ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷಗಳ ಲೇವಡಿಗೆ ಗುರಿಯಾದ ಮೋದಿ, ನಿತೀಶ್‌ ಕುಮಾರ್‌ ಪ್ರತ್ಯೇಕ ಜಾಹೀರಾತು

ಬಿಹಾರ ಚುನಾವಣೆ
Last Updated 27 ಅಕ್ಟೋಬರ್ 2020, 2:14 IST
ಅಕ್ಷರ ಗಾತ್ರ
ADVERTISEMENT
""
""

ಬಿಹಾರ ಚುನಾವಣೆಯನ್ನುಎನ್‌ಡಿಎಮೈತ್ರಿಕೂಟದ ಹೆಸರಿನಲ್ಲಿಆಡಳಿತಾರೂಢ ಜೆಡಿಯು ಮತ್ತುಬಿಜೆಪಿ ಪಕ್ಷಗಳು ಜತೆಗೂಡಿ ಎದುರಿಸುತ್ತಿದೆ. ಆದರೆ ಕರಪತ್ರ, ಭಿತ್ತಿಪತ್ರ ಹಾಗೂ ಜಾಹೀರಾತುಗಳಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿರುವ ಭಾವನೆ ಮೂಡುವಂತೆ ಪ್ರಚಾರ ನಡೆಸುತ್ತಿವೆ.

ಬಿಜೆಪಿಯ ಭಿತ್ತಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರಾಜಮಾನರಾಗಿದ್ದಾರೆ. ಪತ್ರಿಕೆಗಳಿಗೆನಿತೀಶ್ ಕುಮಾರ್ ನೀಡಿರುವ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯ ಉಲ್ಲೇಖವೇ ಇಲ್ಲ!

ಬಿಹಾರದ ಪ್ರಮುಖ ದಿನಪತ್ರಿಕೆಗಳಲ್ಲಿ ಶನಿವಾರ ಪ್ರಕಟವಾಗಿದ್ದ ಜಾಹೀರಾತುಗಳಲ್ಲಿ 'ಬಿಜೆಪಿ ಹೈ ತೊ ಭರೋಸಾ ಹೈ' (ಬಿಜೆಪಿ ಇದ್ದೆಡೆ ನಂಬಿಕೆ ಇರುತ್ತೆ) ಎಂಬ ಸಾಲು ಎದ್ದು ಕಾಣುವಂತಿತ್ತು. ನರೇಂದ್ರ ಮೋದಿ ಅವರ ಚಿತ್ರ ಎದ್ದು ಕಾಣುವಂತಿದ್ದ ಜಾಹೀರಾತಿನಲ್ಲಿ ಉಚಿತ ಕೋವಿಡ್ ಲಸಿಕೆ, ಉದ್ಯೋಗಾವಕಾಶಗಳು ಸೇರಿದಂತೆಬಿಜೆಪಿಯ ಚುನಾವಣಾ ಭರವಸೆಗಳು ಮಾತ್ರವೇ ನಮೂದಾಗಿದ್ದವು.

'ಬಿಹಾರದಲ್ಲಿ ನಿತೀಶ್‌ ಕುಮಾರ್‌ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಇದು ಉತ್ತಮ ಸಾಕ್ಷಿ. (ಕೇಂದ್ರ) ಆಡಳಿತಾರೂಢ ಪಕ್ಷವು ಅವರನ್ನು ತನ್ನ ಜಾಹೀರಾತುಗಳಿಂದ ಕೈಬಿಟ್ಟಿದೆ' ಎಂದು ನಿತೀಶ್ ಅವರ ರಾಜಕೀಯ ಎದುರಾಳಿಗಳಾದ ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.

ಬಿಜೆಪಿ ಟ್ವೀಟ್ ಮಾಡಿರುವ ಚಿತ್ರದಲ್ಲಿ ನಿತೀಶ್ ಇಲ್ಲ

ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಚುನಾವಾಣೆಗೆ ನಿಂತಿರುವ ಚಿರಾಗ್ ಪಾಸ್ವಾನ್‌,'ನಿತೀಶ್‌ ಕುಮಾರ್‌ಗೆ ಬೇಕಿರುವಷ್ಟು ಪುರಾವೆ ಇನ್ನೂ ಸಿಕ್ಕಿಲ್ಲ ಎನಿಸುತ್ತದೆ' ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿಗೆ ನಿಷ್ಠರಾಗಿದ್ದರೂ ನಿತೀಶ್‌ ಕುಮಾರ್‌ರ ಜೆಡಿಯು ಸೋಲಿಸಲು ಚಿರಾಗ್ ಪಣ ತೊಟ್ಟಿದ್ದಾರೆ.

'ತಮಗೆ ಪೂರ್ಣ ಪುಟದ ಜಾಹೀರಾತು ಮತ್ತು ಪ್ರಮಾಣ ಕೊಟ್ಟಿದ್ದಕ್ಕಾಗಿ ಎನ್‌ಡಿಎಗೆ ನಿತೀಶ್‌ ಕುಮಾರ್‌ ಕೃತಜ್ಞರಾಗಿರಬೇಕು. ಅವರೂ ಸಹ (ಮುಂದಿನ ದಿನಗಳಲ್ಲಿ) ಎನ್‌ಡಿಎ ಮೈತ್ರಿಕೂಟಕ್ಕೆ ಬಿಜೆಪಿಯಷ್ಟೇ ನಿಷ್ಠರಾಗಿರಬೇಕು' ಎಂದು ಲೋಕಜನಶಕ್ತಿ ಪಕ್ಷವು ವ್ಯಂಗ್ಯವಾಡಿದೆ.

ಅದೇ ಜಾಹೀರಾತಿನ ಚಿತ್ರಗಳನ್ನು ಟ್ವೀಟ್ ಮಾಡಿರುವ ಆರ್‌ಜೆಡಿ, 'ಬಿಹಾರವು ಮುಖ್ಯಮಂತ್ರಿಗಾಗಿ (ಆಯ್ಕೆಗಾಗಿ) ಮತ ಚಲಾಯಿಸುತ್ತದೆ. ಪ್ರಧಾನಿಗೆ ಅಲ್ಲ' ಎಂದು ಹೇಳಿದೆ.

ಚುನಾವಣಾ ಜಾಹೀರಾತುಗಳಲ್ಲಿ ಬಿಜೆಪಿ ನಾಯಕರ ಚಿತ್ರಗಳನ್ನು ಹಾಕದಿರುವ ನಿರ್ಧಾರವನ್ನು ನಿತೀಶ್‌ಕುಮಾರ್ ಮೊದಲು ತೆಗೆದುಕೊಂಡರು. ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳುವ ಕಾರ್ಯಕ್ರಮದ ದಿನ ಬಿಡುಗಡೆ ಮಾಡಿದ್ದ ಜಾಹೀರಾತಿನಲ್ಲಿ ತಮ್ಮ ಚಿತ್ರವನ್ನಷ್ಟೇ ಹಾಕಿಸಿಕೊಂಡಿದ್ದರು. 'ಸಾತ್ ನಿಶ್ಚಯ್ (ಏಳು ಸಂಕಲ್ಪಗಳು), ಸ್ವಾವಲಂಬಿ ಬಿಹಾರ್' ಟ್ಯಾಗ್‌ಲೈನ್‌ನ ಆ ಜಾಹೀರಾತಿನ ಮೂಲಕ ಪ್ರಧಾನಿಯ 'ಆತ್ಮನಿರ್ಭರ್' ಭಾರತ ಘೋಷಣೆಗೆ ನಿತೀಶ್‌ ತಮ್ಮದೇ ವ್ಯಾಖ್ಯಾನ ನೀಡಿದ್ದರು.

ಈ ಜಾಹೀರಾತುಗಳನ್ನು ಟೀಕಿಸಿದ್ದ ನಿತೀಶ್‌ ಕುಮಾರ್ ವಿರೋಧಿಗಳು, ಮುಖ್ಯಮಂತ್ರಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಣ ಭಿನ್ನಮತಕ್ಕೆ ಇದು ಉತ್ತಮ ಉದಾಹರಣೆ ಎಂದು ಹೇಳಿದ್ದರು.

ನಿತೀಶ್‌ ಕುಮಾರ್ ಜಾಹೀರಾತಿನಲ್ಲಿ ಬಿಜೆಪಿ, ಮೋದಿ ಇಲ್ಲ

2010ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ನಾದಲ್ಲಿ ನಡೆದಿತ್ತು. ಆ ಸಂದರ್ಭ ಪ್ರಕಟವಾಗಿದ್ದ ಜಾಹೀರಾತಿನಲ್ಲಿ ನಿತೀಶ್‌ ಕುಮಾರ್ ಮತ್ತು ನರೇಂದ್ರ ಮೋದಿ ಜತೆಗಿರುವ ಚಿತ್ರವೊಂದು ಗುಜರಾತ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತಿನಲ್ಲಿ ಕಾಣಿಸಿಕೊಂಡಿತ್ತು. ಸಿಟ್ಟಿಗೆದ್ದ ನಿತೀಶ್‌ ಕುಮಾರ್‌ ಈ ಕುರಿತು ತನಿಖೆ ನಡೆಸಲು ತಂಡವೊಂದನ್ನು ಕಳಿಸಿದ್ದರು, ಎಫ್‌ಐಆರ್ ಸಹ ದಾಖಲಿಸಿದ್ದರು.

ಕಳೆದ ಕೆಲ ವರ್ಷಗಳಿಂದ ನಿತೀಶ್‌ ಕುಮಾರ್‌ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. 2013ರಲ್ಲಿ ಅವರು ಬಿಜೆಪಿಯೊಂದಿಗೆ ಮೈತ್ರಿಯನ್ನೂ ಕಡಿದುಕೊಂಡಿದ್ದರು. ಮೂರು ವರ್ಷಗಳ ನಂತರ ಆರ್‌ಜಿಡಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ದೂರವಿಟ್ಟು ಎನ್‌ಡಿಎ ತೆಕ್ಕೆಗೆ ಮರಳಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೂರ್ಣ ಬೆಂಬಲವನ್ನು ಸಾರ್ವಜನಿಕವಾಗಿ ಘೋಷಿಸಿದ್ದರು.

ಬಿಹಾರದಲ್ಲಿ ಚುನಾವಣೆ ಕಾವೇರಿದ್ದು ಅಕ್ಟೋಬರ್ 28 ಮತ್ತು ನವೆಂಬರ್‌ 7ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT