ಭಾನುವಾರ, ಸೆಪ್ಟೆಂಬರ್ 26, 2021
28 °C

ಓಕಾ ಸೇರಿ 9 ಹೆಸರು ‘ಸುಪ್ರೀಂ’ಗೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು 9 ಜನರ ಹೆಸರನ್ನು, ಸುಪ್ರೀಂ ಕೋರ್ಟ್‌ ಕೊಲಿಜಿಯಂ ಬುಧವಾರ ಶಿಫಾರಸು ಮಾಡಿದೆ. ಇದರಲ್ಲಿ ವಿವಿಧ ಹೈಕೋರ್ಟ್‌ನ ಮೂವರು ಮಹಿಳಾ ನ್ಯಾಯಮೂರ್ತಿಗಳ ಹೆಸರೂ ಇದೆ.

‘ಆಗಸ್ಟ್ 17ರಂದು ನಡೆದ ಕೊಲಿ ಜಿಯಂ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ದೇಶದ ಬೇರೆ-ಬೇರೆ ಹೈಕೋರ್ಟ್‌ನ 9 ಜನರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಶಿಫಾರಸು ಮಾಡ ಲಾಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ , ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್, ಮದ್ರಾಸ್ ಹೈಕೋರ್ಟ್‌ನ ಎಂ.ಎಂ.ಸುಂದ್ರೇಶ್, ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಂನಾಥ್ ಮತ್ತು ನ್ಯಾಯಮೂರ್ತಿ ಬೇಲಾ ತ್ರಿವೇದಿ, ಸಿಕ್ಕಿಂ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಮಹೇಶ್ವರಿ, ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಕೊಲಿಜಿಯಂ ಶಿಫಾರಸು ಮಾಡಿದೆ.

ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ಅವರನ್ನು ಕೊಲಿಜಿಯಂ ಶಿಫಾರಸು ಮಾಡಿದೆ. ನರಸಿಂಹ ಅವರು ನೇಮಕವಾದರೆ ಅವರು, ವಕೀಲರಿಂದಲೇ ನೇರವಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾದ ಆರನೇ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ.

ನ್ಯಾಯಮೂರ್ತಿ ನೇಮಕ: ಊಹಾಪೋಹಕ್ಕೆ ಅತೃಪ್ತಿ

ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಅಧಿಕೃತವಾಗಿ ಪ್ರಕಟಿಸುವ ಮುನ್ನವೇ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆಯಲಿರುವ ಒಂಬತ್ತು ನ್ಯಾಯಮೂರ್ತಿಗಳ ನೇಮಕಾತಿ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೊಲಿಜಿಯಂ ಶಿಫಾರಸು ಮಾಡಿದ್ದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯು ಊಹಾಪೋಹದ್ದು. ಅಷ್ಟೇ ಅಲ್ಲ. ಬೇಜವಾಬ್ದಾರಿಯಿಂದಲೂ ಕೂಡಿದೆ. ಇಂತಹ ವರದಿಗಳು, ‍ಅರ್ಹ ಪ್ರತಿಭೆಗಳಿಗೆ ದಕ್ಕಬಹುದಾಗಿದ್ದ ಅವಕಾಶಗಳನ್ನೂ ಹಾಳು ಮಾಡುತ್ತವೆ. ಇಂಥ ವರದಿಗಳು ಪ್ರಕಟವಾಗಿದ್ದು ದುರದೃಷ್ಟಕರ’ ಎಂದಿರುವ ಅವರು, ಇದರಿಂದ ತಮಗೆ ತೀವ್ರ ಬೇಸರವಾಗಿದೆ ಎಂದು ಹೇಳಿದರು.

ಬುಧವಾರ ನಿವೃತ್ತಿಯಾದ, ನ್ಯಾಯಮೂರ್ತಿ ನವೀನ್‌ ಸಿನ್ಹಾ ಅವರ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ ರಮಣ, ‘ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯು ಪವಿತ್ರವಾಗಿದ್ದು ಅದಕ್ಕೆ ಅದರದ್ದೇ ಆದ ಘನತೆ ಇದೆ. ಮಾಧ್ಯಮಗಳು ಅದರ ಪಾವಿತ್ರ್ಯವನ್ನು ಅರ್ಥಮಾಡಿಕೊಂಡು ನಡೆಯಬೇಕು’ ಎಂದರು.

ಮೂವರು ಮಹಿಳಾ ನ್ಯಾಯಮೂರ್ತಿಗಳು ಸೇರಿದಂತೆ ಒಂಬತ್ತು ನ್ಯಾಯಮೂರ್ತಿಗಳ ಹೆಸರನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದ್ದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಕೊಲಿಜಿಯಂನ ಅಧಿಕೃತ ಪ್ರಕಟಣೆ ಬುಧವಾರ ಹೊರಬಿದ್ದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು