ಗುರುವಾರ , ಜನವರಿ 28, 2021
27 °C
ಕೋವಿಡ್‌–19 ತಡೆಗಾಗಿ ರಷ್ಯಾ ಅಭಿವೃದ್ಧಿಪಡಿಸಿರುವ ಲಸಿಕೆ

‘ಸ್ಪುಟ್ನಿಕ್‌’ ಭಾರತದಲ್ಲಿ ತಯಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ತಡೆಗಾಗಿ ರಷ್ಯಾ ಅಭಿವೃದ್ಧಿಪಡಿಸಿರುವ ಲಸಿಕೆ ಸ್ಪುಟ್ನಿಕ್‌–ವಿ ಯನ್ನು ತಯಾರಿಸುವುದಕ್ಕಾಗಿ ರಷ್ಯನ್‌ ಡೈರೆಕ್ಟ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ (ಆರ್‌ಡಿಐಎಫ್‌) ಮತ್ತು ಭಾರತದ ಔಷಧ ಕಂಪನಿ ಹೆಟಿರೊ ನಡುವೆ ಒಪ್ಪಂದ ಏರ್ಪಟ್ಟಿದೆ. ಪ್ರತಿ ವರ್ಷ 10 ಕೋಟಿ ಡೋಸ್‌ ಲಸಿಕೆಯನ್ನು ಹೆಟಿರೊ ತಯಾರಿಸಲಿದೆ. 2021ರ ಆರಂಭದಲ್ಲಿಯೇ ಲಸಿಕೆ ತಯಾರಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ಬೆಲರೂಸ್‌, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ವೆನೆಜುವೆಲಾ ಮತ್ತು ಇತರ ದೇಶಗಳಲ್ಲಿ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಅನುಮೋದನೆ ದೊರೆತಿದೆ ಅಥವಾ ಪ್ರಯೋಗ ನಡೆಯುತ್ತಿದೆ. ಭಾರತದಲ್ಲಿ ಕೂಡ ಎರಡು ಮತ್ತು ಮೂರನೇ ಹಂತದ ಪ್ರಯೋಗ ಪ್ರಗತಿಯಲ್ಲಿದೆ ಎಂದು ಆರ್‌ಡಿಐಎಫ್‌ ಹೇಳಿದೆ. 

ಸ್ಪುಟ್ನಿಕ್‌–ವಿ ಲಸಿಕೆಯ ಎರಡು ಮತ್ತು ಮೂರನೇ ಹಂತದ ಪ್ರಯೋಗಕ್ಕೆ ಡಾ.ರೆಡ್ಡೀಸ್‌ ಲ್ಯಾಬ್‌ ಮತ್ತು ಆರ್‌ಡಿಐಎಫ್‌ಗೆ ಭಾರತದ ಔಷಧ ಮಹಾನಿಯಂತ್ರಕರು ಅಕ್ಟೋಬರ್‌ನಲ್ಲಿ ಒಪ್ಪಿಗೆ ನೀಡಿದ್ದರು. 

50ಕ್ಕೂ ಹೆಚ್ಚು ದೇಶಗಳು ಸ್ಪುಟ್ನಿಕ್‌–ವಿ ಲಸಿಕೆಗೆ ಬೇಡಿಕೆ ಸಲ್ಲಿಸಿದ್ದು, 120 ಕೋಟಿ ಡೋಸ್‌ಗಳು ಬೇಕಾಗಿವೆ. ಭಾರತ, ಬ್ರೆಜಿಲ್, ಚೀನಾ, ದಕ್ಷಿಣ ಕೊರಿಯಾ ಮತ್ತು ಇತರ ದೇಶಗಳಲ್ಲಿರುವ ಆರ್‌ಡಿಐಎಫ್‌ನ ಅಂತರರಾಷ್ಟ್ರೀಯ ಪಾಲುದಾರರು ತಯಾರಿಸಿದ ಲಸಿಕೆಗಳನ್ನು ಜಾಗತಿಕ ಮಾರುಕಟ್ಟೆಗೆ ಪೂರೈಸಲಾಗುವುದು ಎಂದು ಆರ್‌ಡಿಐಎಫ್‌ ತಿಳಿಸಿದೆ. 

ಲಸಿಕೆಯು ಶೇ 95ರಷ್ಟು ಪರಿಣಾಮಕಾರಿ ಎಂಬುದು ಮನುಷ್ಯನ ಮೇಲಿನ ಪ್ರಯೋಗದಿಂದ ತಿಳಿದು ಬಂದಿದೆ ಎಂದು ಆರ್‌ಡಿಐಎಫ್‌ ಪುನರುಚ್ಚರಿಸಿದೆ.

‘ಹೆಟಿರೊ ಜತೆಗಿನ ಒಪ್ಪಂದದ ಮೂಲಕ ಲಸಿಕೆ ತಯಾರಿಕೆಯ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಳವಾಗಿದೆ. ಸಾಂಕ್ರಾಮಿಕದ ಸವಾಲಿನ ಸಮಯದಲ್ಲಿ ಭಾರತದ ಜನರಿಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸುವುದು ನಮಗೆ ಸಾಧ್ಯವಾಗಲಿದೆ’ ಎಂದು ಆರ್‌ಡಿಐಎಫ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿರಿಲ್‌ ಡಿಮಿಟ್ರಿಯೇವ್‌ ಹೇಳಿದ್ದಾರೆ. 

ಈ ಲಸಿಕೆಯ ಒಂದು ಡೋಸ್‌ನ ದರವು ಹತ್ತು ಡಾಲರ್‌ಗಿಂತ (ಸುಮಾರು ₹740) ಕಡಿಮೆ ಇರಲಿದೆ ಎಂದು ಈಗಾಗಲೇ ಪ್ರಕಟಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು