ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಿಯಾಲ ನ್ಯಾಯಾಲಯಕ್ಕೆ ಶರಣಾದ ನವಜೋತ್‌ ಸಿಂಗ್‌ ಸಿಧು

Last Updated 20 ಮೇ 2022, 11:26 IST
ಅಕ್ಷರ ಗಾತ್ರ

ಪಟಿಯಾಲ: ಪಂಜಾಬ್‌ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಶುಕ್ರವಾರ ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

34 ವರ್ಷಗಳ ಹಿಂದೆ 65 ವರ್ಷ ವಯಸ್ಸಿನ ಗುರ್ನಾಮ್‌ ಸಿಂಗ್‌ ಎಂಬುವವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗರೂ ಆದ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಕಠಿಣ ಸಜೆಯನ್ನು ಗುರುವಾರ ವಿಧಿಸಿತ್ತು. ಮೂರು ದಶಕಗಳ ಹಿಂದಿನ ಘಟನೆಯಲ್ಲಿ ಗುರ್ನಾಮ್‌ ಸಿಂಗ್‌ ಮೃತಪಟ್ಟಿದ್ದರು.

ನವತೇಜ್ ಸಿಂಗ್ ಚೀಮಾ ಸೇರಿದಂತೆ ಪಕ್ಷದ ಕೆಲವು ನಾಯಕರೊಂದಿಗೆ ಸಿಧು ಪಟಿಯಾಲ ನ್ಯಾಯಾಲಯಕ್ಕೆ ತೆರಳಿದರು. ಸಿಧು ಕುಳಿತಿದ್ದ ಎಸ್‌ಯುವಿ ಕಾರನ್ನು ಚೀಮಾ ಚಲಾಯಿಸಿದರು.

ಇದಕ್ಕೂ ಮೊದಲು ಶುಕ್ರವಾರ ಬೆಳಗ್ಗೆ ಸಿಧು ನಿವಾಸದ ಎದುರು ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.

‘ಸಿಧು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನ್ಯಾಯಾಲಯಕ್ಕೆ ತೆರಳಲಿದ್ದಾರೆ. ನೀವೆಲ್ಲರೂ 9:30ಗೆ ನ್ಯಾಯಾಲಯದ ಬಳಿಗೆ ಬನ್ನಿ’ ಎಂದು ಪಟಿಯಾಲ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನರೀಂದರ್ ಪಾಲ್ ಲಾಲಿ ಅವರು ಗುರುವಾರ ರಾತ್ರಿ ಪಕ್ಷದ ಬೆಂಬಲಿಗರಿಗೆ ಸಂದೇಶ ನೀಡಿದ್ದರು.

‘ಸಿಧು ಶರಣಾಗಿದ್ದಾರೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ವೈದ್ಯಕೀಯ ಪರೀಕ್ಷೆ ಮತ್ತು ಇತರ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ’ ಎಂದು ಸಿಧು ಅವರ ಮಾಧ್ಯಮ ಸಲಹೆಗಾರ ಸುರಿಂದರ್ ದಲ್ಲಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

‘ಕಾನೂನಿಗೆ ಶರಣಾಗುತ್ತೇನೆ’ ಎಂದು ಸಿಧು ಗುರುವಾರವೇ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT