ಬುಧವಾರ, ಆಗಸ್ಟ್ 17, 2022
26 °C

ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಜಾಮೀನು ತಿರಸ್ಕರಿಸಿದ ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕರ್ನಾಟಕದಲ್ಲಿ 2016ರಲ್ಲಿ ನಡೆದ ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮುಖ್ಯ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶನಿವಾರ ತಿರಸ್ಕರಿಸಿದೆ.

ಜಾಮೀನು ತಿರಸ್ಕರಿಸಿ 2020 ಸೆ.11ರಂದು ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಆರೋಪಿ ಕುಮಾರಸ್ವಾಮಿ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ವಿ.ಸುಬ್ರಹ್ಮಣಿಯನ್‌ ಅವರಿದ್ದ ಪೀಠವು ವಿಚಾರಣೆ ನಡೆಸಿತು. 

‘ಪ್ರಕರಣದ 18 ಆರೋಪಿಗಳ ಪೈಕಿ 17 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಪ್ರಕರಣದ ತನಿಖೆಯಲ್ಲೂ ಯಾವುದೇ ಪ್ರಗತಿ ಆಗಿಲ್ಲ’ ಎಂದು ತಿಳಿಸಿದ ಆರೋಪಿ ಪರ ವಕೀಲ ಶಶಿಕಿರಣ್‌ ಶೆಟ್ಟಿ, ಹೈಕೋರ್ಟ್‌ ಆದೇಶದ ಮಾನ್ಯತೆಯನ್ನು ಪ್ರಶ್ನಿಸಿದರು.

‘ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕೆಲ ಆರೋಪಿಗಳು ವಿಚಾರಣಾ ನ್ಯಾಯಾಲಯವು ನಡೆಸುತ್ತಿರುವ ವಿಚಾರಣೆ ಸಂದರ್ಭದಲ್ಲಿ ಗೈರಾಗುತ್ತಿದ್ದಾರೆ ಹಾಗೂ ತಪ್ಪಿಸಿಕೊಳ್ಳುತ್ತಿದ್ದಾರೆ’ ಎನ್ನುವ ಕಾರಣವನ್ನು ನೀಡಿ ಕರ್ನಾಟಕ ಹೈಕೋರ್ಟ್‌ ಜಾಮೀನು ಅರ್ಜಿ ತಿರಸ್ಕರಿಸಿತ್ತು.

‘ಆರೋಪಿ ಪ್ರಕರಣದ ಸೂತ್ರದಾರನಾಗಿದ್ದು, ಹಾನಗಲ್‌ನಲ್ಲಿರುವ ಸ್ಟ್ರಾಂಗ್‌ರೂಂ ಪ್ರವೇಶಿಸಿ ಪ್ರಶ್ನೆಪತ್ರಿಕೆಯ ಫೋಟೊ ತೆಗೆದಿದ್ದಾರೆ. ಹೀಗಾಗಿ ಇತರೆ ಆರೋಪಿಗಳಿಗೆ ಅರ್ಜಿದಾರರನ್ನು ಹೋಲಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ಉಲ್ಲೇಖಿಸಿತ್ತು. 

ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ, ಕರ್ನಾಟಕ ಶಿಕ್ಷಣ ಕಾಯ್ದೆಯಡಿ 2016 ಮಾ.21ರಂದು ಪ್ರಕರಣ ದಾಖಲಿಸಲಾಗಿತ್ತು. ಹಣಕ್ಕಾಗಿ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಹಂಚುತ್ತಿದ್ದ ಆರೋಪದಡಿ 2016 ಏ.17ರಂದು ಕುಮಾರಸ್ವಾಮಿ ಅವರನ್ನು ಬಂಧಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು