ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ, ನಿಕ್ಕಿ, ಮೇಘಾ: 3 ಪ್ರೇಮ ಕತೆ.. ಮೂರು ದುರಂತ ಅಂತ್ಯ

ಮನಸ್ಸು ಹಂಚಿಕೊಂಡಿದ್ದ ಸಂಗಾತಿಗಳನ್ನೇ ಕ್ರೂರವಾಗಿ ಕೊಂದವರ ವಿಕ್ಷಿಪ್ತ ಕಥೆ
Last Updated 16 ಫೆಬ್ರುವರಿ 2023, 6:47 IST
ಅಕ್ಷರ ಗಾತ್ರ

ಘಟನೆ 1: ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು. ಬಳಿಕ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ದೇಹದ ಭಾಗಗಳನ್ನು ಎಸೆಯಲಾಗಿತ್ತು. 2022ರ ಮೇ ತಿಂಗಳಿನಲ್ಲಿ ನಡೆದ ಈ ಘಟನೆ, ಅದೇ ವರ್ಷ ನವೆಂಬರ್‌ನಲ್ಲಿ ಗೊತ್ತಾಗಿತ್ತು.

ಘಟನೆ 2: ದೆಹಲಿಯ ನಜಾಫಗಡದ ಡಾಬಾವೊಂದರ ಫ್ರೀಝರ್‌ನಲ್ಲಿ ಮಹಿಳೆಯ ದೇಹ ಪತ್ತೆಯಾಗಿತ್ತು. 2023ರ ಫೆಬ್ರುವರಿಯಲ್ಲಿ ಈ ಘಟನೆ ನಡೆದಿತ್ತು.

ಘಟನೆ 3: ಮಹಿಳೆಯ ಮೃತದೇಹವು ಚಾಪೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಈ ಘಟನೆ ನಡೆದಿತ್ತು. 2023ರ ಫೆಬ್ರುವರಿಯಲ್ಲಿ ಈ ಘೋರ ನಡೆದಿತ್ತು.

ಈ ಮೂರೂ ಘಟನೆಗಳಲ್ಲಿ ದುರಂತ ಅಂತ್ಯ ಕಂಡಿದ್ದು ಮಹಿಳೆಯರೇ. ಈ ಮೂವರೂ ಕೂಡ ತಮ್ಮ ಸಹಜೀವನ ಸಂಗಾತಿಯಿಂದಲೇ ಜೀವ ಕಳೆದುಕೊಂಡರು ಎನ್ನುವುದು ಕಳವಳಕಾರಿ ಸಂಗತಿ.

ಶ್ರದ್ಧಾ ವಾಲಕರ್ ಪ್ರಕರಣ

ಇಡೀ ದೇಶದ ಗಮನ ಸೆಳೆದ ಭೀಬತ್ಸ ಪ್ರಕರಣವಿದು. 2022ರ ಮೇ 18ರಂದು 28 ವರ್ಷದ ಅಫ್ತಾಬ್‌ ಅಮೀನ್‌ ಪೂನಾವಾಲ ಎಂಬಾತ ತನ್ನ 25 ವರ್ಷದ ಸಹಜೀವನ ಸಂಗಾತಿಯನ್ನು ಕೊಲೆ ಮಾಡಿ 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ಬಳಿಕ 18 ದಿನಗಳ ಅಂತರದಲ್ಲಿ ಆತ ದೇಹದ ಭಾಗಗಳನ್ನು ದೆಹಲಿಯ ಮೆಹ್ರೌಲಿಯ ಕಾಡುಗಳಲ್ಲಿ ಎಸೆದಿದ್ದ. ಆಕೆಯ ಮೂಳೆಗಳನ್ನು ಸುಟ್ಟು, ಗ್ರೈಂಡರ್‌ನಲ್ಲಿ ಅರೆದು ಪುಡಿ ಮಾಡಿದ್ದ. ಬಳಿಕ ಅದನ್ನು ಎಸೆದಿದ್ದ. ಇವೆಲ್ಲವೂ ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ದಾಖಲಾಗಿದೆ.

‘ಶ್ರದ್ಧಾಳನ್ನು ಕೊಲೆ ಮಾಡಿದ ಬಳಿಕ ನಾನು ರಾತ್ರಿ ಸುಮಾರು 07.45ಕ್ಕೆ ಮನೆಯಿಂದ ಹೊರಗೆ ಬಂದೆ. ಪಕ್ಕದಲ್ಲೇ ಇದ್ದ ಹಾರ್ಡ್‌ವೇರ್‌ ಅಂಗಡಿಗೆ ತೆರೆಳಿ ಒಂದು ಗರಗಸ, 3 ಬ್ಲೇಡ್‌ ಹಾಗೂ ಒಂದು ಸುತ್ತಿಗೆಯನ್ನು ಖರೀದಿ ಮಾಡಿದೆ. ಬಳಿಕ ಮನೆಗೆ ಬಂದು ಶ್ರದ್ಧಾಳ ದೇಹವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ ಆಕೆಯ ದೇಹದ ಭಾಗಗಳನ್ನು ತುಂಡು ತುಂಡು ಮಾಡಿ, ಪಾಲಿಥೀನ್‌ ಚೀಲದಲ್ಲಿ ಸುತ್ತಿಟ್ಟಿದ್ದೆ. ಬಳಿಕ ಸಮಯ ಸಿಕ್ಕಾಗೆಲ್ಲಾ ದೇಹದ ಭಾಗಗಳನ್ನು ಎಸೆಯುತ್ತಿದೆ‘ ಎಂದು ಅಫ್ತಾಬ್‌ ಹೇಳಿದ್ದಾಗಿ ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ಅಲ್ಲದೆ ಈ ಕೊಲೆ ಮಾಡಿದ ಬಳಿಕ ತಾನು ಇನ್ನೋರ್ವ ಮಹಿಳೆ ಜತೆ ಸ್ನೇಹ ಬೆಳೆಸಿಕೊಂಡಿದ್ದಾಗಿಯೂ, ಶ್ರದ್ಧಾಳ ದೇಹ ಫ್ರಿಡ್ಜ್‌ನಲ್ಲಿ ಇರುವಾಗಲೇ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾಗಿಯೂ, ಶ್ರದ್ಧಾಳ ಬೆಳ್ಳಿಯ ಉಂಗುರವನ್ನು ಹೊಸ ಗೆಳತಿಗೆ ನೀಡಿದ್ದಾಗಿಯೂ ಅಫ್ತಾಬ್‌ ಹೇಳಿಕೊಂಡಿದ್ದಾನೆ.

ಮುಂಬೈನ ಕಾಲ್‌ ಸೆಂಟರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರದ್ಧಾ, ಅಫ್ತಾಬ್‌ ನೀಡುತ್ತಿದ್ದ ಹಿಂಸೆಯಿಂದಾಗಿ ಆಗಾಗ್ಗೆ ರಜೆ ತೆಗೆದುಕೊಳ್ಳುತ್ತಿದ್ದರು. ಕೊನೆಗೆ ಕೆಲಸ ತೊರೆದಿದ್ದಳು. ಇದಾದ ಬಳಿಕ ದೆಹಲಿಗೆ ಬಂದು ಸಹಜೀವನ ನಡೆಸುತ್ತಿದ್ದರು. ಅವರ ನಡುವೆ ಆಗಾಗ್ಗೆ ಜಗಳ ಉಂಟಾಗುತ್ತಿತ್ತು. ಅವರ ನಡುವಿನ ಸಂಬಂಧ ಹಳಸಿತ್ತು. 2022ರ ಮೇ ತಿಂಗಳಿನಲ್ಲಿ ಈ ಕೊಲೆ ನಡೆದಿದ್ದರೂ, ನವೆಂಬರ್‌ನಲ್ಲಿ ಜಗಜ್ಜಾಹೀರಾಗಿತ್ತು.

ನವೆಂಬರ್‌ 12 ರಂದು ಅಫ್ತಾಬ್‌ನ ಬಂಧನವಾಗಿದ್ದು, ಸದ್ಯ ದೆಹಲಿಯ ತಿಹಾರ್‌ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಆತನಿಗೆ ಮರಣದಂಡನೆ ನೀಡಬೇಕು ಎಂದು ಶ್ರದ್ಧಾರ ಪೋಷಕರು ಆಗ್ರಹಿಸಿದ್ದಾರೆ.

ನಿಕ್ಕಿ ಯಾದವ್‌ ಪ್ರಕರಣ

ನೈಋತ್ಯ ದೆಹಲಿಯ ಮಿತ್ರಾನ್‌ ಗ್ರಾಮದ ನಿವಾಸಿ 24 ವರ್ಷದ ಸಾಹಿಲ್‌ ಗೆಹಲೋತ್‌ ಎಂಬಾದ ತನ್ನ ಸಹಜೀನ ಸಂಗಾತಿ ನಿಕ್ಕಿ ಯಾದವ್‌ ಎಂಬವರನ್ನು ಕೊಲೆ ಮಾಡಿ, ತನ್ನ ಡಾಬಾದ ಫ್ರೀಝರ್‌ನಲ್ಲಿ ಇಟ್ಟಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಇನ್ನೊಬ್ಬಳನ್ನು ವಿವಾಹವೂ ಆಗಿದ್ದ.

ಕಾರಿನಲ್ಲಿದ್ದ ಮೊಬೈಲ್‌ ಡೇಟಾ ಕೇಬಲ್‌ನಿಂದ ನಿಕ್ಕಿ ಯಾದವ್‌ರನ್ನು ಕೊಲೆ ಮಾಡಿದ್ದ ಸಾಹಿಲ್‌, ಬಳಿಕ ತನ್ನ ಪಕ್ಕದಲ್ಲೇ ಶವ ಇರಿಸಿಕೊಂಡು ಸುಮಾರು 40 ಕಿ.ಮಿ ರಾಜಧಾನಿಯಲ್ಲಿ ಕಾರು ಚಲಾಯಿಸಿದ್ದ. ಫೆಬ್ರುವರಿ 9 ಅಥವಾ 10 ರ ರಾತ್ರಿ, ದೆಹಲಿಯ ಕಾಶ್ಮೀರಿ ಗೇಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

2018ರಲ್ಲಿ ಉತ್ತಮ ನಗರದ ಕೋಚಿಂಗ್‌ ಸೆಂಟರ್‌ವೊಂದರಲ್ಲಿ ಭೇಟಿಯಾಗಿದ್ದ ಇವರಿಬ್ಬರ ನಡುವೆ ಪ್ರೇಮಾಂಕುರಗೊಂಡಿತ್ತು. ಒಂದೇ ಕಾಲೇಜಿನಿನಲ್ಲಿ ಓದುತ್ತಿದ್ದ ಇವರು, ಗ್ರೇಟರ್‌ ನೋಯ್ಡಾ ಪ್ರದೇಶದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಸಹಜೀವನ ನಡೆಸಿದ್ದ.

ಈ ನಡುವೆ ಬೇರೆ ಯುವತಿಯನ್ನು ವಿವಾಹವಾಗಲು ಮನೆಯಲ್ಲಿ ಒತ್ತಡ ಇದ್ದಿದ್ದಾಗಿಯೂ, ಫೆಬ್ರುವರಿ 9ರಂದು ನಿಶ್ಚಿತಾರ್ಥ ನಡೆದು ಮರುದಿನ ವಿವಾಹ ನಡೆದಿದ್ದಾಗಿಯೂ ಸಾಹಿಲ್‌ ಹೇಳಿಕೊಂಡಿದ್ದಾನೆ. ಆದರೆ ಮದುವೆಯ ವಿಚಾರ ನಿಕ್ಕಿ ಯಾದವ್‌ಗೆ ತಿಳಿದಿರಲಿಲ್ಲ. ಈ ಬಗ್ಗೆ ಅನುಮಾನ ಬಂದು ವಿಚಾರಿಸಿದಾಗ, ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಸದ್ಯ ಸಾಹಿಲ್‌ನನ್ನು ದೆಹಲಿ ನ್ಯಾಯಾಲಯವು 5 ದಿನಗ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಮೇಘಾ ಧನ್ ಸಿಂಗ್‌ ತೋರ್ವಿ

ನಿಕ್ಕಿ ಯಾದವ್‌ ಕೊಲೆ ಪ್ರಕರಣ ಸದ್ದು ಮಾಡುತ್ತಿರುವಾಲೇ ಮುಂಬೈನ ಪಾಲ್ಗರ್‌ನಲ್ಲಿ ನಡೆದ ಇಂಥಹದೇ ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ಮುಂಬೈನ ಪಾಲ್ಗರ್‌ನಲ್ಲಿ ನಡೆಯಿತು. ತನ್ನ ಸಹಜೀವನ ಸಂಗಾತಿಯನ್ನು ಕೊಲೆ ಮಾಡಿ ಚಾಪೆಯಲ್ಲಿ ಸುತ್ತಿಟ್ಟ ಹಾರ್ದಿಕ್‌ ಎಂಬಾತ ಪೊಲೀಸರ ವಶವಾಗಿದ್ದ.

ಸ್ನೇಹಿತೆಯನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ತುಳಿಂಜ್‌ ಠಾಣೆಯ ಪೊಲೀಸರ ಬಲೆಗೆ ಈತ ಬಿದ್ದಿದ್ದಾನೆ. ಆರೋಪಿಯನ್ನು ಮಧ್ಯಪ್ರದೇಶದ ನಾಗ್ಡಾ ಎಂಬಲ್ಲಿ ರೈಲ್ವೇ ಕಾವಲು ಪಡೆಯ ಪೊಲೀಸರು ಬಂಧಿಸಿದ್ದರು.

ವೃತ್ತಿಯಲ್ಲಿ ಶುಶ್ರೂಷಕಿಯಾಗಿರುವ ಮೇಘಾ ಅವರ ಮೃತದೇಹವು ತುಳಿಂಜ್ ಪ್ರದೇಶದಲ್ಲಿ ಸೋಮವಾರ ಪತ್ತೆಯಾಗಿತ್ತು. ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ನೆರೆಮನೆಯವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಸಿಗೆಯಲ್ಲಿ ಸುತ್ತಿದ್ದ ಮೃತದೇಹ ಪತ್ತೆಯಾಗಿತ್ತು.

ಬಂಧಿತ ಆರೋಪಿಯು ನಿರುದ್ಯೋಗಿಯಾಗಿದ್ದು, ಪದೇ ಪದೇ ಜಗಳವಾಡುತ್ತಿದ್ದ. ಹೀಗೆ ಜಗಳ ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

ಅಲ್ಲದೇ ಕೊಲೆ ಮಾಡಿರುವ ಬಗ್ಗೆ ಹಾಗೂ ಮನೆಯ ಪೀಠೋಪಕರಣಗಳನ್ನು ಮಾರಾಟ ಮಾಡಿರುವ ಬಗ್ಗೆ ಆರೋಪಿ ತನ್ನ ಸಹೋದರಿಗೆ ಸಂದೇಶ ಕಳುಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ 302ನೇ ವಿಧಿಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT