ಬುಧವಾರ, ಸೆಪ್ಟೆಂಬರ್ 29, 2021
20 °C

ಐಟಿಬಿಪಿ ಕೇಂದ್ರ: ಕ್ವಾರಂಟೈನ್‌ ಮುಗಿಸಿದ ಅಫ್ಗನ್‌ನಿಂದ ಬಂದ 78 ಮಂದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ ತಿಂಗಳು ಕಾಬೂಲ್‌ ಅನ್ನು ತಾಲಿಬಾನ್‌ ವಶಕ್ಕೆ ಪಡೆಯುತ್ತಿದ್ದಂತೆ ಆಫ್ಗಾನಿಸ್ತಾನದಿಂದ ಭಾರತಕ್ಕೆ ಸ್ಥಳಾಂತರಗೊಂಡ 78 ಮಂದಿ ಹದಿನಾಲ್ಕು ದಿನಗಳ ಕೋವಿಡ್‌ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ್ದಾರೆ. ಐಟಿಬಿಪಿ ಕೇಂದ್ರದಲ್ಲಿದ್ದ ಅವರು ಮಂಗಳವಾರ ಹೊರ ಬಂದಿದ್ದಾರೆ.

78 ಜನರ ತಂಡದಲ್ಲಿ 53 ಮಂದಿ ಅಫ್ಗನ್ನರು (34 ಪುರುಷರು, ಒಂಬತ್ತು ಮಹಿಳೆಯರು ಹಾಗೂ 10 ಮಕ್ಕಳು), 25 ಜನ ಭಾರತೀಯರು (18 ಪುರುಷರು, ಐವರು ಮಹಿಳೆಯರು ಮತ್ತು 12 ಮಕ್ಕಳು) ಇರುವುದಾಗಿ ಇಂಡೊ–ಟಿಬೆಟನ್‌ ಗಡಿ ಭದ್ರತಾ ಪಡೆಯ (ಐಟಿಬಿಪಿ) ವಕ್ತಾರ ವಿವೇಕ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ಅವರಿಗೆ ಕ್ವಾರಂಟೈನ್‌ ಅವಧಿ ಮುಗಿಸಿರುವ ಸಂಬಂಧ ವೈದ್ಯಕೀಯ ಪತ್ರ ಮತ್ತು ಕೆಂಪು ಗುಲಾಬಿಯನ್ನು ನೀಡಿ ಕಳುಹಿಸಿಕೊಡಲಾಗಿದೆ.

ಭಾರತೀಯ ವಾಯು ಪಡೆ ಕಾರ್ಯಾಚರಣೆಯ ಮೂಲಕ ಅಫ್ಗನ್‌ನಿಂದ ಭಾರತಕ್ಕೆ ಬಂದಿಳಿದ 78 ಜನರನ್ನು ದೆಹಲಿಯ ಛಾವ್ಲಾ ಪ್ರದೇಶದಲ್ಲಿರುವ ಕೋವಿಡ್‌–19 ಕ್ವಾರಂಟೈನ್‌ ಕೇಂದ್ರಕ್ಕೆ ಆಗಸ್ಟ್‌ 24ರಂದು ಕರೆತರಲಾಗಿತ್ತು.

ಅಫ್ಗನ್‌ ನಾಗರಿಕರನ್ನು ದಕ್ಷಿಣ ದೆಹಲಿಯ ನಿಗದಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಭಾರತೀಯರು ಅವರ ಮನೆಗಳಿಗೆ ತೆರಳಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಫ್ಗನ್‌ನಿಂದ ಬಂದಿರುವ ಇನ್ನೂ 35 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಅವರಲ್ಲಿ 24 ಜನ ಭಾರತೀಯರು ಮತ್ತು ಉಳಿದವರು ನೇಪಾಳ ಮೂಲದವರಾಗಿದ್ದಾರೆ. ಅವರೆಲ್ಲರ 14 ದಿನಗಳ ಕ್ವಾರಂಟೈನ್‌ ಅವಧಿಯು ನಾಳೆ ಪೂರ್ಣಗೊಳ್ಳಲಿದೆ.

ಕಳೆದ ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಐಟಿಬಿಪಿ ಕ್ವಾರಂಟೈನ್‌ ಕೇಂದ್ರದಲ್ಲಿ ಈವರೆಗೂ ಸುಮಾರು 8 ರಾಷ್ಟ್ರಗಳ 1,200ಕ್ಕೂ ಹೆಚ್ಚು ಜನರು ಕೋವಿಡ್‌ ಸಂಬಂಧಿತ ಕ್ವಾರಂಟೈನ್‌ ವ್ಯವಸ್ಥೆ ಪಡೆದಿದ್ದಾರೆ. ಚೀನಾದ ವುಹಾನ್‌ನಿಂದ ಭಾರತಕ್ಕೆ ಮರಳಿದ್ದ ಭಾರತೀಯರು ಮತ್ತು ವಿದೇಶಿಯರು ಇದೇ ಕೇಂದ್ರದಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು