ಸೋಮವಾರ, ಆಗಸ್ಟ್ 15, 2022
20 °C

ಐಐಎಸ್ಸಿ ದಾಳಿ ಪ್ರಕರಣದ ಆರೋಪಿಗೆ ‘ಸುಪ್ರೀಂ’ ಜಾಮೀನು ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani
ನವದೆಹಲಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲಿನ ದಾಳಿ ಪ್ರಕರಣದ ಆರೋಪಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ, ಪ್ರಕರಣದ ಆರೋಪಿಗಳಿಗೆ ಜೀವಾವಾಧಿ ಶಿಕ್ಷೆ ವಿಷಯದಲ್ಲಿ ಬಾಕಿ ಇರುವ ಮೇಲ್ಮನವಿಯನ್ನು ಪರಿಣಿಸುವುದಾಗಿ ಕೋರ್ಟ್ ಹೇಳಿದೆ.
 
ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್, ವಿನೀತ್ ಸರಣ್, ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು, ಐಐಎಸ್ಸಿ ದಾಳಿ ಪ್ರಕರಣದ ಆರೋಪಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ನಜ್ಮುದ್ದೀನ್ ಅಲಿಯಾಸ್ ಮುನ್ನಾಗೆ ಜಾಮೀನು ನೀಡಲು ನಿರಾಕರಿಸಿತು.
 
‘ಮುನ್ನಾ 2006ರ ಜ. 10ರಿಂದಲೂ ನಿರಂತರವಾಗಿ ಜೈಲಿನಲ್ಲಿದ್ದಾರೆ. ಅವರ ಜೀವಾವಧಿ ಶಿಕ್ಷೆಯ 14 ವರ್ಷಗಳಿಗಿಂತಲೂ ಹೆಚ್ಚು ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾರೆ ಸೇರಿದಂತೆ ಇತರ ಕಾರಣಗಳನ್ನು ಪರಿಗಣಿಸಿ ಜಾಮೀನು ನೀಡಬೇಕು’ ಎಂದು ಮುನ್ನಾ ಪರ ವಕೀಲರಾದ ಫಾರೂಕ್ ರಷೀದ್ ನ್ಯಾಯಾಲಯಕ್ಕೆ ಮನವಿ ಮಾಡಿದರು.
 
‘ಈ ಪ್ರಕರಣದಲ್ಲಿ ಆರೋಪಿಸಲಾಗಿರುವ ಆರೋಪಗಳು ಆಧಾರರಹಿತವಾಗಿದ್ದು, ಸಲ್ಲಿಸಲಾಗಿರುವ ಸಾಕ್ಷ್ಯಗಳ ಸತ್ಯಾಸತ್ಯತೆಯನ್ನು ಪರಿಗಣಿಸುವಲ್ಲಿ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ವಿಫಲವಾಗಿವೆ’ ಎಂದೂ ಅವರು ವಾದಿಸಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿಯನ್ನು ಪರಿಗಣಿಸುವುದಿಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ಪ್ರಕರಣಗಳ ಮೇಲ್ಮನವಿಯನ್ನು ಜ. 19, 2021ರಂದು ಆದ್ಯತೆಯಾಗಿ ಪರಿಗಣಿಸಲಾಗುವುದು’ ಎಂದು ತಿಳಿಸಿತು.
 
ಜ.13 ಅಥವಾ ಅದಕ್ಕೂ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕ್ಷಿಪ್ತ ಸಾರಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆರೋಪಿ ಪರ ವಕೀಲ ಮತ್ತು  ರಾಜ್ಯ ಸರ್ಕಾರಕ್ಕೆ ನ್ಯಾಯಪೀಠವು ಸೂಚಿಸಿತು.
 
ಐಐಎಸ್ಸಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು 2011ರ ಡಿಸೆಂಬರ್‌ನಲ್ಲಿ ಆರೋಪಿಗಳಾದ ಮೊಹಮ್ಮದ್ ರಜೂರ್ ರೆಹಮಾನ್ ಮತ್ತು ಇತರರಿಗೆ 7 ವರ್ಷಗಳ  ಜೈಲುಶಿಕ್ಷೆ ವಿಧಿಸಿತ್ತು. ಆದರೆ, ರಾಜ್ಯ ಹೈಕೋರ್ಟ್ 2016ರ ಮೇ ತಿಂಗಳಲ್ಲಿ ಆರೋಪಿಗಳು ದೇಶದ ವಿರುದ್ಧ ಯುದ್ಧ ನಡೆಸುವ ಸಂಚು ರೂಪಿಸಿದ್ದಕ್ಕಾಗಿ ತಪ್ಪಿತಸ್ಥರು ಎಂದು ಪರಿಗಣಿಸಿ ಜೀವಾವಾಧಿ ಶಿಕ್ಷೆಗೆ ಗುರಿಪಡಿಸಿತ್ತು.
 
‘ಆಂಧ್ರ ಪ್ರದೇಶದ ನಲ್ಗೊಂಡ ನಿವಾಸಿ ಮೊಹಮ್ಮದ್ ರಜೂರ್ ರೆಹಮಾನ್ ಅಲಿಯಾಸ್ ಉಮೇಶ್, ಬೆಂಗಳೂರಿನ ಲಕ್ಕಸಂದ್ರದ ನಿವಾಸಿ ಅಫ್ಸರ್ ಪಾಷಾ ಅಲಿಯಾಸ್ ಬಷೀರುದ್ದೀನ್, ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೊಹಮ್ಮದ್ ಇರ್ಫಾನ್ ಅವರನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು. ಇವರೆಲ್ಲರೂ ನಿಷೇಧಿತ ಲಷ್ಕರ್ ಎ ತೊಯಬಾ ಉಗ್ರ ಸಂಘಟನೆಗೆ ಸೇರಿದವರು. ಇವರು ಬೆಂಗಳೂರಿನ ಐಐಎಸ್ಸಿ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದರು’ ಎಂದು ಬೆಂಗಳೂರು ಪೊಲೀಸರು ಪ್ರತಿಪಾದಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು