ಗುರುವಾರ , ಮಾರ್ಚ್ 30, 2023
24 °C

ಸಾಮಾಜಿಕ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಇನ್ನಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಎಲ್ಗಾರ್‌ ಪರಿಷತ್ ಪ್ರಕರಣದ ಪ್ರಮುಖ ಆರೋಪಿ, ಸಾಮಾಜಿಕ ಕಾರ್ಯಕರ್ತ ಫಾದರ್‌ ಸ್ಟ್ಯಾನ್‌ ಸ್ವಾಮಿ (84) ನಿಧನರಾಗಿದ್ದಾರೆ. ಸ್ವಾಮಿ ಅವರ ವಕೀಲ ಮಿಹಿರ್ ದೇಸಾಯಿ ಈ ವಿಚಾರವನ್ನು ಬಾಂಬೆ ಹೈಕೋರ್ಟ್ ಗೆ ಸೋಮವಾರ ತಿಳಿಸಿದ್ದಾರೆ.

‘ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಭಾನುವಾರ ತಡರಾತ್ರಿಯವರೆಗೆ ಅವರು ವೆಂಟಿಲೇಟರ್‌ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಅನಾರೋಗ್ಯ ಹಿನ್ನೆಲೆಯಲ್ಲಿ ಸ್ವಾಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಮೇ 28ರಂದು ಬಾಂಬೆ ಹೈಕೋರ್ಟ್‌ ಆದೇಶ ನೀಡಿತ್ತು.

2017 ಡಿಸೆಂಬರ್ 31 ರಂದು ಪುಣೆಯಲ್ಲಿ, ಭೀಮಾ ಕೋರೆಗಾಂವ್ ಯುದ್ದದ ಸ್ಮರಣಾರ್ಥವಾಗಿ ಎಲ್ಗಾರ್ ಪರಿಷತ್ ಎಂಬ ಕಾರ್ಯಕ್ರಮದಡಿ 260ಕ್ಕೂ ಹೆಚ್ಚು ಸಂಘಟನೆಗಳು ಬೃಹತ್ ಸಮಾವೇಶ ಸಂಘಟಿಸಿದ್ದವು. ಆ ನಂತರ ನಡೆದ ಹಿಂಸಾಚಾರದಲ್ಲಿ ಅನೇಕ ಜನ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸ್ವಾಮಿ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನಿನಡಿ 2020 ರಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿ, ನವಿ ಮುಂಬೈನ ತಲೋಜ ಜೈಲಿನಲ್ಲಿ ಇರಿಸಿತ್ತು.

1937 ಏಪ್ರಿಲ್ 26 ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜನಿಸಿದ್ದ ಪಾಧರ್ ಸ್ಟ್ಯಾನ್‌ ಸ್ವಾಮಿ ಅವರು ಕ್ಯಾಥೋಲಿಕ್ ಪಂಗಡದ ಧರ್ಮಗುರುವಾಗಿ, ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಪ್ರಮುಖವಾಗಿ ಅವರು ಬುಡಕಟ್ಟು ಜನಾಂಗಗಳ ಹಕ್ಕುಗಳಿಗಾಗಿ ತಮ್ಮ ಜೀವಮಾನದುದ್ದಕ್ಕೂ ಹೋರಾಟ ನಡೆಸಿದ್ದರು.

ಇದನ್ನೂ ಓದಿ: ಸ್ಟ್ಯಾನ್‌ ಸ್ವಾಮಿ ಆರೋಗ್ಯ ಸ್ಥಿತಿ ಗಂಭೀರ: ವಕೀಲ ಮಿಹಿರ್ ದೇಸಾಯಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು