ಸಮಿತಿಯ ಸದಸ್ಯರ ಬಗ್ಗೆ ರೈತ ಸಂಘಗಳ ಆಕ್ಷೇಪ: ಸುಪ್ರೀಂ ಅಸಮಾಧಾನ

ನವದೆಹಲಿ: ಕೃಷಿ ಕಾಯ್ದೆಗಳ ಕುರಿತು ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ನ್ಯಾಯಾಲಯ ರಚಿಸಿರುವ ಸಮಿತಿಯ ಸದಸ್ಯರ ಬಗ್ಗೆ ಕೆಲವು ರೈತ ಸಂಘಗಳು ಆಕ್ಷೇಪಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ‘ಈ ಸಮಿತಿಗೆ ಯಾವುದೇ ತೀರ್ಪನ್ನು ನೀಡುವಂತಹ ಅಧಿಕಾರ ನೀಡಿಲ್ಲ‘ ಎಂದು ಹೇಳಿದೆ.
ಉದ್ದೇಶಿತ ‘ಟ್ರ್ಯಾಕ್ಟರ್ ರ್‍ಯಾಲಿ‘ಗೆ ತಡೆಯಾಜ್ಞೆ ನೀಡುವ ಅರ್ಜಿ ವಿಚಾರಣೆ ನಡೆಸುವಾಗ ತಜ್ಞರ ಸಮಿತಿಯ ಕುರಿತು ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬೊಡೆ ಅವರ ನೇತೃತ್ವದ ಪೀಠ, ‘ಈ ಕೃಷಿ ವಿಚಾರಗಳಲ್ಲಿ ನ್ಯಾಯಮೂರ್ತಿಗಳು ತಜ್ಞರಲ್ಲದ ಕಾರಣ, ವಿಷಯದ ಬಗ್ಗೆ ಪರಿಣತಿ ಇರುವ ತಜ್ಞರನ್ನೊಳಗೊಂಡ ಸಮಿತಿಯನ್ನು ನೇಮಕ ಮಾಡಿದೆ‘ ಎಂದು ಹೇಳಿತು.
ಕೃಷಿ ಕಾಯ್ದೆಗಳ ಬಿಕ್ಕಟ್ಟನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ರಚಿಸಿದ ನಾಲ್ವರು ತಜ್ಞರ ಸಮಿತಿಯಲ್ಲಿ, ಕೆಲವು ಸದಸ್ಯರು ಈ ಹಿಂದೆ ಕೃಷಿ ಕಾಯ್ದೆ ಪರ ಒಲವು ವ್ಯಕ್ತಪಡಿಸಿದ್ದಾರೆ‘ ಎಂದು ಕೆಲವು ರೈತ ಸಂಘಗಳು ಆಕ್ಷೇಪಿಸಿದ್ದವು. ಸಮಿತಿ ಕುರಿತು ಆಕ್ಷೇಪಗಳು ಭುಗಿಲೇಳುತ್ತಿದ್ದಂತೆ, ಒಬ್ಬ ಸದಸ್ಯರು ಸಮಿತಿಯಿಂದ ಹೊರ ನಡೆದಿದ್ದರು.
ಈ ಆಕ್ಷೇಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ನ್ಯಾಯಾಲಯ, ಈ ಸಮಿತಿಗೆ ತೀರ್ಪು ನೀಡುವ ಅಧಿಕಾರವನ್ನೇ ನೀಡಿಲ್ಲ. ಹೀಗಿದ್ದಾಗ ಇದರಲ್ಲಿ ಪಕ್ಷಪಾತದ ಪ್ರಶ್ನೆ ಎಲ್ಲಿ ಬರುತ್ತದೆ. ನೀವು ಅರ್ಥಮಾಡಿ ಕೊಂಡಿರುವ ರೀತಿ ಸರಿ ಇಲ್ಲ. ಹಾಗೆಯೇ, ಸಮಿತಿಯ ಸದಸ್ಯರು ವ್ಯಕ್ತಪಡಿಸಿರುವ ಅಭಿಪ್ರಾಯ ನಿಮಗೆ ಒಪ್ಪಿಗೆಯಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ಬ್ರ್ಯಾಂಡ್ ಮಾಡುವುದು ಸರಿಯಲ್ಲ‘ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.
‘ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶವಿದೆ. ನ್ಯಾಯಮೂರ್ತಿಗಳಿಗೂ ಆ ಅವಕಾಶವಿದೆ. ಇದು ಒಂದು ಸಂಸ್ಕೃತಿ. ನೀವು ಒಪ್ಪದಿರುವುದನ್ನು ಹೇಳಿದ್ದಾರೆ ಎಂಬ ಮಾತ್ರಕ್ಕೆ ಆ ಜನರನ್ನು ಬ್ರ್ಯಾಂಡ್ ಮಾಡುವುದು ಸರಿಯಲ್ಲ‘ ಎಂದು ಪೀಠ ಹೇಳಿದೆ.
ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಕೇಂದ್ರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.