ಶನಿವಾರ, ಅಕ್ಟೋಬರ್ 31, 2020
22 °C

ಬಾಬರಿ ಮಸೀದಿ ಧ್ವಂಸ ಪ್ರಕರಣ: ‘ಸಾಕ್ಷ್ಯ ಒದಗಿಸಲು ಸಿಬಿಐ ವಿಫಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬಾಬರಿ ಮಸೀದಿಯನ್ನು ಧ್ವಂಸ ಮಾಡಲು ಸಂಚು ರೂಪಿಸಲಾಗಿತ್ತು ಎಂಬುದನ್ನು ಸಾಬೀತು ಮಾಡುವಲ್ಲಿ ಮತ್ತು ಅದಕ್ಕೆ ಅಗತ್ಯವಿದ್ದ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಸಿಬಿಐನ ಜಂಟಿ ನಿರ್ದೇಶಕ ಎಂ. ನಾರಾಯಣ ಅವರು ವಿಫಲರಾಗಿದ್ದಾರೆ’ ಎಂದು ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರದ ತನ್ನ ತೀರ್ಪಿನಲ್ಲಿ ಹೇಳಿದೆ.

‘ಪ್ರಕರಣದಲ್ಲಿ ಆರೋಪಿಗಳಾಗಿದ್ದವರು ಮಸೀದಿಯನ್ನು ಧ್ವಂಸ ಮಾಡಲು ಸಂಚು ರೂಪಿಸಿದ್ದರು. ಅವರ ಭಾಷಣದಿಂದ ಉದ್ರಿಕ್ತರಾಗಿ ಮಸೀದಿಯನ್ನು ಕೆಡವಿದೆವು ಎಂದು ಸಾಕ್ಷ್ಯ ಹೇಳುವ ಒಬ್ಬ ಸಾಕ್ಷಿಯೂ ತನಗೆ ಸಿಗಲಿಲ್ಲ ಎಂದು ತನಿಖಾಧಿಕಾರಿ ಎಂ. ನಾರಾಯಣ ಅವರು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

‘ಆರೋಪಿಗಳಿಗೆ ಸಂಬಂಧಿಸಿದ ವಿಡಿಯೊ ಮತ್ತು ಅಡಿಯೊ ಕ್ಯಾಸೆಟ್‌ಗಳನ್ನು ಸಿಬಿಐ, ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅವುಗಳಲ್ಲಿ ಯಾವ ಕ್ಯಾಸೆಟ್‌ಗಳೂ ‘ಸೀಲ್ಡ್’ ಆಗಿರಲಿಲ್ಲ. ಈ ಕ್ಯಾಸೆಟ್‌ಗಳನ್ನು ತಿರುಚಲಾಗಿಲ್ಲ ಎಂಬುದಕ್ಕೆ ಪೂರಕವಾದ ವಿಧಿವಿಜ್ಞಾನ ಪರೀಕ್ಷೆಯ ವರದಿಯನ್ನು ಸಿಬಿಐ ಸಲ್ಲಿಸಿರಲಿಲ್ಲ. ಅಪರಾಧ ಪ್ರಕ್ರಿಯಾ ಸಂಹಿತೆ ನಿಯಮಗಳನ್ನು ತನಿಖೆಯ ವೇಳೆ ಪಾಲಿಸಲಾಗಿಲ್ಲ ಎಂಬುದನ್ನು ಸಿಬಿಐ ತನಿಖಾಧಿಕಾರಿ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

‘ಬಾಬರಿ ಮಸೀದಿಯನ್ನು ಧ್ವಂಸಮಾಡಿದವರಲ್ಲಿ 425 ಮಂದಿ ಗಾಯಗೊಂಡಿದ್ದರು. ಅವರಲ್ಲಿ ಒಬ್ಬರನ್ನೂ ಆರೋಪಿಗಳನ್ನಾಗಿ ಮಾಡಿಲ್ಲ. ಇದನ್ನು ತನಿಖಾಧಿಕಾರಿಯೇ ಒಪ್ಪಿಕೊಂಡಿದ್ದಾರೆ. ಗಾಯಾಳುಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಾದದ್ದು ತನಿಖಾಧಿಕಾರಿಯ ಕರ್ತ್ಯವ್ಯ. ಆ ಹೇಳಿಕೆಗಳು ಈ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಗಳಾಗಲಿದ್ದವು. ಇದರ ಬದಲಿಗೆ ತನಿಖಾಧಿಕಾರಿಯು ಕೇವಲ ರಾಜಕೀಯ ನಾಯಕರು ಮತ್ತು ಕೆಲವು ಹಿಂದೂ ಸಂಘಟನೆಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ್ದರು’ ಎಂದು ನ್ಯಾಯಾಲಯವು ಹೇಳಿದೆ.

‘ಆರೋಪಿಗಳು ಮಸೀದಿ ಧ್ವಂಸ ಮಾಡಲು ಸಂಚು ರೂಪಿಸಿದ್ದರು ಎಂಬುದನ್ನು ಸಾಬೀತು ಮಾಡಲು ದಿನಪತ್ರಿಕೆಗಳ ಕ್ಲಿಪ್ಪಿಂಗ್‌ಗಳನ್ನು ಸಾಕ್ಷ್ಯಗಳಾಗಿ ಸಲ್ಲಿಸಲಾಗಿತ್ತು. ಆದರೆ, ಮೂಲ ವರದಿಗಳನ್ನು ಸಲ್ಲಿಸಿಲ್ಲ. ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು ಸತ್ಯವೇ ಆಗಿರಬೇಕು ಎಂದೇನೂ ಇಲ್ಲ. ಭಾರತೀಯ ಸಾಕ್ಷ್ಯ ಕಾಯ್ದೆಯ ಪ್ರಕಾರ ಆ ವರದಿಗಳು ಸತ್ಯ ಎಂಬುದನ್ನು ಸಾಬೀತು ಮಾಡಬೇಕು. ಇದಕ್ಕೆ ಪೂರಕವಾಗಿ ವರದಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು. ದಿನಪತ್ರಿಕೆಗಳ ಕ್ಲಿಪ್ಪಿಂಗ್‌ಗಳನ್ನು ಪತ್ರಿಕಾ ಕಚೇರಿಯಿಂದ ಸಂಗ್ರಹಿಸಲಾಗಿದೆ. ಪತ್ರಿಕೆಗಳನ್ನು ಪಡೆದುಕೊಂಡಿದ್ದಕ್ಕೆ ಮೆಮೊ ಸಿದ್ಧಪಡಿಸಬೇಕಿತ್ತು, ಪತ್ರಿಕೆಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಮೆಮೊ ಸಿದ್ಧಪಡಿಸಬೇಕಿತ್ತು. ಆದರೆ ಈ ಯಾವ ಕೆಲಸವನ್ನು ಮಾಡಿಲ್ಲ ಎಂಬುದನ್ನು ತನಿಖಾಧಿಕಾರಿಯೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪತ್ರಿಕಾ ಕ್ಲಿಪ್ಪಿಂಗ್‌ಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿ ಹಲವು ಪತ್ರಿಕೆಗಳ ವರದಿಗಾರರು ಮತ್ತು ಛಾಯಾಗ್ರಾಹಕರನ್ನು ಸಾಕ್ಷಿಗಳನ್ನಾಗಿ ಮಾಡಲಾಗಿತ್ತು.

‘ಧ್ವನಿ ಹೋಲಿಕೆ ಮಾಡಿಲ್ಲ’

‘ತನಿಖೆ ವೇಳೆ ಆರೋಪಿಗಳು ನೀಡಿದ್ದಾರೆ ಎನ್ನಲಾದ ಹೇಳಿಕೆಗಳ ಮೂಲ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಬದಲಿಗೆ ಹೇಳಿಕೆಗಳ ನಕಲುಪ್ರತಿಗಳನ್ನು ಸಲ್ಲಿಸಲಾಗಿತ್ತು. ಅವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯವು ಹೇಳಿದೆ.

‘ಆರೋಪಿಗಳಲ್ಲಿ ಒಬ್ಬರಾಗಿದ್ದ ಸಾಧ್ವಿ ರಿತಾಂಬರ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಧ್ವನಿಮುದ್ರಣ ಇದೆ ಎಂದು ಸಿಬಿಐ ಹೇಳಿತ್ತು. ಆದರೆ ಧ್ವನಿಮುದ್ರಣವನ್ನು ಸಲ್ಲಿಸಿಲ್ಲ. ಬದಲಿಗೆ ಧ್ವನಿಮುದ್ರಣದಲ್ಲಿ ಏನಿದೆ ಎಂಬುದನ್ನು ಲಿಖಿತ ರೂಪದಲ್ಲಿ ನೀಡಲಾಗಿತ್ತು. ಆಕ್ಷೇಪಾರ್ಹ ಘೋಷಣೆ ಕೂಗಿದ್ದಾರೆ ಎಂದು ಹಲವರ ವಿರುದ್ಧ ಆರೋಪ ಮಾಡಲಾಗಿದೆ. ಘೋಷಣೆಗಳು ಇರುವ ಧ್ವನಿಮುದ್ರಣವನ್ನೂ ಸಲ್ಲಿಸಲಾಗಿದೆ. ಆದರೆ ಆರೋಪಿಗಳ ಧ್ವನಿ ಮಾದರಿಯನ್ನು ಸಂಗ್ರಹಿಸಿಲ್ಲ. ಧ್ವನಿಮುದ್ರಣದಲ್ಲಿ ಇರುವ ಧ್ವನಿ ಮತ್ತು ಆರೋಪಿಗಳ ಧ್ವನಿಯನ್ನು ಹೋಲಿಕೆ ಮಾಡಿಲ್ಲ. ಈ ಕೆಸಲಗಳು ಆಗಿದ್ದರೆ, ಧ್ವನಿಮುದ್ರಣಗಳು ಪ್ರಬಲ ಸಾಕ್ಷ್ಯಗಳಾಗುತ್ತಿದ್ದವು’ ಎಂದು ನ್ಯಾಯಾಲಯವು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು