ಸೋಮವಾರ, ಮಾರ್ಚ್ 8, 2021
27 °C

ಆಧಾರ್‌ ತೀರ್ಪು ಪುನರ್‌ಪರಿಶೀಲನೆ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಧಾರ್‌ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು 2018ರಲ್ಲಿ ತಾನು ನೀಡಿದ್ದ ತೀರ್ಪನ್ನು ಪುನರ್‌ಪರಿಶೀಲಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ಐದು ಸದಸ್ಯರಿದ್ದ ಸಾಂವಿಧಾನಿಕ ಪೀಠವು, 4:1 ಬಹುಮತದೊಂದಿಗೆ ಪುನರ್‌ಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್‌ಭಾನ್‌, ಎಸ್‌.ಅಬ್ದುಲ್‌ ನಜೀರ್‌, ಬಿ.ಆರ್‌.ಗವಾಯಿ ಈ ಪೀಠದಲ್ಲಿದ್ದಾರೆ.

‘ಮಸೂದೆಯೊಂದನ್ನು ಹಣಕಾಸು ಮಸೂದೆ ಎಂಬುದಾಗಿ ಪ್ರಮಾಣೀಕರಿಸಿದ್ದನ್ನು ಪ್ರಶ್ನಿಸಿದ ಅಂಶ ಕುರಿತು ವಿಸ್ತೃತ ಪೀಠವು ತನ್ನ ನಿರ್ಣಯ ಪ್ರಕಟಿಸುವವರೆಗೆ ಈ ಪುನರ್‌ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಬಾಕಿ ಉಳಿಸಬೇಕು’ ಎಂದು ಪೀಠದಲ್ಲಿದ್ದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. 

‘ನ್ಯಾಯಪೀಠ ಬಹುಮತದೊಂದಿಗೆ ಪ್ರಕಟಿಸಿರುವ ತೀರ್ಪಿಗೆ ಸಹಮತ ವ್ಯಕ್ತಪಡಿಸಲಾಗದ ನನ್ನ ಅಸಾಮರ್ಥ್ಯದ ಬಗ್ಗೆ ನಾನು ವಿಷಾದಿಸುತ್ತೇನೆ’ ಎಂದು ನ್ಯಾ.ಚಂದ್ರಚೂಡ್‌ ಪ್ರತ್ಯೇಕ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಆಧಾರ್‌ ಕಾಯ್ದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಬಾರದಿತ್ತು. ಇದು ಸಂವಿಧಾನಕ್ಕೆ ಬಗೆದ ವಂಚನೆ’ ಎಂದು 2018ರಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು