ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಕೊಡುಗೆ ಆಮಿಷ: ಪಕ್ಷಗಳ ಚಿಹ್ನೆ, ನೋಂದಣಿ ರದ್ದತಿಗೆ ಅರ್ಜಿ- ಸುಪ್ರೀಂ ನೋಟಿಸ್

Last Updated 25 ಜನವರಿ 2022, 19:32 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆ ಪ್ರಚಾರದಲ್ಲಿ ಉಚಿತ ಕೊಡುಗೆಗಳ ಆಮಿಷ ಒಡ್ಡುವ ಪಕ್ಷಗಳ ಚಿಹ್ನೆಯನ್ನು ವಾಪಸ್ ಪಡೆಯಬೇಕು ಮತ್ತು ನೋಂದಣಿಯನ್ನು ರದ್ದುಪಡಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಿ ಎಂದು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

‘ಚುನಾವಣೆಗಳಲ್ಲಿ ಒಡ್ಡುವ ಇಂತಹ ಆಮಿಷಗಳು ಮತದಾರರ ಮೇಲೆ ಹಾಗೂ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಇದು ಸಂವಿಧಾನ ವಿರೋಧಿ. ಇಂತಹ ಉಚಿತಕೊಡುಗೆಗಳ ಬಜೆಟ್‌, ಮುಖ್ಯ ಬಜೆಟ್‌ನ ಗಾತ್ರವನ್ನೂ ಮೀರುತ್ತದೆ. ಇದನ್ನು ತಡೆಯಬೇಕು’ ಎಂದು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.

‘ಇದೊಂದು ಗಂಭೀರ ವಿಚಾರ. ರಾಜಕೀಯ ಪಕ್ಷಗಳು ನೀಡುವ ಈ ಕೊಡುಗೆಗಳ ಹೊರೆಯನ್ನು ಸಾರ್ವಜನಿಕರು ಹೊರಬೇಕಾಗುತ್ತದೆ. ಈಗ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ನೀಡುತ್ತಿರುವ ಇಂತಹ ಭರವಸೆಗಳನ್ನು ತಡೆಯಬೇಕು’ ಎಂದು ಅರ್ಜಿದಾರರ ಪರ ವಕೀಲ ವಿಕಾಸ್ ಸಿಂಗ್ ವಾದಿಸಿದರು.

ಆಗ ಪೀಠವು, ‘ಈ ಹಿಂದೆ ಈ ಬಗ್ಗೆ ಇದೇ ನ್ಯಾಯಾಲಯವು ತೀರ್ಪು ನೀಡಿದೆ. ಅದನ್ನು ಗಮನಿಸಿದ್ದೀರಾ’ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.

‘ಇದು ಸರಿಯಾದುದಲ್ಲ ಎಂದು ನ್ಯಾಯಾಲಯವು ಈ ಹಿಂದೆಯೇ ಹೇಳಿದೆ. ಈ ಬಗ್ಗೆ ಚುನಾವಣಾ ಆಯೋಗವು ಈವರೆಗೆ ಕೇವಲ ಒಂದು ಸಭೆಯನ್ನು ಮಾತ್ರ ನಡೆಸಿದೆ. ಇದನ್ನು ತಡೆಯಲು ಮಾರ್ಗಸೂಚಿಗಳನ್ನು ರಚಿಸುವಂತೆ ನ್ಯಾಯಾಲಯವು ಹೇಳಿತ್ತು. ಆದರೆ ಆಯೋಗವು ರಚಿಸಿರುವ ಮಾರ್ಗಸೂಚಿಗಳು ಹಲ್ಲಿಲ್ಲದ ಹಾವಿನಂತಾಗಿದೆ’ ಎಂದು ವಕೀಲ ವಿಕಾಸ್ ಸಿಂಗ್ ವಾದಿಸಿದರು.

‘ಕೆಲವು ಪಕ್ಷಗಳು ಮಹಿಳೆಯರಿಗೆ ₹1,000 ನೀಡುವುದಾಗಿ ಹೇಳುತ್ತಿವೆ. ಕೆಲವು ಪಕ್ಷಗಳು ಉಚಿತ ವಿದ್ಯುತ್ ನೀಡುವುದಾಗಿ ಹೇಳುತ್ತಿವೆ. ಅಂತಿಮವಾಗಿ ಇವುಗಳ ಹೊರೆಯನ್ನು ನಾಗರಿಕರು ಹೊರಬೇಕಾಗುತ್ತದೆ. ಇಂತಹ ಕೊಡುಗೆ ನೀಡಿದ್ದರಿಂದಲೇ ಪಂಜಾಬ್‌ನ ಸಾಲವು ₹1.80 ಲಕ್ಷ ಕೋಟಿಯಾಗಿದೆ’ ಎಂದು ವಿಕಾಸ್ ವಾದಿಸಿದರು.

ಆಗ ಪೀಠವು, ‘ಯಾವುದೋ ಒಂದು ರಾಜ್ಯದ ಹೆಸರು ಹೇಳುವುದು ಬೇಡ. ಇದಕ್ಕೆ ಏನು ಪರಿಹಾರ ಎಂಬುದೇ ಮುಖ್ಯವಾದುದು. ಪರಿಹಾರಗಳಿದ್ದರೆ ಹೇಳಿ. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವೂ ಪ್ರತಿಕ್ರಿಯೆ ನೀಡಲಿ’ ಎಂದು ಹೇಳಿತು.

ಕಾನೂನು ಜಾರಿಗೆ ಆಗ್ರಹ

ಇದನ್ನು ತಡೆಯಲು ಕಾನೂನನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

‘ಕಾನೂನು ಅಥವಾ ಆದೇಶವನ್ನು ಜಾರಿಗೆ ತರಲು ಬಹಳ ಸಮಯವಾಗುತ್ತದೆ. ಅಷ್ಟರಲ್ಲಿ ಚುನಾವಣೆಯೇ ಮುಗಿದು ಹೋಗಿರುತ್ತದೆ’ ಎಂದು ಪೀಠವು ಹೇಳಿತು. ಅಂತಹ ಕಾನೂನು ಬಂದರೆ ಮುಂದಿನ ಚುನಾವಣೆಗಳಿಗಾದರೂ ಅನುಕೂಲವಾಗುತ್ತದೆ ಎಂದು ವಕೀಲರು ಹೇಳಿದರು.

***

ಎಲ್ಲಾ ಪಕ್ಷಗಳೂ ಚುನಾವಣೆ ಸಂದರ್ಭದಲ್ಲಿ ಇಂತಹ ಆಮಿಷ ಒಡ್ಡುತ್ತಿವೆ. ಇದರಿಂದ ರಾಜ್ಯಗಳ ಸಾಲ ಏರಿಕೆಯಾಗುತ್ತಿದೆ

- ವಿಕಾಸ್‌ ಸಿಂಗ್, ಅರ್ಜಿದಾರರ ಪರ ವಕೀಲ

***

ಎಲ್ಲಾ ಪಕ್ಷಗಳೂ ಇಂತಹ ಆಮಿಷ ಒಡ್ಡುತ್ತವೆ ಎಂದು ಇಲ್ಲಿ ಹೇಳುತ್ತಿದ್ದೀರಿ. ಆದರೆ, ನಿಮ್ಮ ಅರ್ಜಿಯಲ್ಲಿ ಎರಡು ಪಕ್ಷಗಳನ್ನಷ್ಟೇ ಏಕೆ ಹೆಸರಿಸಿದ್ದೀರಿ?

-ಎನ್‌.ವಿ.ರಮಣ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT