ಮಂಗಳವಾರ, ಆಗಸ್ಟ್ 3, 2021
20 °C
ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದ ನ್ಯಾಯಾಲಯ

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ₹4 ಲಕ್ಷ ಪರಿಹಾರ ಕೊಡುವಿರಾ?: ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ₹4 ಲಕ್ಷ ಪರಿಹಾರ ನೀಡುವ ವಿಚಾರವಾಗಿ ಸಲ್ಲಿಕೆಯಾದ ಅರ್ಜಿಯ ಕುರಿತು ಪ್ರತಿಕ್ರಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೋಮವಾರ ತಿಳಿಸಿದೆ. ಜತೆಗೆ, ಮೃತರಿಗೆ ಮರಣ ಪ್ರಮಾಣ ಪತ್ರವನ್ನು ನೀಡುವ ಪ್ರಕ್ರಿಯೆಗೆ ಏಕರೂಪದ ನೀತಿಯನ್ನು ಪ್ರಕಟಿಸುವಂತೆಯೂ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಮರಣ ಪ್ರಮಾಣ ಪತ್ರ ವಿತರಿಸುವ ಸಂದರ್ಭ ಐಸಿಎಂಆರ್‌ ಸೂಚನೆಗಳನ್ನು ಪಾಲಿಸಬೇಕು. ಪ್ರಮಾಣಪತ್ರಗಳನ್ನು ಒದಗಿಸುವ ಸಂದರ್ಭ ಏಕರೂಪದ ನೀತಿಯನ್ನು ಅನುಸರಿಸಬೇಕು ಎಂದು ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಎಂ ಆರ್‌ ಶಾ ಒಳಗೊಂಡ ಪೀಠ ಹೇಳಿದೆ.

ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ವಿಕೋಪ ನಿರ್ವಹಣೆ ನೀತಿ, 2005ರ ಅಡಿ ಕೇಂದ್ರ ಮತ್ತು ರಾಜ್ಯ ಸರಕಾರ ₹4 ಲಕ್ಷ ಪರಿಹಾರವನ್ನು ಒದಗಿಸಬೇಕು ಮತ್ತು ಮರಣ ಪ್ರಮಾಣ ಪತ್ರ ಒದಗಿಸುವ ವೇಳೆ ಏಕನೀತಿಯನ್ನು ಅನುಸರಿಸಬೇಕು ಎಂದು ಕೋರಿ ಸಲ್ಲಿಕೆಯಾದ ಎರಡು ಪ್ರತ್ಯೇಕ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ಸರಕಾರ ಪರಿಹಾರ ಒದಗಿಸಿದರೂ, ಏಕರೂಪ ನೀತಿ ಇಲ್ಲದಿದ್ದರೆ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಈ ಸಂದರ್ಭ ಕೊರೊನಾ ವೈರಸ್‌ಗೆ ಸಂಬಂಧಿಸಿದ ರೋಗಗಳಲ್ಲದೆ ಬೇರೆ ಕಾರಣಗಳಿಂದ ಹಲವು ಸಾವುಗಳು ಸಂಭವಿಸುತ್ತಿವೆ. ಹಾಗಾಗಿ ಮರಣ ಪ್ರಮಾಣ ಪತ್ರ ನೀಡಲು ಅನುಸರಿಸುತ್ತಿರುವ ಕ್ರಮವೇನು? ರಾಜ್ಯ ಸರಕಾರಗಳ ಅಧಿಕಾರಿಗಳು ಐಸಿಎಂಆರ್ ಸೂಚನೆಗಳನ್ನು ಅನುಸರಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ಹಾಗಾಗಿ ಕೇಂದ್ರ ಸರಕಾರವು ಐಸಿಎಂಆರ್ ಸೂಚನೆಗಳ ಪಟ್ಟಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಕೋವಿಡ್ ಪೀಡಿತರ ಸಾವಿನ ಪ್ರಮಾಣ ಪತ್ರ ನೀಡಲು ಅನುಸರಿಸುತ್ತಿರುವ ಏಕರೂಪ ನೀತಿಯನ್ನು ನ್ಯಾಯಮೂರ್ತಿಗಳ ಮುಂದೆ ಪ್ರಸ್ತುತ ಪಡಿಸಬೇಕು,' ಎಂದು ಆದೇಶಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು