ಗುರುವಾರ , ಸೆಪ್ಟೆಂಬರ್ 23, 2021
20 °C

ನ್ಯಾಯಮೂರ್ತಿಗಳ ಜೀವನ ಸುಖಕರವೇನಲ್ಲ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನ್ಯಾಯಮೂರ್ತಿಗಳು ಸುಖವಾಗಿ ಬದುಕುತ್ತಿದ್ದಾರೆ ಎಂದು ಜನರ ಮನದಲ್ಲಿ ಇರುವ ಭಾವನೆಗಳು ಅಥವಾ ತಪ್ಪು ಗ್ರಹಿಕೆಗಳನ್ನು ಸರಿಪಡಿಸಬೇಕಾದ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಗುರುವಾರ ಹೇಳಿದ್ದಾರೆ. 

ಸೀಮಿತವಾದ ಸಂಪನ್ಮೂಲವನ್ನು ಬಳಸಿಕೊಂಡು ನ್ಯಾಯಮೂರ್ತಿಗಳು ಎಷ್ಟು ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ನ್ಯಾಯಮೂರ್ತಿಗಳು ಮಾಡುವ ಅತ್ಯಂತ ದೊಡ್ಡ ತ್ಯಾಗ ಹಣಕಾಸಿಗೆ ಸಂಬಂಧಿಸಿದ್ದಾಗಿದೆ. ಆದರೆ, ಸಾರ್ವಜನಿಕ ಕರ್ತವ್ಯದ ಸ್ಫೂರ್ತಿಯ ದೃಷ್ಟಿಯಿಂದ ಇಂತಹ ನಿರ್ಧಾರ (ನ್ಯಾಯಾಂಗವನ್ನು ಸೇರುವ) ತೆಗೆದುಕೊಳ್ಳಲಾಗುತ್ತದೆ ಎಂದರು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಆರ್‌.ಎಫ್‌. ನರೀಮನ್‌ ಅವರಿಗೆ ವಿದಾಯ ಕೋರಲು ಸುಪ್ರೀಂ ಕೋರ್ಟ್‌ ವಕೀಲರ ಸಂಘವು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಮಣ ಮಾತನಾಡಿದರು. ನ್ಯಾಯಮೂರ್ತಿಗಳು ಸಮಾಜದ ಜತೆಗೆ ಸಂಪರ್ಕ ಹೊಂದಿರಬೇಕು, ಸಂಪೂರ್ಣವಾಗಿ ದೂರವೇ ಇರುವುದು ಸರಿಯಾದ ಕ್ರಮ ಅಲ್ಲ ಎಂದೂ ಅವರು ಅಭಿಪ್ರಾಯಪಟ್ಟರು. 

‘ನ್ಯಾಯಮೂರ್ತಿಗಳು ಪ್ರತಿ ದಿನವೂ ಎಷ್ಟು ಕೆಲಸ ಮಾಡುತ್ತಿದ್ದಾರೆ ಎಂಬುದರತ್ತ ಗಮನ ಸೆಳೆಯಬೇಕು. ನ್ಯಾಯಮೂರ್ತಿಗಳು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಾರೆ. ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಮಾತ್ರ ಕೆಲಸ ಇರುತ್ತದೆ. ರಜಾ ದಿನಗಳನ್ನು ಆರಾಮವಾಗಿ ಕಳೆಯುತ್ತಾರೆ ಎಂಬ ತಪ್ಪು ಗ್ರಹಿಕೆ ಜನರಲ್ಲಿ ಇದೆ’ ರಮಣ ಹೇಳಿದರು.

ಪ್ರತಿ ವಾರವೂ ತಲಾ ನೂರು ಪ್ರಕರಣಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳುವುದು, ವಾದ–ಪ್ರತಿವಾದಗಳನ್ನು ಆಲಿಸುವುದು, ಸ್ವತಂತ್ರ ಸಂಶೋಧನೆ ನಡೆಸುವುದು ಮತ್ತು ತೀರ್ಪುಗಳನ್ನು ಬರೆಯುವುದು ಸುಲಭದ ಕೆಲಸವೇನೂ ಅಲ್ಲ. ಅದರ ಜತೆಗೆ, ವಿಶೇಷವಾಗಿ ಹಿರಿಯ ನ್ಯಾಯಮೂರ್ತಿಗಳು ಆಡಳಿತಾತ್ಮಕವಾದ ವಿವಿಧ ಕೆಲಸಗಳನ್ನೂ ನಿಭಾಯಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು. 

‘ನಾವು ಮಧ್ಯರಾತ್ರಿವರೆಗೆ ಕೂತು ಕೆಲಸ ಮಾಡುತ್ತೇವೆ ಇಲ್ಲವೇ ಬೆಳಿಗ್ಗಿನ ಜಾವ ಎದ್ದು ಕೆಲಸ ಮಾಡುತ್ತೇವೆ. ಒಮ್ಮೊಮ್ಮೆ ಎರಡನ್ನೂ ಮಾಡುತ್ತೇವೆ. ನ್ಯಾಯಾಲಯಕ್ಕೆ ರಜೆ ಇದ್ದಾಗಲೂ ನಾವು ಕೆಲಸ ಮಾಡುತ್ತೇವೆ. ಬಾಕಿ ಇರುವ ತೀರ್ಪುಗಳಿಗಾಗಿ ಸಂಶೋಧನಾ ಕೆಲಸ ನಡೆಸುತ್ತೇವೆ. ಹಾಗಾಗಿಯೇ, ನ್ಯಾಯಮೂರ್ತಿಗಳ ಜೀವನ ಕ್ರಮದ ಬಗ್ಗೆ ಹುಸಿ ಸಂಕಥನಗಳು ಸೃಷ್ಟಿಯಾದಾಗ ಅದನ್ನು ಸಹಿಸಿಕೊಳ್ಳುವುದು ಸುಲಭವಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ‘ನಮ್ಮನ್ನು ನಾವು ಸಮರ್ಥಿಸಿಕೊಳ್ಳುವಂತಿಲ್ಲ. ಹಾಗಾಗಿ, ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ ಜಾಗೃತಿ ಮೂಡಿಸುವುದು ವಕೀಲರ ಸಂಘದ ಕೆಲಸ’ ಎಂದು ರಮಣ ಸೂಚಿಸಿದರು. 

‘ಪ್ರಾಮಾಣಿಕವಾಗಿ ಹೇಳುತ್ತೇನೆ, ನರೀಮನ್‌ ಅವರು ನ್ಯಾಯಮೂರ್ತಿ ಹುದ್ದೆ ವಹಿಸಿಕೊಳ್ಳುವ ಬದಲು ವಕೀಲರಾಗಿಯೇ ಮುಂದುವರಿದಿದ್ದರೆ ಈಗಿನದಕ್ಕಿಂತ ಹೆಚ್ಚು ಐಷಾರಾಮದ ಮತ್ತು ವಿರಾಮದ ಬದುಕು ನಡೆಸಬಹುದಾಗಿತ್ತು. ತಮ್ಮೆಲ್ಲ ಕೆಲಸಗಳನ್ನು ಸಮತೋಲನದಿಂದ ನಡೆಸಲು ಮತ್ತು ಗುಣಮಟ್ಟದ ಕೆಲಸ ಮಾಡಲು ಅವರಿಗೆ ಸಾಧ್ಯವಾಗಿದೆ. ಅದು ಅವರಿಗೆ ಕೆಲಸ ಮೇಲೆ ಇದ್ದ ಬದ್ಧತೆ ಮತ್ತು  ಅವರ ಸಾಮರ್ಥ್ಯದ ಪ್ರಮಾಣಪತ್ರ’ ಎಂದು ಶ್ಲಾಘಿಸಿದರು.

‘ಕಾವಲು ಸಿಂಹ’

‘ನ್ಯಾಯಾಂಗ ಸಂಸ್ಥೆಯ ಕಾವಲು ಕಾಯುತ್ತಿದ್ದ ಸಿಂಹಗಳಲ್ಲಿ ಒಂದನ್ನು ಕಳೆದುಕೊಂಡ ಭಾವ ನನ್ನಲ್ಲಿದೆ. ಸಮಕಾಲೀನ ನ್ಯಾಯಾಂಗ ವ್ಯವಸ್ಥೆಯ ಬಲವಾದ ಸ್ತಂಭವಾಗಿ ಅವರು ಇದ್ದರು’ ಎಂದು ನರೀಮನ್‌ ಅವರ‌ನ್ನು ಮುಖ್ಯ ನ್ಯಾಯಮೂರ್ತಿ ಬಣ್ಣಿಸಿದ್ದಾರೆ.

ವಕೀಲ ಸಮುದಾಯದಿಂದ ನೇರವಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾದ ಐದನೇ ವ್ಯಕ್ತಿ ನರೀಮನ್‌.

‘ನರೀಮನ್‌ ಅವರ ತೀರ್ಪುಗಳು ಸ್ಪಷ್ಟತೆ, ಪಾಂಡಿತ್ಯಪೂರ್ಣ ಧೋರಣೆ ಮತ್ತು ಜ್ಞಾನವನ್ನು ಪ್ರತಿಬಿಂಬಿಸುತ್ತಿದ್ದವು. ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಮನಸ್ಸು ತುಂಬಿ ಬಂದಿದೆ. ಭಾವನೆಗಳನ್ನು ಪ್ರಕಟಿಸುವುದು ಕಷ್ಟವಾಗುತ್ತಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ನರೀಮನ್‌ ಅವರು 2014ರ ಜುಲೈ 7ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಈವರೆಗೆ ಅವರು 13,500 ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದಾರೆ. ಖಾಸಗಿತನವೂ ಮೂಲಭೂತ ಹಕ್ಕು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಬಂಧನ ರದ್ದತಿ, ಸಹಮತದ ಸಲಿಂಗ ಲೈಂಗಿಕತೆಯ ಅಪರಾಧ ಮುಕ್ತಿ ಮತ್ತು ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತ ಪ್ರವೇಶದಂತಹ ಚಾರಿತ್ರಿಕ ತೀರ್ಪು ನೀಡಿದ ಪೀಠಗಳಲ್ಲಿ ನರೀಮನ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು