ಶನಿವಾರ, ಮೇ 21, 2022
26 °C

‘ದೇಶದ್ರೋಹ ಕಾನೂನು ದುರ್ಬಳಕೆ ಸಲ್ಲದು’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಭಿನ್ನಮತ ಮತ್ತು ಅಸಮಾಧಾನಗಳನ್ನು ಹತ್ತಿಕ್ಕುವುದಕ್ಕಾಗಿ ದುಷ್ಕರ್ಮಿಗಳ ದಮನ ಮಾಡುವ ನೆಪದಲ್ಲಿ ದೇಶದ್ರೋಹದ ಕಾನೂನನ್ನು ದುರುಪ‍ಯೋಗ ಮಾಡುವುದು ಸರಿಯಲ್ಲ’ ಎಂದು ದೆಹಲಿ ಸೆಶನ್ಸ್‌ ನ್ಯಾಯಾಲಯ ಮಂಗಳವಾರ ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ತಿರುಚಿದ ವಿಡಿಯೊಗಳನ್ನು ಪೋಸ್ಟ್‌ ಮಾಡಿದ ಕಾರಣಕ್ಕೆ, ದೇಶದ್ರೋಹದ ಕಾನೂನಿನಡಿ ಬಂಧಿತರಾಗಿರುವ ದೇವಿಲಾಲ್‌ ಬುರ್ಡಕ್‌ ಹಾಗೂ ಸ್ವರೂಪ್‌ ರಾಮ್‌ ಅವರಿಗೆ ಜಾಮೀನು ನೀಡಿದ ನ್ಯಾಯಾಧೀಶ ಧರ್ಮೇಂದ್ರ ರಾಣಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ದೇಶದ್ರೋಹ ಕಾನೂನು ಸರ್ಕಾರದ ಕೈಯಲ್ಲಿರುವ ಪ್ರಬಲ ಅಸ್ತ್ರವಾಗಿದೆ. ಅದನ್ನು ಬಳಸುವುದು ಗಂಭೀರ ಚರ್ಚಾಸ್ಪದ ವಿಚಾರವಾಗಿದೆ. ಹಿಂಸಾಚಾರ ಅಥವಾ ಸಾರ್ವಜನಿಕ ಶಾಂತಿ ಅಥವಾ ನೆಮ್ಮದಿಗೆ ಭಂಗ ಉಂಟುಮಾಡುವ ಯಾವುದೇ ಕೃತ್ಯವನ್ನು ಕಾನೂನು ವಿರೋಧಿಸುತ್ತದೆ. ಆದರೆ ವಿರೋಧ ಅಥವಾ ಭಿನ್ನಾಭಿಪ್ರಾಯವನ್ನು ಇಲ್ಲವಾಗಿಸಲು ದೇಶದ್ರೋಹದ ಕಾನೂನನ್ನು ಬಳಕೆ ಮಾಡಲಾಗದು’ ಎಂದು ನ್ಯಾಯಾಲಯ ಹೇಳಿದೆ.

ದೇವಿಲಾಲ್‌ ಹಾಗೂ ಸ್ವರೂಪ್‌ ಅವರು ಪೊಲೀಸರು ಪ್ರತಿಭಟನೆ ನಡೆಸುತ್ತಿರುವ ವಿಡಿಯೊ ಒಂದನ್ನು ತಮ್ಮ ಫೇಸ್‌ಬುಖ್‌ ಖಾತೆಗಳಲ್ಲಿ ಪೋಸ್ಟ್‌ ಮಾಡಿ, ‘ರೈತರ ಪ್ರತಿಭಟನೆಯನ್ನು ಬೆಂಬಲಿಸಿ ನೂರಾರು ಪೊಲೀಸರು ರಾಜೀನಾಮೆ ನೀಡಿದ್ದಾರೆ’ ಎಂದು ಬರೆದಿದ್ದರು. ವಾಸ್ತವದಲ್ಲಿ ಆ ವಿಡಿಯೋ ಬೇರೆ ಸಂದರ್ಭದ್ದಾಗಿತ್ತು ಮತ್ತು ರೈತ ಪ್ರತಿಭಟನೆಗೂ ಅದಕ್ಕೂ ಸಂಬಂಧವೇ ಇರಲಿಲ್ಲ.  ಈ ವಿಡಿಯೊವನ್ನು ಅವರು ಫಾರ್ವರ್ಡ್‌ ಮಾಡಿದ್ದರೇ ವಿನಾ ತಿರುಚಿದವರು ಅವರಾಗಿರಲಿಲ್ಲ. ಆದರೆ, ‘ಸುಳ್ಳು ಸುದ್ದಿ ಹಬ್ಬಿಸಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ’ ಎಂದು ಆರೋಪಿಸಿ, ಇವರ ವಿರುದ್ಧ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್‌ 124ಎ ಅಡಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.

‘ವಿಡಿಯೊವನ್ನು ನಾನು ನೋಡಿದ್ದೇನೆ. ಇದನ್ನು ಆರೋಪಿಗಳು ತಿರುಚಿದ್ದಲ್ಲ ಎಂದು ತನಿಖಾಧಿಕಾರಿಗಳೇ ತಿಳಿಸಿದ್ದಾರೆ. ನಕಲಿ ದಾಖಲೆ ಇಲ್ಲದೆಯೇ ವ್ಯಕ್ತಿಯೊಬ್ಬರ ಮೇಲೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಹೊರಿಸಲು ಹೇಗೆ ಸಾಧ್ಯ? ಪೊಲೀಸರು ನಕಲಿ ದಾಖಲೆ ಎಂದು ಗುರುತಿಸಿದ್ದನ್ನು ಸೃಷ್ಟಿ ಮಾಡಿದವರು ಬೇರೆ ಯಾರೋ ಆಗಿದ್ದಾರೆ. ಈ ಆರೋಪಿಗಳು ನಕಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಸಾಬೀತುಪಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದಿರುವ ನ್ಯಾಯಾಧೀಶರು, ಇನ್ನು ಮುಂದೆ ಇಂಥ ಯಾವುದೇ ಕೃತ್ಯವನ್ನು ನಡೆಸದಂತೆ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು