ಸೋಮವಾರ, ಮಾರ್ಚ್ 27, 2023
31 °C

ಎನ್‌ಸಿಎಲ್‌ಎಟಿ ಆದೇಶ ಪ್ರಶ್ನಿಸಿದ್ದ ಗೂಗಲ್‌ ಮೇಲ್ಮನವಿ ತಿರಸ್ಕರಿಸಿದ ‘ಸುಪ್ರೀಂ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ತನಗೆ ₹1,337.76 ಕೋಟಿ ದಂಡ ವಿಧಿಸಿರುವುದಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಗೂಗಲ್‌ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ಗುರುವಾರ ತಿರಸ್ಕರಿಸಿದೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಹಾಗೂ ಜೆ.ಬಿ.ಪಾರ್ದೀವಾಲಾ ಅವರಿದ್ದ ನ್ಯಾಯಪೀಠವು, ಸಿಸಿಐ ವಿಧಿಸಿದ ದಂಡದ ಪೈಕಿ ಶೇ 10ರಷ್ಟು ಮೊತ್ತವನ್ನು ಏಳು ದಿನಗಳ ಒಳಗಾಗಿ ಠೇವಣಿ ಇಡುವಂತೆ ಗೂಗಲ್‌ ಕಂಪನಿಗೆ ಸೂಚಿಸಿತು.

ಅಲ್ಲದೇ, ಸಿಸಿಐ ಆದೇಶವನ್ನು ಪ್ರಶ್ನಿಸಿ ಗೂಗಲ್‌ ಸಲ್ಲಿಸಿರುವ ಅರ್ಜಿಯ ಕುರಿತು ಬರುವ ಮಾರ್ಚ್‌ 31ರ ಒಳಗಾಗಿ ನಿರ್ಧಾರ ಕೈಗೊಳ್ಳುವಂತೆ ಎನ್‌ಸಿಎಲ್‌ಎಟಿಗೆ ನ್ಯಾಯಪೀಠ ಸೂಚಿಸಿತು.

ಸಿಸಿಐ ಆದೇಶ ಪ್ರಶ್ನಿಸಿ ತಾನು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ತೀರ್ಪು ನೀಡುವಂತೆ ಕೋರಿ ಮೂರು ದಿನಗಳ ಒಳಗಾಗಿ ಎನ್‌ಸಿಎಲ್‌ಎಟಿಗೆ ಮನವಿ ಸಲ್ಲಿಸುವಂತೆ ಗೂಗಲ್‌ ಸೇರಿದಂತೆ ಎಲ್ಲ ಕಕ್ಷಿದಾರರಿಗೆ ನ್ಯಾಯಪೀಠ ನಿರ್ದೇಶನ ನೀಡಿತು.

ಆ್ಯಂಡ್ರಾಯ್ಡ್‌ ಮೊಬೈಲ್ ಕಾರ್ಯಾಚರಣೆ ವ್ಯವಸ್ಥೆ ಬಳಕೆ ಇರುವಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಗೂಗಲ್‌ ಕಂಪನಿ ಮೇಲಿತ್ತು.

ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ ಬಳಕೆದಾರರಿಂದ ಬಂದ ದೂರುಗಳನ್ನು ಆಧರಿಸಿ ಸಿಸಿಐ, 2019ರ ಏಪ್ರಿಲ್‌ನಲ್ಲಿ ತನಿಖೆಗೆ ಆದೇಶಿಸಿತ್ತು. ಗೂಗಲ್‌ನಿಂದ ಸ್ಪರ್ಧಾ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಿದ್ದ ಸಿಸಿಐ, ಕಂಪನಿಗೆ ₹ 1,337.76 ಕೋಟಿ ದಂಡ ವಿಧಿಸಿ ಆದೇಶಿಸಿತ್ತು.

ಸಿಸಿಐ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಗೂಗಲ್‌ ಎನ್‌ಸಿಎಲ್‌ಎಟಿಗೆ ಅರ್ಜಿ ಸಲ್ಲಿಸಿತ್ತು. ಈ ವಿಷಯದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿ ಜನವರಿ 4ರಂದು ಎನ್‌ಸಿಎಲ್‌ಎಟಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಗೂಗಲ್‌ ಕಂಪನಿಯು ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

ಅರ್ಜಿ ಕುರಿತ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಗೂಗಲ್‌ ವಿರುದ್ಧ ತನಿಖೆ ನಂತರ ಸಿಸಿಐ ತೆಗೆದುಕೊಂಡ ನಿರ್ಣಯಗಳು ಅದರ ಕಾರ್ಯವ್ಯಾಪ್ತಿಯನ್ನು ಮೀರಿಲ್ಲ ಅಥವಾ ಈ ವಿಷಯದಲ್ಲಿ ನ್ಯಾಯಾಲಯದ ಹಸ್ತಕ್ಷೇಪದ ಅಗತ್ಯತೆ ಇರುವುದು ಕಂಡುಬಂದಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ಸಿಸಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್‌.ವೆಂಕಟರಾಮನ್‌, ‘2018ರಲ್ಲಿ ಯುರೋಪ್‌ನ ಆಯೋಗವು ಇಂಥದೇ ನಿರ್ದೇಶನಗಳನ್ನು ನೀಡಿದ್ದು, ಗೂಗಲ್‌ ಅವುಗಳನ್ನು ಪಾಲಿಸುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಅದು ತಕರಾರು ತೆಗೆದಿದೆ’ ಎಂದರು.

ಹಿರಿಯ ವಕೀಲ ಎಂ.ಎಂ.ಸಿಂಘ್ವಿ ಅವರು ಗೂಗಲ್‌ ಪರ ವಾದ ಮಂಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು