ಗುರುವಾರ , ಡಿಸೆಂಬರ್ 1, 2022
20 °C

ಸಾಮಾನ್ಯ ನೀತಿಸಂಹಿತೆ ರಚನೆ: ಅರ್ಜಿ ವಿಚಾರಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಭಿನ್ನ ವೈಯಕ್ತಿಕ ಕಾಯ್ದೆಯಡಿ ಇರುವ ನಿರ್ಬಂಧ, ಪರಿಸ್ಥಿತಿಗಳನ್ನೂ ಮೀರಿ ಪತ್ನಿ, ಮಕ್ಕಳು ಮತ್ತು ವಯಸ್ಸಾದ ತಂದೆ–ತಾಯಿಯ ಆರೈಕೆಗೆ ಪೂರಕವಾಗಿ ಏಕರೂಪದ ಮತ್ತು ಸಾಮಾನ್ಯ ನೀತಿಸಂಹಿತೆ ರೂಪಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಮಾನಿಸಿತು.

ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಪರವಾಗಿ ಸ್ನೇಹಾ ಕಲಿಟ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ಕುರಿತು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಜೆ.ಕೆ.ಮಹೇಶ್ವರಿ ಅವರಿದ್ದ ಪೀಠ ಈ ನಿರ್ಧಾರ ಕೈಗೊಂಡಿತು.

ಅರ್ಜಿದಾರ ಪರವಾಗಿ ಹಾಜರಿದ್ದ ವಕೀಲರಾದ ಸ್ನೇಹಾ ಮತ್ತು ಹಿರಿಯ ವಕೀಲ ಗರಿಮಾ ಪ್ರಸಾದ್‌ ವಾದ ಮಂಡಿಸಿದ್ದು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಧರ್ಮದಲ್ಲಿನ ವೈಯಕ್ತಿಕ ಕಾನೂನುಗಳ ನಿರ್ಬಂಧ ಮೀರಿ ಆರೈಕೆಗೆ ಸಂಬಂಧಿಸಿದ ಸಾಮಾನ್ಯ ನೀತಿಸಂಹಿತೆಯು ಅಗತ್ಯ ಎಂದರು.

ಸಂವಿಧಾನದ 14, 15, 21ನೇ ವಿಧಿಯಲ್ಲಿ ಉಲ್ಲೇಖಿಸಿರುವ ಮೂಲಭೂತ ಹಕ್ಕುಗಳು ಮತ್ತು ಮಾನವಹಕ್ಕುಗಳ ರಕ್ಷಣೆಗೆ ಇದು ಅಗತ್ಯ. ವಿಧಿ 44ರಲ್ಲಿ ಉಲ್ಲೇಖಿತ ಅಂಶಗಳ ಅನುಸಾರ ಇಂಥ ನೀತಿ ಸಂಹಿತೆ ರೂಪಿಸುವುದು ಸರ್ಕಾರದ ಹೊಣೆಗಾರಿಕೆಯೂ ಹೌದು ಎಂದು ವಾದಿಸಿದರು.

ಪ್ರಸಕ್ತ ಸನ್ನಿವೇಶದಲ್ಲಿ ಜಾತ್ಯತೀತ ಮನೋಭಾವವನ್ನು ಬೆಳೆಸಲು ಇದನ್ನು ತುರ್ತಾಗಿ ಪರಿಗಣಿಸಬೇಕಾಗಿದೆ. ಕಾನೂನು ಆಯೋಗವು ಈ ನಿಟ್ಟಿನಲ್ಲಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬಹುದು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು