ಭಾನುವಾರ, ಜೂನ್ 26, 2022
21 °C

ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು: ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಯೋತ್ಪಾದನಾ ಕೃತ್ಯ ಗಳಿಗೆ ಹಣಕಾಸು ಒದಗಿಸಿದ ಪ್ರಕರಣ ದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಹಾಗೂ ನಿಷೇಧಿತ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್‌ಗೆ ದೆಹಲಿ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ‘ಜಮ್ಮು ಮತ್ತು ಕಾಶ್ಮೀರವನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸುವ ಉದ್ದೇಶ ಹೊಂದಿದ್ದ ಅಪರಾಧವು ಗಂಭೀರ ಸ್ವರೂಪದಿಂದ ಕೂಡಿದೆ’ ಎಂದು ಕೋರ್ಟ್ ಹೇಳಿದೆ.

ಯಾಸಿನ್ ಮಲಿಕ್‌ಗೆ ಮರಣ ದಂಡನೆ ವಿಧಿಸಬೇಕು ಎಂದು ವಿಚಾ ರಣೆ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಗ್ರಹಿಸಿತ್ತು. 

‘ವಿದೇಶಿ ಶಕ್ತಿಗಳು ಹಾಗೂ ಘೋಷಿತ ಭಯೋತ್ಪಾದಕರ ಸಹ ಕಾರದಿಂದ ಯಾಸಿನ್ ಮಲಿಕ್ ಎಸಗಿ ರುವ ಕೃತ್ಯಗಳು ಗಂಭೀರ ಸ್ವರೂಪದ್ದಾಗಿವೆ’ ಎಂದು ಎನ್‌ಐಎನ ವಿಶೇಷ ನ್ಯಾಯಾಧೀಶ ಪರ್ವೀನ್ ಸಿಂಗ್ ಅವರು ಉಲ್ಲೇಖಿಸಿದರು. ‘ಶಾಂತಿಯುತ ರಾಜಕೀಯ ಚಳವಳಿಯ ನೆಪದಲ್ಲಿ ಅಪರಾಧ ನಡೆದಿರುವ ಕಾರಣ, ಪ್ರಕರಣದ ಗಂಭೀರತೆ ಹೆಚ್ಚಾಗಿದೆ’ ಎಂದು ಅವರು ಹೇಳಿದರು. 

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಸೇರಿ ಹಲವು ಕಾಯ್ದೆಗಳ ಅಡಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಪ್ರತ್ಯೇಕ ಶಿಕ್ಷೆಯನ್ನು ವಿಧಿಸಿದೆ. ಜತೆಗೆ ಪ್ರತ್ಯೇಕವಾಗಿ ದಂಡವನ್ನೂ ವಿಧಿಸಿದೆ. ಆದರೆ ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಬೇಕು ಎಂದು ನ್ಯಾಯಾಲಯವು ಹೇಳಿದೆ.  

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಗಂಭೀರ ಅಪರಾಧವಾಗಿದ್ದು, ಅದಕ್ಕೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಮೇ 19ರಂದು ಮಲಿಕ್ ದೋಷಿ ಎಂದು ಪ್ರಕಟಿಸಿದ್ದ ಕೋರ್ಟ್, ತನ್ನ ವಿರುದ್ಧದ ಆರೋಪವನ್ನು ಒಪ್ಪಿಕೊಳ್ಳುವಂತೆ ಮಲಿಕ್‌ಗೆ ಎರಡು ಬಾರಿ ಅವಕಾಶ ನೀಡಿತ್ತು. ಶಿಕ್ಷೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗುವ ಅವಕಾಶ ಮಲಿಕ್‌ಗೆ ಇದೆ. 

1994ರಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ಬಳಿಕ ಗಾಂಧೀಜಿ ಅವರ ತತ್ವಾದರ್ಶಗಳನ್ನು ಪಾಲಿಸುತ್ತಿರುವುದಾಗಿ ಮಲಿಕ್ ಹೇಳಿದ್ದಾನೆ.  ಮರಣದಂಡನೆ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಮಲಿಕ್, ‘ಯಾವುದಕ್ಕೂ ನಾನು ಬೇಡಿಕೆಯಿಡುವುದಿಲ್ಲ. ಕೋರ್ಟ್ ನಿರ್ಧಾರ ತೆಗೆದುಕೊಳ್ಳಲಿ. ವಿ.ಪಿ. ಸಿಂಗ್‌ರಿಂದ ಅಟಲ್ ಬಿಹಾರಿ ವಾಜಪೇಯಿ ಅವರವರೆಗೆ ಎಲ್ಲ ಪ್ರಧಾನಿಗಳನ್ನು ಭೇಟಿಯಾಗಿದ್ದೇನೆ. ಅವರು ನನ್ನ ರಾಜಕೀಯ ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆ ನೀಡಿದ್ದರು’ ಎಂದಿದ್ದಾನೆ. 

‘ಗಾಂಧಿ ತತ್ವಗಳಾದ ಅಹಿಂಸೆ ಹಾಗೂ ಶಾಂತಿ ಪರಿಪಾಲನೆ ಮಾಡುತ್ತಿರುವುದಾಗಿ ದೋಷಿ ಹೇಳಿದ್ದಾನೆ. ಆದರೆ ಇಡೀ ಚಳವಳಿಯು ಹಿಂಸಾತ್ಮಕ ಉದ್ದೇಶದಿಂದ ಕೂಡಿತ್ತು. ಇಡೀ ಕಣಿವೆಯಲ್ಲಿ ದೊಡ್ಡ ಮಟ್ಟದ ಹಿಂಸಾಚಾರ ನಡೆದರೂ ದೋಷಿಯು ಎಂದಿಗೂ ಅದನ್ನು ಖಂಡಿಸಲಿಲ್ಲ’ ಎಂದು ಕೋರ್ಟ್ ಹೇಳಿತು.

ಭಾರತವು ಯಾಸಿನ್‌ನನ್ನು ಜೈಲಿಗೆ ಹಾಕಬಹುದು. ಆದರೆ, ಆತ ಪ್ರತಿನಿಧಿಸುವ ಸ್ವಾತಂತ್ರ್ಯದ ಧ್ಯೇಯವನ್ನು ಸೆರೆಯಲ್ಲಿ ಇಡಲಾಗದು ಎಂದು ಪಾಕಿಸ್ತಾನ ಪ್ರಧಾನಿ ಶಾಹಬಾಝ್‌ ಷರೀಫ್‌ ಟ್ವೀಟ್‌ ಮಾಡಿದ್ದಾರೆ.

ಯಾಸಿನ್ ಮಲಿಕ್ ಶಿಕ್ಷೆ ವಿವರ
ಯುದ್ಧಕ್ಕೆ ಯತ್ನ (ಐಪಿಸಿ ಸೆ. 121): ಜೀವಾವಧಿ ಶಿಕ್ಷೆ (₹10 ಸಾವಿರ ದಂಡ)
ಭಯೋತ್ಪಾದಕ ಚಟುವಟಿಕೆಗೆ ಹಣ ಸಂಗ್ರಹ (ಯುಎಪಿಎ ಸೆ. 17): ಜೀವಾವಧಿ ಶಿಕ್ಷೆ (₹10 ಲಕ್ಷ ದಂಡ)
* ಕ್ರಿಮಿನಲ್ ಸಂಚು (ಐಪಿಸಿ 120 ಬಿ): 10 ವರ್ಷ ಜೈಲು (₹10 ಸಾವಿರ ದಂಡ)
ಯುದ್ಧ ನಡೆಸಲು ಸಂಚು (ಐಪಿಸಿ ಸೆ. 121ಎ): 10 ವರ್ಷ ಜೈಲು (₹10 ಸಾವಿರ ದಂಡ)
ಕಾನೂನು ಬಾಹಿರ ಚಟುವಟಿಕೆ (ಯುಎಪಿಎ ಸೆ. 13): 5 ವರ್ಷ ಜೈಲು (₹5 ಸಾವಿರ ದಂಡ)
ಭಯೋತ್ಪಾದನಾ ಕೃತ್ಯ (ಯುಎಪಿಎ ಸೆ.16/ ಐಪಿಸಿ ಸೆ.120ಬಿ): 10 ವರ್ಷ ಜೈಲು (₹10 ಸಾವಿರ ದಂಡ)
ಸಂಚು (ಯುಎಪಿಎ ಸೆ. 18): 10 ವರ್ಷ ಜೈಲು (₹10 ಸಾವಿರ ದಂಡ)
ಭಯೋತ್ಪಾದನಾ ಗುಂಪಿನ ಸದಸ್ಯ (ಯುಎಪಿಎ ಸೆ.20): 10 ವರ್ಷ ಜೈಲು (₹10 ಸಾವಿರ ದಂಡ)
ಭಯೋತ್ಪಾದನಾ ಗುಂಪಿನ ಸದಸ್ಯನಿಗೆ ಶಿಕ್ಷೆ (ಯುಎಪಿಎ ಸೆ.38): 5 ವರ್ಷ ಜೈಲು (₹5 ಸಾವಿರ ದಂಡ)
* ಭಯೋತ್ಪಾದನಾ ಸಂಘಟನೆಗೆ ಬೆಂಬಲ (ಯುಎಪಿಎ ಸೆ.39): 5 ವರ್ಷ ಜೈಲು (₹5 ಸಾವಿರ ದಂಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು