ಮಂಗಳವಾರ, ಆಗಸ್ಟ್ 16, 2022
30 °C
ಪಶ್ಚಿಮ ಬಂಗಾಳ ಗೂಂಡಾ ರಾಜ್ಯ– ಬಿಜೆಪಿ

ನಡ್ಡಾ ಕಾರಿನ ಮೇಲೆ ಕಲ್ಲೆಸೆತ; ಆರೋಪ ಅಲ್ಲಗಳೆದ ಟಿಎಂಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಂಚರಿಸುತ್ತಿದ್ದ ವಾಹನ ಮತ್ತು ಜತೆಗಿದ್ದ ವಾಹನಗಳ ಮೇಲೆ ಪಶ್ಚಿಮ ಬಂಗಾಳದ ಡೈಮಂಡ್‌ ಹಾರ್ಬರ್‌ ಪ್ರದೇಶದಲ್ಲಿ ಗುರುವಾರ ಕಲ್ಲೆಸೆಯಲಾಗಿದೆ. ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಟಿಎಂಸಿ ಅಲ್ಲಗಳೆದಿದೆ.

ಬಿಜೆಪಿ ಮತ್ತು ಟಿಎಂಸಿ ನಡುವೆ ವಾಕ್ಸಮರಕ್ಕೆ ಘಟನೆಯು ಕಾರಣವಾಗಿದೆ. ನಡ್ಡಾ ಅವರ ವಾಹನದ ಜತೆಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ, ಉಪಾಧ್ಯಕ್ಷ ಮುಕುಲ್‌ ರಾಯ್‌, ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಅವರ ವಾಹನಗಳ ಮೇಲೆಯೂ ಕಲ್ಲೆಸೆಯಲಾಗಿದೆ. ವಿಜಯವರ್ಗೀಯ ಮತ್ತು ರಾಯ್‌ ಅವರು ಗಾಯಗೊಂಡಿದ್ದು ಕೆಲವು ವಾಹನಗಳು ಹಾನಿಗೊಂಡಿವೆ. ಬಿಜೆಪಿ ಕಾರ್ಯಕರ್ತರೊಬ್ಬರ ತಲೆಗೆ ಪೆಟ್ಟಾಗಿದೆ. 

ಗುಂಡು ನಿರೋಧಕ ವಾಹನದಲ್ಲಿ ಸಂಚರಿಸುತ್ತಿದ್ದ ಏಕೈಕ ಕಾರಣಕ್ಕೆ ಸುರಕ್ಷಿತವಾಗಿ ಉಳಿದಿರುವುದಾಗಿ ನಡ್ಡಾ ಹೇಳಿದ್ದಾರೆ. ಡೈಮಂಡ್‌ ಹಾರ್ಬರ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕಲ್ಲೆಸೆತದ ಘಟನೆಯು ‘ಆಘಾತಕರ’, ರಾಜ್ಯದಲ್ಲಿ ಪೂರ್ಣ ಅರಾಜಕ ಸ್ಥಿತಿ ಇದೆ ಎಂದರು. 

ನಡ್ಡಾ ಮತ್ತು ಇತರ ಮುಖಂಡರ ಕಾರಿನ ಮೇಲೆ ಕಲ್ಲೆಸೆಯಲಾಗಿದೆ ಎಂಬುದನ್ನು ಪಶ್ಚಿಮ ಬಂಗಾಳ ಪೊಲೀಸರು ಅಲ್ಲಗಳೆದಿದ್ದಾರೆ. ನಡ್ಡಾ ಅವರು ಸುರಕ್ಷಿತವಾಗಿ ಸ್ಥಳ ತಲುಪಿದ್ದಾರೆ. ನಡ್ಡಾ ಅವರ ವಾಹನ ಸಾಲಿಗಿಂತ ಬಹಳ ಹಿಂದಿದ್ದ ವಾಹನಗಳ ಮೇಲೆ ದೇಬಿಪುರ ಎಂಬಲ್ಲಿ ದಾರಿಯಲ್ಲಿ ನಿಂತಿದ್ದ ಕೆಲವರು ಕಲ್ಲೆಸೆದಿದ್ದಾರೆ. ವಾಸ್ತವವಾಗಿ ಏನು ನಡೆಯಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

ಮಮತಾ ತಿರುಗೇಟು

‘ಅವರು (ಬಿಜೆಪಿ ಕಾರ್ಯಕರ್ತರು) ಪ್ರತಿದಿನವೂ ಶಸ್ತಾಸ್ತ್ರಗಳ ಜತೆಗೇ ರ‍್ಯಾಲಿಗಳಿಗೆ ಬರುತ್ತಾರೆ. ತಮಗೆ ತಾವೇ ಹೊಡೆದುಕೊಂಡು ಟಿಎಂಸಿಯ ಮೇಲೆ ಆರೋಪ ಹೊರಿಸುತ್ತಾರೆ. ಈ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಿ. ಅವರು ಬಿಎಸ್‌ಎಫ್‌, ಸಿಆರ್‌ಪಿಎಫ್‌, ಸೇನೆ, ಸಿಐಎಸ್ಎಫ್‌ ಸಿಬ್ಬಂದಿಯನ್ನು ಜತೆಗಿಟ್ಟುಕೊಂಡೇ ಓಡಾಡುತ್ತಾರೆ. ಅವರಿಗೆ ಹೆದರಿಕೆ ಏಕೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ವರದಿ ಕೇಳಿದ ಕೇಂದ್ರ

‘ಈ ವಿಚಾರವನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಿದೆ. ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೇಳಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಘಟನೆ ನಡೆದು ಕೆಲವೇ ತಾಸುಗಳಲ್ಲಿ ಟ್ವೀಟ್‌ ಮಾಡಿದ್ದಾರೆ. ಟಿಎಂಸಿ ಸರ್ಕಾರವನ್ನು ಶಾ ಅವರು ಟೀಕಿಸಿದ್ದಾರೆ. ರಾಜ್ಯದ ಶಾಂತಿಪ್ರಿಯ ಜನರಿಗೆ ಈ ಪ್ರಾಯೋಜಿತ ಹಿಂಸೆಯ ಕುರಿತು ಪಶ್ಚಿಮ ಬಂಗಾಳ ಸರ್ಕಾರವು ಉತ್ತರ ನೀಡಬೇಕಾಗುತ್ತದೆ ಎಂದು ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ.

***

ದುರ್ಗಾಮಾತೆಯ ಆಶೀರ್ವಾದದಿಂದ ಇಲ್ಲಿಗೆ ತಲುಪಿದ್ದೇನೆ. ಹಿರಿಯ ನಾಯಕರ ಸ್ಥಿತಿಯೇ ಹೀಗಾದರೆ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಪರಿಸ್ಥಿತಿ ಏನು?

- ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ

***

ಸಾಲಿನ ಕೊನೆಯಲ್ಲಿದ್ದ ಕಾರಿಗೆ ಕಲ್ಲು ಬಿದ್ದದ್ದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದು ಯಾರು? ಅಷ್ಟೊಂದು ಬೇಗನೆ ಇದನ್ನು ಮಾಡುವುದು ಹೇಗೆ ಸಾಧ್ಯವಾಯಿತು?

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು