ಸೋಮವಾರ, ಮೇ 17, 2021
21 °C

2020: ಕೋವಿಡ್‌ ಸಾಂಕ್ರಾಮಿಕ, ಸೈದ್ಧಾಂತಿಕ ವಿರೋಧಗಳ ನಡುವೆ ಶಿವಸೇನಾ ಪಯಣ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಸರ್ಕಾರವು 2020ರಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಮಹಾರಾಷ್ಟ್ರವು ಭಾರತದ ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿ ಮಾರ್ಪಟ್ಟಿತು. ಅಂತಹ ಸಂದರ್ಭದಲ್ಲಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಬಿಜೆಪಿಯ ನಿರಂತರ ಪ್ರಯತ್ನಗಳ ನಡುವೆಯೂ ಮಹಾ ವಿಕಾಸ್‌ ಅಘಾಡಿ (ಎಂವಿಎ) ನೇತೃತ್ವದ ಮೈತ್ರಿ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ.

ಹಿಂದುತ್ವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಶಿವಸೇನಾ ಪಕ್ಷವು ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿತು. ಆ ವಿಚಾರ ಬಿಜೆಪಿ ನಾಯಕರು ಹಾಗೂ ಹಿಂದೂ ರಾಷ್ಟ್ರವಾದಿಗಳ ತೀಕ್ಷ್ಣ ವಿಮರ್ಶೆಗೆ ಗುರಿಯಾಯಿತು.

ಧಾರ್ಮಿಕ ಕೇಂದ್ರ ತೆರೆಯುವ ವಿಚಾರ: ರಾಜ್ಯಪಾಲರ 'ಜಾತ್ಯತೀತ' ಮಾತು

ದೇವಸ್ಥಾನ ಮತ್ತು ಇತರೆ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ವಿಚಾರದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ಮಾತಿನ ಸಮರವೇ ನಡೆಯಿತು.

ಮಹಾರಾಷ್ಟ್ರದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ವಿಚಾರವಾಗಿ ಕೋಶಿಯಾರಿ ಅವರು ಉದ್ಧವ್‌ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಡಿಸಿದ್ದರು. ‘ನೀವು ಹಿಂದೂ ಮತದಾರರ ಪ್ರಬಲವಾದ ಬೆಂಬಲ ಪಡೆದಿದ್ದೀರಿ. ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಗೆ ಭೇಟಿ ನೀಡಿ ಭಗವಾನ್ ಶ್ರೀರಾಮನಲ್ಲಿ ನೀವು ಇಟ್ಟಿರುವ ಭಕ್ತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದೀರಿ. ಆಷಾಢ ಏಕಾದಶಿ ದಿನದ ಅಂಗವಾಗಿ ಪಂಡರಾಪುರದ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದೀರಿ. ಆದರೆ ಪೂಜಾ ಸ್ಥಳಗಳ ಪುನರಾರಂಭವನ್ನು ಮತ್ತೆ ಮತ್ತೆ ಮುಂದೂಡಲು ನಿಮಗೆ ಯಾವ ದೈವೀಕ ಶಕ್ತಿಯ ಸೂಚನೆ ಸಿಕ್ಕಿದೆ? ಅಥವಾ ‘ಜಾತ್ಯತೀತ’ರಾಗಿ ನೀವು ಬದಲಾಗಿದ್ದೀರಾ’ ಎಂದು ಕೋಶಿಯಾರಿ ಪತ್ರದಲ್ಲಿ ಪ್ರಶ್ನಿಸಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ಉದ್ಧವ್ ಠಾಕ್ರೆ, ‘ನನ್ನ ರಾಜ್ಯ ಮತ್ತು ರಾಜಧಾನಿ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಂದಿಗೆ ಹೋಲಿಸುವ ಜನರಿಗೆ ಆತ್ಮೀಯ ಸ್ವಾಗತ ನೀಡುವವರು ನನ್ನ ಹಿಂದುತ್ವಕ್ಕೆ ಹೊಂದಾಣಿಕೆ ಆಗುವುದಿಲ್ಲ’ ಎಂದಿದ್ದರು. ಈ ಮೂಲಕ ನಟಿ ಕಂಗನಾ ರನೋಟ್‌ ಅವರನ್ನು ಕೋಶಿಯಾರಿ ಭೇಟಿಯಾಗಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು.

ಪತ್ರದಲ್ಲಿ ರಾಜ್ಯಪಾಲರು ಬಳಸಿರುವ ಭಾಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರ್ಕಾರವು ದೇವಾಲಯಗಳ ಜೀರ್ಣೋದ್ಧಾರ ಯೋಜನೆಗೆ ಒಪ್ಪಿಗೆ ನೀಡಿತು. 'ಲಾಕ್‌ಡೌನ್‌ನಿಂದಾಗಿ ಮುಚ್ಚಲಾಗಿದ್ದ ದೇವಾಲಯಗಳನ್ನು ಪುನಃ ತೆರೆಯುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಳಂಬ ಮಾಡಿದೆ ಎಂದು ಈ ಹಿಂದೆ ಬಿಜೆಪಿ ಟೀಕಿಸಿತ್ತು. ಇದರಿಂದಾಗಿ ಸರ್ಕಾರದ ದೇವಾಲಯಗಳ ಜೀರ್ಣೋದ್ಧಾರ ಯೋಜನೆಗೆ ರಾಜಕೀಯ ಮಹತ್ವ ಬಂದಿದೆ' ಎಂದು ವಿಶ್ಲೇಷಿಸಲಾಗಿದೆ.

ಕೊರೊನಾ, ನೈಸರ್ಗಿಕ ವಿಕೋಪ: ಸರ್ಕಾರದಿಂದ ಪ್ರಮುಖ ಆಡಳಿತಾತ್ಮಕ ನಿರ್ಧಾರ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕಗೊಳ್ಳುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕರು ಉದ್ಧವ್‌ ಠಾಕ್ರೆ ವಿರುದ್ಧ ವಾಗ್ದಾಳಿಯನ್ನು ನಡೆಸತೊಡಗಿದರು. ಆದರೆ, ಮುಂಬೈ ಸೇರಿದಂತೆ ಸಂಪೂರ್ಣ ಮಹಾರಾಷ್ಟ್ರದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಮಹಾರಾಷ್ಟ್ರ ಸರ್ಕಾರ ಕೈಗೊಂಡಿತು. ಆ ಮೂಲಕ ಪ್ರತಿದಿನ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸುವಲ್ಲಿ ಮಹಾ ವಿಕಾಸ್‌ ಅಘಾಡಿ ಸರ್ಕಾರ ಯಶಸ್ವಿಯಾಯಿತು.

ಈ ಒಂದು ವರ್ಷದಲ್ಲಿ ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ನಿಸರ್ಗ ಚಂಡಮಾರುತ ಬಂದಿತು. ಪೂರ್ವ ವಿದರ್ಭದಲ್ಲಿ ಪ್ರವಾಹ, ನೈಸರ್ಗಿಕ ವಿಕೋಪಗಳು.. ಎಲ್ಲವೂ ಸೇರಿ ಠಾಕ್ರೆ ಸರ್ಕಾರವನ್ನು ಅಲುಗಾಡಿಸಿದವು.

ಈ ನಡುವೆ ಮುಖ್ಯಮಂತ್ರಿ ಮನೆಯಲ್ಲೇ ಕುಳಿತು ಆಡಳಿತ ನಡೆಸುತ್ತಿದ್ದಾರೆ ಎಂಬ ಟೀಕೆಗಳ ಕೇಳಿಬಂದವು. ಇದನ್ನು ಬಿಟ್ಟು ಠಾಕ್ರೆ ವಿರುದ್ಧ ಬೇರೆ ಯಾವುದೇ ಆರೋಪಗಳಿರಲಿಲ್ಲ. ಜತೆಗೆ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಪುತ್ರ ಆದಿತ್ಯ ಠಾಕ್ರೆಯನ್ನು ಬಂಧಿಸುವ ವಿಫಲ ಪ್ರಯತ್ನಗಳೂ ನಡೆದವು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ವರ್ಷದಲ್ಲಿ 40 ಲಕ್ಷ ರೈತರಿಗೆ, ₹38 ಸಾವಿರ ಕೋಟಿ ಸಾಲ ಮನ್ನ ಸೇರಿದಂತೆ ಹಲವು ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಎಂವಿಎ ಮೈತ್ರಿ ಸರ್ಕಾರ ಕೈಗೊಂಡಿದೆ.

ಕಂಗನಾರ 'ಪಾಕಿಸ್ತಾನ ಆಕ್ರಮಿತ ಕಾಶ್ಮೀರ' ಹೇಳಿಕೆ ಮತ್ತು ಬಂಗಲೆ ನೆಲಸಮ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ವಿಚಾರದಲ್ಲಿ ಕಂಗನಾ ರನೋಟ್‌ ಅವರು ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳ ಮೂಲಕ ವಾಗ್ದಾಳಿಗೆ ಮುಂದಾದರು. 'ಮುಂಬೈ ನಗರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ' ಎಂದು ಪ್ರಶ್ನಿಸಿದ್ದರು. ಇದು ಶಿವಸೇನಾ ಮತ್ತು ಕಂಗನಾ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಯಿತು.

'ಶಿವಸೇನಾ ನಾಯಕ ಸಂಜಯ್‌ ರಾವತ್ ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ನಾನು ಮುಂಬೈಗೆ ಹಿಂತಿರುಗಬಾರದೆಂದು ಅವರು ಹೇಳಿದ್ದಾರೆ. ಈ ಹಿಂದೆ ಮುಂಬೈನ ಬೀದಿ ಗೋಡೆಗಳ ಮೇಲೆ ಆಜಾದಿಯ ಬರಹಗಳು ಕಾಣಿಸಿಕೊಳ್ಳುತ್ತಿದ್ದವು. ಈಗ ಬಹಿರಂಗ ಬೆದರಿಕೆಗಳು ಕೇಳಿಬರುತ್ತಿವೆ. ಮುಂಬೈ ನಗರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ?' ಎಂದು ಕಂಗನಾ ರನೋಟ್ ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ಶಿವಸೇನಾ ಮುಖಂಡ ಸಂಜಯ್‌ ರಾವತ್‌, 'ಶ್ರೇಷ್ಠ ಹಿಂದುತ್ವ ನಾಯಕರಾದ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಮಹಾರಾಣಾ ಪ್ರತಾಪ್ ಅವರ ಸಿದ್ಧಾಂತವನ್ನು ಶಿವಸೇನಾ ಅನುಸರಿಸುತ್ತದೆ. ಅವರು ಮಹಿಳೆಯರನ್ನು ಗೌರವಿಸಲು ನಮಗೆ ಕಲಿಸಿಕೊಟ್ಟಿದ್ದಾರೆ. ಆದರೆ, ಕೆಲವರು ದುರುದ್ದೇಶದಿಂದ ಶಿವಸೇನಾ ಮಹಿಳೆಯರನ್ನು ಅವಮಾನಿಸಿದೆ ಎಂಬ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಈ ಆರೋಪಗಳನ್ನು ಮಾಡುವವರು ಮುಂಬೈ ಮತ್ತು ಮುಂಬಾ ದೇವಿಯನ್ನು ಅವಮಾನಿಸಿದ್ದಾರೆ. ಶಿವಸೇನಾ ಮಹಿಳೆಯರ ಆತ್ಮಗೌರವಕ್ಕಾಗಿ ಹೋರಾಡುತ್ತಲೇ ಇರುತ್ತದೆ. ಇದನ್ನೇ ಮಹಾನ್ ಶಿವಸೇನಾ ನಾಯಕ (ಬಾಳಾ ಠಾಕ್ರೆ) ನಮಗೆ ಕಲಿಸಿದ್ದಾರೆ' ಎಂದು ಹೇಳಿದ್ದರು.

ಇದಾಗಿ ಕೆಲವೇ ದಿನಕ್ಕೆ, ‘ಕಂಗನಾ ಅವರ ಬಾಂದ್ರಾದಲ್ಲಿರುವ ಕಚೇರಿಯು ಅಕ್ರಮ ನಿರ್ಮಾಣ’ ಎಂದು ಆರೋಪಿಸಿ, ಮನೆಯ ಗೇಟ್‌ಗೆ ಮಂಗಳವಾರ ನೋಟಿಸ್‌ ಅಂಟಿಸಲಾಯಿತು. ಮರುದಿನವೇ ಬಂದು ಕಟ್ಟಡದ ಒಂದು ಭಾಗವನ್ನು ನೆಲಸಮಗೊಳಿಸಲಾಯಿತು.

ಮರಾಠಾ ಸಮುದಾಯಕ್ಕೆ ಆದ್ಯತೆ

ಸುಮಾರು ಮೂರು ದಶಕಗಳ ಹೋರಾಟದ ಬಳಿಕ ಮರಾಠ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ವಿಭಾಗದಲ್ಲಿ ಪಟ್ಟಿ ಮಾಡಲು ಮಹಾರಾಷ್ಟ್ರ ಸಚಿವ ಸಂಪುಟ ಡಿಸೆಂಬರ್‌ನಲ್ಲಿ ತೀರ್ಮಾನಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು