ಮಂಗಳವಾರ, ಸೆಪ್ಟೆಂಬರ್ 28, 2021
26 °C

ಒಟಿಟಿ ನಿಯಂತ್ರಣ; ಹೊಸ ನಿಯಮ ರಚನೆ: ಸುಪ್ರೀಂ‌ಗೆ ಮಾಹಿತಿ ನೀಡಿದ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಟಿಟಿ ವೇದಿಕೆಗಳು, ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ಸಂಬಂಧಿಸಿ ರಚಿಸಲಾಗಿರುವ ನಿಯಮಗಳ ಕುರಿತು ಫೆ.25ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

‘ಸಿಂಗಪುರ, ಆಸ್ಟ್ರೇಲಿಯಾ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿರುವ ವ್ಯವಸ್ಥೆಯಂತೆಯೇ ಸಚಿವಾಲಯ ರೂಪಿಸಿರುವ ಹೊಸ ನಿಯಮಗಳು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೊ ಸೇರಿದಂತೆ ವಿವಿಧ ಒಟಿಟಿ ವೇದಿಕೆಗಳ ಮೇಲೆ ಪರಿಣಾಮಕಾರಿಯಾಗಿ ನಿಗಾ ಇಡಲಿವೆ’ ಎಂದು ಸಚಿವಾಲಯ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಿದೆ.

‘ಒಟಿಟಿ ವೇದಿಕೆಗಳು, ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ಅಡಿ ವ್ಯವಸ್ಥೆ ಇದೆ. ಆನ್‌ಲೈನ್‌ ಮೂಲಕ ಪ್ರಸಾರವಾಗುವ ವಿಷಯಗಳ ನಿಯಂತ್ರಣ ಉದ್ದೇಶದಿಂದ ಈ ಕಾಯ್ದೆಯ ಸೆಕ್ಷನ್‌ 87(2)ರಡಿ ಹೊಸ ನಿಯಮಗಳನ್ನು ರಚಿಸಿ, ಅಧಿಸೂಚನೆ ಹೊರಡಿಸಲಾಗಿದೆ’ ಎಂದೂ ಸಚಿವಾಲಯ ತಿಳಿಸಿದೆ.

‘ಒಟಿಟಿ ವೇದಿಕೆಗಳ ಮೂಲಕ ಧ್ವನಿ ಮತ್ತು ದೃಶ್ಯಗಳ ಮೂಲಕ ಪ್ರಸಾರವಾಗುವ ವಿಷಯಗಳ ಮೇಲೆ ನಿಯಂತ್ರಣಕ್ಕಾಗಿ ಸಾಂಸ್ಥಿಕ ವ್ಯವಸ್ಥೆಯೊಂದರ ಅಗತ್ಯವನ್ನು ಸರ್ಕಾರ ಮನಗಂಡಿದೆ. ಈ ವಿಷಯವಾಗಿ ಎರಡು ವರ್ಷಗಳಿಂದ ಸಂಬಂಧಪಟ್ಟವರೊಂದಿಗೆ ಸಮಾಲೋಚನೆಯನ್ನೂ ನಡೆಸಲಾಗುತ್ತಿದೆ’ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

 ‘ಐಟಿ ಕಾಯ್ದೆಯಡಿ ರೂಪಿಸಿರುವ ಹೊಸ ನಿಯಮಗಳು ಸಮಗ್ರವಾಗಿವೆ. ಒಟಿಟಿ ವೇದಿಕೆಗಳನ್ನು ವಿವಿಧ ವಯೋಮಾನದವರು ವೀಕ್ಷಿಸುತ್ತಾರೆ. ಈ ಅಂಶವನ್ನು ಸಹ ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ರೂಪಿಸಲಾಗಿದೆ

ಒಟಿಟಿ ನಿಯಂತ್ರಣ: ವಿವಿಧ ಹೈಕೋರ್ಟ್‌ಗಳಲ್ಲಿನ ವಿಚಾರಣೆಗೆ ‘ಸುಪ್ರೀಂ’ ತಡೆ

ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೊ, ಹಾಟ್‌ಸ್ಟಾರ್‌ ಸೇರಿದಂತೆ ಒಟಿಟಿ ವೇದಿಕೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್‌ ಮಂಗಳವಾರ ತಡೆ ನೀಡಿತು.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಕೇರಳ, ದೆಹಲಿ, ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ಗಳಲ್ಲಿ ನಡೆಯುತ್ತಿದ್ದ ವಿಚಾರಣೆಗೆ ತಡೆ ನೀಡಿತು. ಅಲ್ಲದೇ, ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್‌ ಎರಡನೇ ವಾರದಲ್ಲಿ ನಡೆಸುವುದಾಗಿಯೂ ನ್ಯಾಯಪೀಠ ಹೇಳಿತು.

ಈ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು.

‘ಒಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ‘ಮಾಹಿತಿ ತಂತ್ರಜ್ಞಾನ ನಿಯಮಗಳು, 2021’ ಕುರಿತು ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನ್ಯಾಯಪೀಠದ ಗಮನಕ್ಕೆ ತಂದಿತು.

 ಒಟಿಟಿ ವೇದಿಕೆಗಳ ನಿಯಂತ್ರಣಕ್ಕಾಗಿ ಸ್ವಾಯತ್ತ ಸಂಸ್ಥೆ ಸ್ಥಾಪಿಸುವಂತೆ ಕೋರಿ ‘ಜಸ್ಟಿಸ್‌ ಫಾರ್‌ ರೈಟ್ಸ್‌ ಫೌಂಡೇಷನ್‌’ ಎಂಬ ಎನ್‌ಜಿಒ, ವಕೀಲ ಶಶಾಂಕಶೇಖರ್‌ ಝಾ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು