ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಯಿಂದ ದಾಖಲೆ ವಶಕ್ಕೆ: ಹಕ್ಕುಚ್ಯುತಿ ನೋಟಿಸ್‌ ನೀಡಿದ ತರೂರ್‌

ಸಮಿತಿ ನಡಾವಳಿ, ನಿರ್ಧಾರ ಹೊರಗಿನವರಿಗೆ ಲಭ್ಯವಿಲ್ಲ
Last Updated 31 ಮೇ 2022, 20:00 IST
ಅಕ್ಷರ ಗಾತ್ರ

ನವದೆಹಲಿ: ಕಾರ್ತಿ ಚಿದಂಬರಂ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸುವಾಗ ಸಂಸದೀಯ ಸಮಿತಿಯ ಗೋಪ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಸಿಬಿಐ ವಿರುದ್ಧ ಹಕ್ಕಚ್ಯುತಿ ನೋಟಿಸ್ ನೀಡಿದ್ದಾರೆ. ದಾಖಲೆಗಳನ್ನು ವಶಕ್ಕೆ ಪಡೆಯುವ ಮೂಲಕ ಸಂಸದೀಯ ಕಾರ್ಯಚಟುವಟಿಕೆಗೆ ಸಿಬಿಐ ಅಗೌರವ ತೋರಿದೆ ಎಂದು ಅವರು ಹೇಳಿದ್ದಾರೆ.

ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ತರೂರ್, ಸಿಬಿಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಸಮಿತಿಯ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿ ಸಮಿತಿಯ ದಾಖಲೆಗಳನ್ನು ಪಡೆದುಕೊಳ್ಳುವುದು ನಿಯಮಾವಳಿಯ ಗಂಭೀರ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಾರ್ತಿ ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ.

‘ಸಿಬಿಐನ ಈ ಕ್ರಮವು, ಸ್ಥಾಯಿ ಸಮಿತಿಯ ಕಾರ್ಯ ಚಟುವಟಿಕೆಗಳು ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಮೂಲಕ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಶಾಸಕಾಂಗ ರಚಿತ ಘಟಕಕ್ಕೆ ಸಿಬಿಐ ಅಗೌರವ ತೋರಿದೆ’ ಎಂದು ತರೂರ್ ಹೇಳಿದ್ದಾರೆ.

‘ಸಾಕ್ಷಿಗಳ ವಿಚಾರಣೆ, ಸಾಕ್ಷ್ಯಗಳ ಪರಿಶೀಲನೆ ಉದ್ದೇಶದಿಂದ ಕಾರ್ತಿ ಅವರು ಸಿದ್ಧಪಡಿಸಿದ್ದ ಪ್ರಶ್ನಾವಳಿಗಳು ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂಬ ಮಾಹಿತಿಯಿದೆ. ಸದಸ್ಯರಾದವರು ಸಮಿತಿ ಎದುರು ಮಾತ್ರ ಈ ಗೋಪ್ಯ ಮಾಹಿತಿಗಳನ್ನು ಹಂಚಿಕೊಳ್ಳಬೇಕಿತ್ತು. ಆದರೆ, ಈ ದಾಖಲೆಗಳು ಸಿಬಿಐ ವಶದಲ್ಲಿವೆ’ ಎಂದು ತರೂರ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT