ಸೋಮವಾರ, ಜೂನ್ 14, 2021
21 °C
ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ‘ಸುಪ್ರೀಂ’ ನಕಾರ

ರಾಜ್ಯಕ್ಕೆ ಆಮ್ಲಜನಕ ಹೆಚ್ಚಳ ತಡೆಯುವ ಕೇಂದ್ರದ ಯತ್ನಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕರ್ನಾಟಕದ ಪಾಲಿನ ವೈದ್ಯಕೀಯ ಆಮ್ಲಜನಕವನ್ನು ದಿನಕ್ಕೆ 1,200 ಟನ್‌ಗೆ ಹೆಚ್ಚಿಸುವುದನ್ನು ತಡೆಯುವ ಕೇಂದ್ರದ ಪ್ರಯತ್ನಕ್ಕೆ ಸೋಲಾಗಿದೆ. ಕರ್ನಾಟಕಕ್ಕೆ ಪ್ರತಿ ದಿನ ಪೂರೈಸುವ ಆಮ್ಲಜನಕದ ಪಾಲನ್ನು 1,200 ಟನ್‌ಗೆ ಹೆಚ್ಚಿಸುವಂತೆ ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶ ನೀಡಿತ್ತು. ಈ ಆದೇಶಕ್ಕೆ ತಡೆ ಕೊಡುವಂತೆ ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿತ್ತು. ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಸ್ಪಷ್ಟವಾಗಿ ಹೇಳಿದೆ. 

ಕೋವಿಡ್‌–19ರ ಎರಡನೇ ಅಲೆಯಿಂದ ಕರ್ನಾಟಕದ ಜನರು ಸಂಕಷ್ಟದಲ್ಲಿರಲು ಬಿಡಲಾಗದು. ಜನರ ಅಗತ್ಯಗಳ ವಿಚಾರದಲ್ಲಿ ಹೈಕೋರ್ಟ್‌ಗಳು ಮೌನವಾಗಿರುವುದು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎಂ.ಆರ್‌. ಶಾ ಅವರ ಪೀಠವು ಹೇಳಿದೆ.

ಆಮ್ಲಜನಕ ಪೂರೈಕೆ ವಿಚಾರದಲ್ಲಿ ಹೈಕೋರ್ಟ್‌ಗಳು ಕೇಂದ್ರಕ್ಕೆ ನಿರ್ದೇಶನ ನೀಡಲು ಆರಂಭಿಸಿದರೆ, ಅವುಗಳನ್ನು ಕಾರ್ಯರೂಪಕ್ಕೆ ತರಲಾಗದು ಮತ್ತು ಕೊನೆಗೆ ಅದು ಅರಾಜಕ ಸ್ಥಿತಿಗೆ ಕಾರಣವಾಗಬಹುದು ಎಂದು ಕೇಂದ್ರದ ಪರವಾ
ದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಹೇಳಿದರು. ಆದರೆ ಪೀಠ, ಈ ವಾದಕ್ಕೆ ಮನ್ನಣೆ ಕೊಡಲಿಲ್ಲ. 

‘ಈ ನಿರ್ದೇಶನ ನೀಡಲು ಹೈಕೋರ್ಟ್‌ ಸಮರ್ಪಕ ಕಾರಣಗಳನ್ನು ಕೊಟ್ಟಿದೆ. ಈ ನಿರ್ದೇಶನವು ತಾತ್ಕಾಲಿಕ ಎಂಬು
ದು ಸ್ಪಷ್ಟ. ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಜತೆಯಾಗಿ ಸಮಸ್ಯೆಯನ್ನು ಪರಿಹರಿಸುವವರೆಗೆ ಮಾತ್ರ ಈ ಲೆಕ್ಕಾಚಾರ (ದಿನಕ್ಕೆ 1,200 ಟನ್‌ ಆಮ್ಲಜನಕ ಪೂರೈಕೆ) ಜಾರಿಯಲ್ಲಿರುತ್ತದೆ’ ಎಂದು ಪೀಠವು ಲಿಖಿತ ಆದೇಶದಲ್ಲಿ ಹೇಳಿದೆ. 

ಏಪ್ರಿಲ್‌ 30ರಂದು ರಾಜ್ಯದ ಅಗತ್ಯ 802 ಟನ್‌ ಮಾತ್ರವೇ ಆಗಿತ್ತು. ಮೇ 1ರಂದು ಅದನ್ನು 856 ಟನ್‌ಗೆ ಮತ್ತು ಮೇ 5ರಂದು 965 ಟನ್‌ಗೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಬುಧವಾರ (ಮೇ 5) ಅಂದಾಜಿಸಿದಂತೆ ಆಮ್ಲಜನ
ಕದ ಅಗತ್ಯವು 1162 ಟನ್‌ ಆಗಿತ್ತು. ಪ್ರಕರಣಗಳು 3.95 ಲಕ್ಷಕ್ಕೆ ಏರಿದರೆ ದಿನಕ್ಕೆ 1,800 ಟನ್‌ ಆಮ್ಲಜನಕ ಬೇಕಾಗಬ
ಹುದು ಎಂದೂ ಸರ್ಕಾರ ಅಂದಾಜಿಸಿದೆ ಎಂಬುದರತ್ತ ಪೀಠ ಗಮನ ಸೆಳೆಯಿತು. 

ಸರ್ಕಾರವು ಅಖಿಲ ಭಾರತ ಮಟ್ಟದ ಧೋರಣೆಯನ್ನು ಈ ವಿಚಾರದಲ್ಲಿ ಅನುಸರಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ಕರ್ನಾಟಕದ ಜತೆಗೆ ಸಭೆ ನಡೆಸಿ ಆಮ್ಲಜನಕ ಬೇಡಿಕೆಯ ಸಮಸ್ಯೆ ಪರಿಹರಿಲು ಸಿದ್ಧ ಎಂದು ಮೆಹ್ತಾ ಹೇಳಿದರು.

‘ಜನರಿಗೆ ತೀವ್ರ ಅನ್ಯಾಯ ಆಗುವುದು ನಮಗೆ ಬೇಕಿಲ್ಲ. ನ್ಯಾಯಮೂರ್ತಿಗಳು ಕೂಡ ಮನುಷ್ಯರೇ. ಕಲಬುರ್ಗಿ ಮತ್ತು ಇತರೆಡೆಗಳಲ್ಲಿನ ಸಾವನ್ನು ಅವರು ನೋಡಿರಬೇಕು. ಮಾನವೀಯ ಆಯಾಮವನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ’ ಎಂದು ಪೀಠವು ಹೇಳಿದೆ. 

ಕರ್ನಾಟಕ ಹೈಕೋರ್ಟ್‌ ರೀತಿಯಲ್ಲಿಯೇ ಇತರ ಹೈಕೋರ್ಟ್‌ಗಳು ಆದೇಶ ನೀಡಿದರೆ ಕೋವಿಡ್‌–19 ಪಿಡುಗಿನ ವಿರುದ್ಧ ಹೋರಾಡುವ ವ್ಯವಸ್ಥೆಯೇ ಕುಸಿದು ಬೀಳುತ್ತದೆ ಎಂದು ಕೇಂದ್ರದ ಅರ್ಜಿಯಲ್ಲಿ ಹೇಳಲಾಗಿತ್ತು. 

ಹೈಕೋರ್ಟ್ ಆದೇಶವು ಸಂಪನ್ಮೂಲದ ಕೆಟ್ಟ ನಿರ್ವಹಣೆಗೆ ಕಾರಣವಾಗಿ, ಈಗಾಗಲೇ ಅತಿಯಾದ ಹೊರೆ ಹೊತ್ತಿರುವ ವ್ಯವಸ್ಥೆಯನ್ನು ಅರಾಜಕಗೊಳಿಸುತ್ತದೆ ಎಂದೂ ಮೆಹ್ತಾ ವಾದಿಸಿದ್ದಾರೆ.

‘ದೆಹಲಿಗೆ 700 ಟನ್‌ ಆಮ್ಲಜನಕ ಪೂರೈಸಿ’:

ದೆಹಲಿಗೆ 700 ಟನ್‌ ಆಮ್ಲಜನಕ ಪೂರೈಸುವ ಕೇಂದ್ರದ ಬದ್ಧತೆಯು ಒಂದು ದಿನಕ್ಕೆ ಸೀಮಿತವಲ್ಲ.  ಮುಂದಿನ ಆದೇಶದವರೆಗೆ ಪ್ರತಿ ದಿನವೂ ಪೂರೈಸಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. 

‘ದಿನಕ್ಕೆ 700 ಟನ್‌ ಪೂರೈಸಬೇಕು ಎಂದರೆ ಪೂರೈಸಬೇಕು ಎಂದೇ ಅರ್ಥ. ಬಲಪ್ರಯೋಗ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರಬೇಡಿ’ ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ನೇತೃತ್ವದ ಪೀಠವು ಖಾರವಾಗಿಯೇ ಹೇಳಿದೆ. 

ಗುರುವಾರ ಮಧ್ಯರಾತ್ರಿವರೆಗೆ 527 ಟನ್‌ ಮಾತ್ರ ಪೂರೈಕೆ ಆಗಿದೆ. ಶುಕ್ರವಾರ ಬೆಳಿಗ್ಗೆ 86 ಟನ್‌ ಸಿಕ್ಕಿದೆ. ಇನ್ನೂ 16 ಟನ್‌ ಸಾಗಾಟದಲ್ಲಿದೆ ಎಂದು ದೆಹಲಿ ಸರ್ಕಾರದ ಪರ ವಕೀಲ ರಾಹುಲ್‌ ಮೆಹ್ರಾ ಪೀಠಕ್ಕೆ ಮಾಹಿತಿ ಕೊಟ್ಟರು. 

‘ನೀವು ಗುರುವಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ 700 ಟನ್‌ ಪೂರೈಕೆ ಆಗಿದೆ ಎಂದಿದೆ. ಆದರೆ, ಕಂಟೈನರ್‌ಗಳು ಮತ್ತು ಟ್ಯಾಂಕರ್‌ಗಳಿಗೆ ಸಂಬಂಧಿಸಿದ ವಿವರಣೆಗಳು ಮತ್ತು ಸ್ಪಷ್ಟೀಕರಣಗಳಿವೆ. ನಾವು ಕಂಟೈನರ್‌ ಚಾಲಕರಲ್ಲ. ಪ್ರತಿ ದಿನ 700 ಟನ್‌ ಆಮ್ಲಜನಕ ಪೂರೈಸಬೇಕಿದೆ ಎಂಬುದನ್ನು ದಯವಿಟ್ಟು ಗಮನದಲ್ಲಿ ಇರಿಸಿಕೊಳ್ಳಿ’ ಎಂದು ಪೀಠವು ಕೇಂದ್ರಕ್ಕೆ ಸೂಚಿಸಿತು.

‘ಆಮ್ಲಜನಕ ಬೇಕಾದರೆ ಸಿಎಂಗೆ ಕೇಳಿ’

ತುಮಕೂರು: ‘ಆಮ್ಲಜನಕ ಬೇಕಾದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೇ ಕೇಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮುಖಂಡರೊಬ್ಬರಿಗೆ ಹೇಳಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಗರದಲ್ಲಿ ಬುಧವಾರ ರಾತ್ರಿ ಆಮ್ಲಜನಕ ಕೊರತೆ ಕಾಣಿಸಿಕೊಂಡಿರುವ ವಿಚಾರವನ್ನು ತಿಳಿಸಲು ಸಚಿವರಿಗೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯ ಮಂಜುನಾಥ್ ಕರೆ ಮಾಡಿದ್ದಾರೆ.

‘ತುಮಕೂರಿನಲ್ಲಿ ಆಮ್ಲಜನಕದ ಕೊರತೆಯಾಗಿದೆ. ನೀವು ಜಿಲ್ಲಾ ಉಸ್ತುವಾರಿ ಸಚಿವರು. ದಯಮಾಡಿ, ಇದೊಂದು ಕೆಲಸ ಮಾಡಿಕೊಡಿ. ಆಮ್ಲಜನಕ ಕೊಡಿಸಿ’ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಉತ್ತರಿಸಿದ ಸಚಿವರು, ‘ಆಮ್ಲಜನಕ ಬೇಕಾದರೆ ದಯಮಾಡಿ ಮುಖ್ಯಮಂತ್ರಿಗೆ ಮಾತನಾಡಿ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು