ಗುರುವಾರ , ಅಕ್ಟೋಬರ್ 22, 2020
22 °C

ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ಸಂಬಂಧ ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮೂರು ಹೊಸ ಕೃಷಿ ಕಾನೂನುಗಳ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌, ಈ ಕುರಿತು ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಸೋಮವಾರ ನೋಟಿಸ್‌ ನೀಡಿದೆ. 

ಆರ್‌ಜೆಡಿ ರಾಜ್ಯಸಭೆ ಸದಸ್ಯ ಮನೋಜ್‌ ಜ್ಹಾ, ಡಿಎಂಕೆ ರಾಜ್ಯಸಭಾ ಸದಸ್ಯ ತಿರುಚಿ ಶಿವಾ ಹಾಗೂ ಛತ್ತೀಸ್‌ಗಡ ಕಿಸಾನ್‌ ಕಾಂಗ್ರೆಸ್‌ನ ರಾಕೇಶ್‌ ವೈಷ್ಣವ್‌ ಅವರು ಸಲ್ಲಿಸಿದ್ದ ಅರ್ಜಿಗಳನ್ನು ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಚ್‌.ಎ.ಬೊಬಡೆ ಅವರಿದ್ದ ಪೀಠವು, ನಾಲ್ಕು ವಾರದೊಳಗಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. 

ಜೊತೆಗೆ ನೋಟಿಸ್‌ಗೂ ಮುಂಚಿತವಾಗಿಯೇ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್ ಹಾಗೂ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ವಿಚಾರಣೆ ವೇಳೆ ಹಾಜರಿರುವುದನ್ನು ಕಂಡು ಪೀಠವು ಆಶ್ಚರ್ಯ ವ್ಯಕ್ತಪಡಿಸಿತು. ಈ ಕುರಿತು ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್‌, ಸರ್ಕಾರವು ಅರ್ಜಿಗಳಿಗೆ ವಿಸ್ತೃತ ಪ್ರತಿಕ್ರಿಯೆಯನ್ನು ಸಲ್ಲಿಸಲಿದೆ ಎಂದರು.   

‘ಈ ಕಾನೂನುಗಳು ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡುವ ಎಪಿಎಂಸಿ ವ್ಯವಸ್ಥೆಯನ್ನೇ ನಾಶ ಮಾಡಲಿದೆ. ರಾಜ್ಯದ ಅಧಿಕಾರವನ್ನು ಈ ಕಾನೂನುಗಳು ಕಸಿದುಕೊಳ್ಳಲಿದ್ದು, ಸುಪ್ರೀಂ ಕೋರ್ಟ್‌ ಈ ಕುರಿತು ಪರಿಶೀಲಿಸಬೇಕು’ ಎಂದು ಅರ್ಜಿದಾರರ ಪರ ವಕೀಲ ಕೆ.ಪರಮೇಶ್ವರ್‌ ವಾದಿಸಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು