ತೆಲಂಗಾಣ ಸರ್ಕಾರಕ್ಕೆ ‘ಸುಪ್ರೀಂ’ ಚಾಟಿ

ನವದೆಹಲಿ: ಕೆಲಸದ ಸ್ಥಳದಲ್ಲಿ ಕಚೇರಿ ಸಿಬ್ಬಂದಿಯ ಲೈಂಗಿಕ ಕಿರುಕುಳ ತಾಳಲಾರದೆ ಮಹಿಳಾ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಪ್ರಕರಣದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳದೆ ನಿರ್ಲಕ್ಷ ತೋರಿರುವ ತೆಲಂಗಾಣ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಮೃತ ಮಹಿಳೆಯ ತಾಯಿ ಮಾಡಿರುವ ಆರೋಪಗಳ ಆಧಾರದಲ್ಲಿ ಸೂಕ್ತ ತನಿಖೆ ಕೈಗೊಂಡು ಈ ಸಂಬಂಧ ಅಂತಿಮ ವರದಿ ಸಲ್ಲಿಸಬೇಕೆಂದು ಈ ಹಿಂದೆ ನ್ಯಾಯಾಲಯವು ತೆಲಂಗಾಣ ಪೊಲೀಸರಿಗೆ ಸೂಚಿಸಿತ್ತು.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಎಸ್.ರವೀಂದ್ರ ಭಟ್ ಅವರಿದ್ದ ಪೀಠವು ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿತು.
‘ಪ್ರಕರಣದ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಬೇಕೆಂದು’ ತೆಲಂಗಾಣ ಸರ್ಕಾರದ ಪರ ವಕೀಲರು ಮಾಡಿಕೊಂಡ ಮನವಿಯನ್ನು ಪೀಠವು ತಿರಸ್ಕರಿಸಿತು.
‘ನೀವು ನೀಡಿರುವ ಕಾರಣಗಳು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂಬುದನ್ನು ಸೂಚಿಸುತ್ತಿದೆ. ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದರೆ ತನಿಖೆಯ ದಿಕ್ಕು ತಪ್ಪಿಸಿದಂತಾಗುತ್ತದೆ. ಹೀಗಾಗಿ ನಿಮ್ಮ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ’ ಎಂದು ಪೀಠವು ತಿಳಿಸಿತು.
‘ಈ ಪ್ರಕರಣದ ತನಿಖೆಯನ್ನು ಖುದ್ದಾಗಿ ಪರಿಶೀಲಿಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು’ ಎಂದು ಗೃಹ ಸಚಿವಾಲಯದ ಕಾರ್ಯದರ್ಶಿಗಳಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಿತು.
‘ನನ್ನ ಮಗಳು ತುಂಬಾ ಜಾಣೆಯಾಗಿದ್ದಳು. 23ನೇ ವಯಸ್ಸಿನಲ್ಲಿ ಬಿಎಚ್‌ಇಎಲ್‌ನಲ್ಲಿ (2009) ಉದ್ಯೋಗ ಗಿಟ್ಟಿಸಿಕೊಂಡಿದ್ದ ಆಕೆ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಳು. ಕಚೇರಿಯ ಮೇಲ್ವಿಚಾರಕ ಹಾಗೂ ಇತರ ಸಿಬ್ಬಂದಿ ತನಗೆ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಂಗಿಗೆ ತಿಳಿಸಿದ್ದಳು. ಮರಣ ಪತ್ರದಲ್ಲೂ ಇದನ್ನು ಉಲ್ಲೇಖಿಸಿದ್ದಳು. ಸಿಬ್ಬಂದಿಯ ಕಿರುಕುಳದಿಂದ ನೊಂದು ಆತ್ಮಹತ್ಯೆ (2019ರ ಅಕ್ಟೋಬರ್ 17) ಮಾಡಿಕೊಂಡಿದ್ದಳು’ ಎಂದು ಮೃತ ಮಹಿಳೆಯ ತಾಯಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದೂ ಅವರು ಒತ್ತಾಯಿಸಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.