ಭಾನುವಾರ, ಮೇ 29, 2022
30 °C
ತ್ರಿಪುರಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಪೀಠ

ಕೋಮುಗಲಭೆ ವರದಿ: ಪತ್ರಕರ್ತೆಯರ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋಮುಗಲಭೆಯ ವರದಿಗೆ ಸಂಬಂಧಿಸಿದಂತೆ ತ್ರಿಪುರಾ ಪೊಲೀಸರು ಎಚ್‌ಡಬ್ಲ್ಯು ನ್ಯೂಸ್‌ ನೆಟ್‌ವರ್ಕ್‌ ಮತ್ತು  ಪತ್ರಕರ್ತೆಯರಾದ ಸಮೃದ್ಧಿ ಸುಕುನಿಯಾ ಮತ್ತು ಸ್ವರ್ಣಾ ಝಾ ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಬುಧವಾರ ತಡೆ ನೀಡಿದೆ. 

ಡಿಜಿಟಲ್ ನ್ಯೂಸ್ ಪೋರ್ಟಲ್ ಎಚ್‌ಡಬ್ಲ್ಯೂ ನ್ಯೂಸ್ ನೆಟ್‌ವರ್ಕ್ ಮತ್ತು ಥಿಯೋಸ್ ಕನೆಕ್ಟ್ ಸಲ್ಲಿಸಿದ ಮನವಿಯ ಮೇರೆಗೆ ಮೇಲೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠವು ತ್ರಿಪುರಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪತ್ರಕರ್ತೆಯರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ, ನಂತರ ಅವರಿಗೆ ಜಾಮೀನು ನೀಡಲಾಗಿದೆ. ಆದರೆ, ಈಗ ಅವರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಿರುವುದು ಸಮರ್ಥನೀಯವಲ್ಲ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು. 

‘ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳು ಪತ್ರಿಕೆ ಮತ್ತು ಪತ್ರಕರ್ತೆಯರಿಗೆ ಕಿರುಕುಳ ನೀಡುವ ಪ್ರಯತ್ನವಾಗಿದೆ. ಪತ್ರಕರ್ತೆಯರ ವರದಿಗಳು ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಯಾವುದೇ ಅಂಶವನ್ನು ಹೊಂದಿಲ್ಲದ ಕಾರಣ ಈ ಎಫ್‌ಐಆರ್‌ಗಳು ರಾಜಕೀಯದಿಂದ ಪ್ರೇರಿತವಾಗಿವೆ’ ಎಂದೂ ಅವರು ಪ್ರತಿಪಾದಿಸಿದರು.

‘ತ್ರಿಪುರಾದಲ್ಲಿ ನಡೆದ ಕೋಮುಗಲಭೆಗಳ ಹಿಂದಿನ ಸತ್ಯಗಳನ್ನು ಪತ್ತೆ ಹಚ್ಚುವುದು ಮತ್ತು ವಾಸ್ತವ ವರದಿ ಮಾಡುವುದು ಪತ್ರಕರ್ತೆಯರ ಪ್ರಯತ್ನವಾಗಿದೆ. ಅವರಿಬ್ಬರ ವಿರುದ್ಧ ಪೊಲೀಸರು ಆರೋಪಿಸಿರುವ ದ್ವೇಷಭಾಷಣದ ಅಪರಾಧವು ವಿಚಿತ್ರವಾಗಿದೆ’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಮುಂದೆ ವಾದಿಸಿದರು.

ಪ್ರಕರಣದ ಸಂಕ್ಷಿಪ್ತ ವಿಚಾರಣೆಯ ನಂತರ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿಕ್ರಂನಾಥ್ ಅವರನ್ನೊಳಗೊಂಡ ಪೀಠವು, ‘ತ್ರಿಪುರಾ ಪೊಲೀಸರಿಗೆ ನೋಟಿಸ್ ನೀಡಲಾಗುವುದು ಮತ್ತು ಪತ್ರಕರ್ತೆಯರ ವಿರುದ್ಧ ದಾಖಲಾದ ಎಫ್‌ಐಆರ್‌ಗಳ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದು’ ಎಂದು ಹೇಳಿತು. 

ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನಾಲ್ಕು ವಾರಗಳಲ್ಲಿ ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು