ಮಂಗಳವಾರ, ಮಾರ್ಚ್ 28, 2023
23 °C

ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಬಳಿಕ ರವಿಶಂಕರ್‌ ಪ್ರಸಾದ್‌ ಕಾಲೆಳೆದ ರಾವುತ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಬಳಿಕ ಸ್ಥಾನ ಕಳೆದುಕೊಂಡಿರುವ ಬಿಜೆಪಿಯ ಹಿರಿಯ ನಾಯಕ ರವಿಶಂಕರ್‌ ಪ್ರಸಾರ್‌ ಅವರ ಕಾಲೆಳೆದಿದ್ದಾರೆ.

ʼಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಯೊಂದು ಕ್ರಮವೂ ʼಮಾಸ್ಟರ್‌ ಸ್ಟ್ರೋಕ್‌ʼ (ಮಹಾಕಾರ್ಯ) ಎಂಬಂತೆ ರವಿಶಂಕರ್‌ ಪ್ರಸಾದ್‌ ಅವರು ಹೊಗಳುತ್ತಿದ್ದರು. ಆದರೆ, ಈ ಬಾರಿ ಆ ಮಾಸ್ಟರ್‌ ಸ್ಟ್ರೋಕ್‌ ಅವರತ್ತಲೇ (ಪ್ರಸಾದ್‌ ಅವರತ್ತಲೇ) ಪುಟಿದಿದೆʼ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಕಾಶ್‌ ಜಾವಡೇಕರ್‌ ಮತ್ತು ತಾವರಚಂದ್‌ ಗೆಹ್ಲೋಟ್‌ ಅವರೂ ಸ್ಥಾನ ಕಳೆದುಕೊಂಡಿದ್ದಾರೆ ಎಂದು ತಿವಿದಿರುವ ರಾವುತ್‌, ʼಹೊಸ ಮುಖಗಳನ್ನು ಪರಿಚಯಿಸಲಾಗಿದೆ. ನಿಸ್ಸಂಶಯವಾಗಿ, ಅವರನ್ನು ಯೋಗ್ಯತೆಯ ಆಧಾರದ ಮೇಲೆಯೇ ನೇಮಿಸಿಕೊಳ್ಳಲಾಗಿದೆʼ ಎಂದಿದ್ದಾರೆ.

ಮುಂದುವರಿದು, ʼಮಹಾರಾಷ್ಟ್ರದಿಂದ ನಾಲ್ವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಮೂಲತಃ ಅವರು ಶಿವಸೇನಾ ಮತ್ತು ಎನ್‌ಸಿಪಿಗೆ ಸೇರಿದವರಾಗಿದ್ದಾರೆ. ಹಾಗಾಗಿ ನಮ್ಮ ಪಕ್ಷದ ಪ್ರತಿಭಾವಂತ ನಾಯಕರು ಅವರ ಪಕ್ಷದ ಭಾಗವಾಗಿರುವುದಕ್ಕಾಗಿ ಮತ್ತು ಅವರನ್ನು ನಾಯಕರನ್ನಾಗಿ ಮಾಡಿರುವುದಕ್ಕಾಗಿ ಬಿಜೆಪಿ ನಮಗೆ ಕೃತಜ್ಞರಾಗಿರಬೇಕು. ಅವರು (ಸಚಿವರು) ದೇಶ ಮತ್ತು ಮಹಾರಾಷ್ಟ್ರದ ಪ್ರಗತಿಗಾಗಿ ಉತ್ತಮ ಕಾರ್ಯ ಮಾಡಲಿದ್ದಾರೆʼ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ನಾಲ್ವರು ನಾಯಕರು ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಕಪಿಲ್‌ ಪಾಟೀಲ್‌, ಭಾಗವತ್‌ ಕರದ್‌ ಮತ್ತು ಭಾರತಿ ಪವಾರ್‌ ಅವರಿಗೆ ರಾಜ್ಯ ಖಾತೆಗಳನ್ನು ನೀಡಲಾಗಿದೆ.

ರಾಣೆ ಬಿಜೆಪಿ ಸೇರುವ ಮುನ್ನ ಶಿವಸೇನಾ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿದ್ದರು. ಸದ್ಯ ಅವರು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಇಲಾಖೆ ಸಚಿವರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು