲ್ಲೇ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದರು. ನಾನು ಈ ಬಗ್ಗೆ ನನ್ನ ಗಂಡನನ್ನು ಕೇಳಿದಾಗ ಕೋವಿಡ್ ಸಮಯದಲ್ಲಿ ಹಣವನ್ನು ಕಳೆದುಕೊಂಡಿದ್ದಾಗಿ ಅವರು ಹೇಳಿದರು. ಕೌಶಿಕ್‌ ಅವರನ್ನು ಮುಗಿಸಲು ಯೋಜಿಸುತ್ತಿರುವುದಾಗಿಯೂ ನನ್ನ ಪತಿ ಹೇಳಿದ್ದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಹೃದಯಾಘಾತಕ್ಕೆ ಒಳಗಾಗಿದ್ದ ಕೌಶಿಕ್ (66) ಅವರು ಗುರುವಾರ ಮುಂಜಾನೆ ಸಾವಿಗೀಡಾಗಿದ್ದರು. ಬುಧವಾರ ತಡರಾತ್ರಿ ಸತೀಶ್ ಅನಾರೋಗ್ಯಕ್ಕೀಡಾಗಿದ್ದರು. ತಕ್ಷಣವೇ ಅವರನ್ನು ಗುರುಗ್ರಾಮ್‌ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ತಲುಪಿದ ಕೆಲ ಕ್ಷಣಗಳ ಬಳಿಕ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

ಸತೀಶ್ ತಮ್ಮ ಮ್ಯಾನೇಜರ್ ಸಂತೋಷ್ ರೈ ಅವರೊಂದಿಗೆ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ದೆಹಲಿಗೆ ಬಂದು ಬಿಜ್ವಾಸನ್‌ನಲ್ಲಿರುವ ತಮ್ಮ ಸ್ನೇಹಿತನ ನಿವಾಸದಲ್ಲಿ ತಂಗಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ನೈಋತ್ಯ) ರಾಜೀವ್ ಕುಮಾರ್ ಶನಿವಾರ ಹೇಳಿದ್ದಾರೆ.

ಪಾರ್ಟಿ ನಡೆದಿದ್ದ ದೆಹಲಿಯ ಫಾರ್ಮ್‌ಹೌಸ್‌ನಿಂದ ಕೆಲವು ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT