ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ‘ಸಂಸತ್ ಭವನ ಶಂಕುಸ್ಥಾಪನೆ’ಗೆ ಸುಪ್ರೀಂ ಕೋರ್ಟ್‌ ಅನುಮತಿ

Last Updated 7 ಡಿಸೆಂಬರ್ 2020, 7:39 IST
ಅಕ್ಷರ ಗಾತ್ರ

ನವದೆಹಲಿ: ಹೊಸ ಸಂಸತ್‌ ಭವನವನ್ನು ನಿರ್ಮಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಸೆಂಟ್ರಲ್‌ ವಿಸ್ಟಾ’ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಸುಪ್ರೀಂ ಕೋರ್ಟ್‌ ಸೋಮವಾರ ಅನುಮತಿ ನೀಡಿದೆ.

ಈ ಭವನ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಗಳು ಇತ್ಯರ್ಥಗೊಳ್ಳುವವರೆಗೂ, ಆ ಜಾಗದಲ್ಲಿ ಯಾವುದೇ ನಿರ್ಮಾಣ ಅಥವಾ ಕಟ್ಟಡ ತೆರವುಗೊಳಿಸುವ ಕಾರ್ಯಗಳನ್ನು ನಡೆಸುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದ ನಂತರ ಈ ಶಂಕುಸ್ಥಾಪನೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ‘ಇದು ಕೇವಲ ಶಂಕುಸ್ಥಾಪನೆ ಕಾರ್ಯಕ್ರಮವಾಗಿದ್ದು, ಸದ್ಯಕ್ಕೆ ಯಾವುದೇ ನಿರ್ಮಾಣ ಕಾರ್ಯ ಆರಂಭವಾಗುವುದಿಲ್ಲ‘ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಯೋಜನೆಗೆ ನೀಡಲಾದ ಪರಿಸರ ಇಲಾಖೆ ಅನುಮತಿ ಸೇರಿದಂತೆ ಹಲವು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್‌ ಸರ್ಕಾರವನ್ನು ಪ್ರಶ್ನಿಸಿತು. ನಂತರ, ಸಂಸತ್ ಭವನ ನಿರ್ಮಾಣ ಯೋಜನೆ ಕುರಿತು ತ್ವರಿತಗತಿಯಲ್ಲಿ ಮಾಹಿತಿ ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳುವ ಜತೆಗೆ, ‘ಕೇಂದ್ರ ಸರ್ಕಾರ ಅಗತ್ಯವಾದ ದಾಖಲೆಗಳೊಂದಿಗೆ ಮುಂದುವರಿಯಬಹುದು‘ ಎಂದು ಸೂಚಿಸಿತು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ನ.5ರಂದು ನಡೆದ ವಿಚಾರಣೆ ವೇಳೆ ‘ಈ ಯೋಜನೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ‘ ಎಂದು ಹೇಳಿದ ಸುಪ್ರೀಂ ಕೋರ್ಟ್‌, ಶಂಕುಸ್ಥಾಪನೆಗೆ ಅನುಮತಿ ನೀಡುವ ಕುರಿತ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಆ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ಮೆಹ್ತಾ ಅವರು ಅವರು ಸುಪ್ರೀಂ ಕೋರ್ಟ್‌ ಕೇಳಿದ ಪ್ರಶ್ನೆಗಳಿಗೆ ಸಮರ್ಪವಾಗಿ ಉತ್ತರಿಸಿದ್ದರು. ‘ಹೊಸ ಸಂಸತ್ತಿನ ಕಟ್ಟಡ ನಿರ್ಮಾಣದ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿಲ್ಲ ಮತ್ತು ಯೋಜನೆಗಾಗಿ ಯಾವುದೇ ಕಾನೂನು ಅಥವಾ ನಿಯಮಗಳನ್ನು ಉಲ್ಲಂಘಿಸಿಲ್ಲ’ಎಂದು ಹೇಳಿದ್ದರು.

ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಹಳೆಯ ಸಂಸತ್ ಭವನದ ಪಕ್ಕದಲ್ಲಿ ತ್ರಿಕೋನಾಕೃತಿಯ ನೂತನ ಸಂಸತ್ ಭವನ ನಿರ್ಮಾಣ ಮಾಡುವುದಾಗಿ ಪ್ರಕಟಿಸಿತ್ತು. 900 ರಿಂದ 1200 ಸಂಸತ್ ಸದಸ್ಯರು ಕುಳಿತುಕೊಳ್ಳುವಂತಹ ಸಾಮರ್ಥ್ಯವಿರುವ ಈ ಭವನಕ್ಕೆ, ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಲಿದ್ದಾರೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಡಿ.5 ರಂದು ತಿಳಿಸಿದ್ದರು.

64,500 ಚದರ ಮೀಟರ್‌ ವಿಸ್ತೀರ್ಣದ ಈ ಕಟ್ಟ‌ಡ ನಿರ್ಮಾಣಕ್ಕೆ ಸುಮಾರು ₹971 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. 2022ರ ವೇಳೆಗೆ ಈ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT