ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃಣಮೂಲ ಕಾಂಗ್ರೆಸ್‌ಗೆ ಪಕ್ಷಾಂತರದ ಏಟು; ಒಂಬತ್ತು ಶಾಸಕರು ಬಿಜೆಪಿಗೆ ಸೇರ್ಪಡೆ

ಅಮಿತ್‌ ಶಾ ಸಮ್ಮುಖದಲ್ಲಿ ಕಾರ್ಯಕ್ರಮ
Last Updated 19 ಡಿಸೆಂಬರ್ 2020, 19:42 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ 2011ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲಿಗೆ ಅತ್ಯಂತ ದೊಡ್ಡ ಪಕ್ಷಾಂತರವನ್ನು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಶನಿವಾರ ಕಂಡಿತು. ಪ್ರಭಾವಿ ಮುಖಂಡ ಮತ್ತು ಮಾಜಿ ಸಚಿವ ಸುವೇಂದು ಅಧಿಕಾರಿ ಸೇರಿ ಪಕ್ಷದ ಐವರು ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಮೇದಿನಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದರು. 2018ರಲ್ಲಿ ಸಿಪಿಎಂ ತೊರೆದು ಟಿಎಂಸಿ ಸೇರಿದ್ದ ಶಾಸಕಿ ದೀಪಾಲಿ ಬಿಸ್ವಾಸ್ ಮತ್ತು ‌ಸಿಪಿಎಂ, ಸಿಪಿಐ ಹಾಗೂ ಕಾಂಗ್ರೆಸ್‌ನ ತಲಾ ಒಬ್ಬ ಶಾಸಕರು ಕೂಡ ಬಿಜೆಪಿಗೆ ಸೇರಿದ್ದಾರೆ.

ಬರ್ಧಮಾನ್‌ ಪೂರ್ವ ಕ್ಷೇತ್ರದ ಟಿಎಂಸಿ ಸಂಸದ ಸುನಿಲ್‌ ಮಂಡಲ್‌ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಅತ್ಯಂತ ದೊಡ್ಡ ಹಿನ್ನಡೆ ಇದು ಎಂದು ವಿಶ್ಲೇಷಿಸಲಾಗಿದೆ. ಒಂದು ಕಾಲದಲ್ಲಿ ಮಮತಾ ಅವರ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದ ಸುವೇಂದು ಅವರು, ಟಿಎಂಸಿ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2011ರಲ್ಲಿ ಪಕ್ಷಕ್ಕೆ ಅಧಿಕಾರ ತಂದು ಕೊಟ್ಟ ನಂದಿಗ್ರಾಮ ಹೋರಾಟದ ಮುಂಚೂಣಿಯಲ್ಲಿ ಅವರು ಇದ್ದರು. ಈಗ, ಅವರು ಪಶ್ಚಿಮ ಬಂಗಾಳವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ನೀಡಬೇಕು ಎಂದು ಕರೆ ಕೊಟ್ಟಿದ್ದಾರೆ.

‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರಬೇಕು ಎಂದು ನಾನು ಬಯಸುತ್ತೇನೆ. ಇಲ್ಲದೇ ಇದ್ದರೆ ಪಶ್ಚಿಮ ಬಂಗಾಳಕ್ಕೆ ಉಳಿಗಾಲವಿಲ್ಲ. ಇಲ್ಲಿನ ಅರ್ಥ ವ್ಯವಸ್ಥೆ ಮುರಿದುಬಿದ್ದಿದೆ. ಉದ್ಯೋಗ ಇಲ್ಲ, ಎಲ್ಲೆಡೆ ಭ್ರಷ್ಟಾಚಾರ ಇದೆ. ಈ ಎಲ್ಲದರಿಂದ ಹೊರಗೆ ಬರಲು ಇರುವ ಏಕೈಕ ದಾರಿಯೆಂದರೆ ರಾಜ್ಯವನ್ನು ಮೋದಿ ಕೈಗೆ ನೀಡುವುದು’ ಎಂದು ಅಧಿಕಾರಿ ಹೇಳಿದ್ದಾರೆ.

ಚತುರ ಸಂಘಟಕನಾಗಿರುವ ಸುವೇಂದು ಅವರು ಮಮತಾ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ. 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಸ್ಥಾನ ಪಡೆಯಲಿದೆ. ಟಿಎಂಸಿ ಎರಡನೇ ಸ್ಥಾನಕ್ಕೆ ಇಳಿಯಲಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ನಾಯಕರನ್ನು ಹೊರಗಿನವರು ಎಂದು ಹೇಳಿರುವ ಮಮತಾ ಅವರನ್ನು ಸುವೇಂದು ತರಾಟೆಗೆ ತೆಗೆದುಕೊಂಡಿದ್ದಾರೆ. ‘ನಾವು ಮೊದಲು ಭಾರತೀಯರು, ನಂತರ ಬಂಗಾಳಿಗಳು’ ಎಂದು ಅವರು ಹೇಳಿದ್ದಾರೆ.

ಸುವೇಂದು ಅವರ ಪಕ್ಷಾಂತರವು ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಗೆ ಬಹುದೊಡ್ಡ ಹೊಡೆತ ನೀಡಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 50 ಕ್ಷೇತ್ರಗಳಲ್ಲಿ ಅವರು ಪ್ರಭಾವಿಯಾಗಿದ್ದಾರೆ. ಟಿಎಂಸಿಯಲ್ಲಿ ಮಮತಾ ಅವರನ್ನು ಬಿಟ್ಟರೆ ಅತಿ ಹೆಚ್ಚು ಜನಮನ್ನಣೆ ಇದ್ದ ನಾಯಕ ಅವರಾಗಿದ್ದರು. ಆದರೆ, ಇಂತಹ ಪಕ್ಷಾಂತರಗಳಿಂದ ಟಿಎಂಸಿಗೆ ಯಾವ ತೊಂದರೆಯೂ ಆಗದು ಎಂದು ಸಚಿವ ಫಿರ್ಹಾದ್‌ ಹಕೀಮ್‌ ಅವರು ಹೇಳಿದ್ದಾರೆ.

‘ಚುನಾವಣೆ ಹೊತ್ತಿಗೆ ಮಮತಾ ಏಕಾಂಗಿ’
ಚುನಾವಣೆಯ ಹೊತ್ತಿಗೆ ಮಮತಾ ಅವರು ಟಿಎಂಸಿಯಲ್ಲಿ ಏಕಾಂಗಿಯಾಗಲಿದ್ದಾರೆ ಎಂದು ಶಾ ಹೇಳಿದ್ದಾರೆ. ಟಿಎಂಸಿಯ ‘ತಾಯಿ, ತಾಯ್ನಾಡು ಮತ್ತು ಜನರು’ಘೋಷಣೆಯು ಈಗ ‘ಸುಲಿಗೆ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ’ ಎಂದು ಬದಲಾಗಿದೆ ಎಂದು ಶಾ ಆಪಾದಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿನ ವಿಧಾನಸಭೆಯ ಸದಸ್ಯ ಬಲ 294.

‘ರಾಜ್ಯದ ಪರಿವರ್ತನೆಗಾಗಿ ಜನರು ಬಿಜೆಪಿಯ ಜತೆಗೆ ನಿಂತಿದ್ದಾರೆ. ಇದು ಆರಂಭ ಮಾತ್ರ. ಈ ಎಲ್ಲರೂ ಸ್ವಯಂಪ್ರೇರಿತರಾಗಿ ಟಿಎಂಸಿ ಬಿಟ್ಟಿದ್ದಾರೆ. ಟಿಎಂಸಿಯನ್ನು ಜನರು ತ್ಯಜಿಸುವ ರೀತಿ ನೋಡಿದರೆ, ಚುನಾವಣೆಯ ಹೊತ್ತಿಗೆ ಪಕ್ಷದಲ್ಲಿ ಮಮತಾ ಬ್ಯಾನರ್ಜಿ ಒಬ್ಬರೇ ಉಳಿಯುತ್ತಾರೆ’ ಎಂದು ಶಾ ಹೇಳಿದ್ದಾರೆ. ಟಿಎಂಸಿಯ ಮುಖಂಡರು ಪಕ್ಷಾಂತರ ಮಾಡುವಂತೆ ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಮಮತಾ ಹೇಳಿರುವುದನ್ನು ಶಾ ಹಂಗಿಸಿದ್ದಾರೆ. 1998ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಿಟ್ಟು ಮಮತಾ ಟಿಎಂಸಿ ಸ್ಥಾಪಿಸಿದ್ದು ಪಕ್ಷಾಂತರ ಅಲ್ಲವೇ ಎಂದು ಕೇಳಿದ್ದಾರೆ.

*
ಬಿಜೆಪಿ ಜಗತ್ತಿನ ದೊಡ್ಡ ಪಕ್ಷ. ಈ ಪಕ್ಷವು ರಾಷ್ಟ್ರೀಯತೆ, ಬಹುತ್ವವನ್ನು ಪ್ರತಿಪಾದಿಸುತ್ತದೆ. ಪಶ್ಚಿಮ ಬಂಗಾಳವು ಯಾವುದೇ ವ್ಯಕ್ತಿಯ ವೈಯಕ್ತಿಕ ಸಾಮ್ರಾಜ್ಯ ಅಲ್ಲ.
-ಸುವೇಂದು ಅಧಿಕಾರಿ, ಬಿಜೆಪಿ ಸೇರಿದ ಟಿಎಂಸಿ ಮುಖಂಡ

*
ಸಿಪಿಎಂ ಬಿಟ್ಟವರ ವಿರುದ್ಧ ಆರೋಪಗಳಿವೆ. ಅವರ ವಿರುದ್ಧ ತನಿಖೆ ನಡೆಯುತ್ತಿತ್ತು. ಕ್ರಮೇಣ ಅವರು ಪಕ್ಷ ಬಿಡಬೇಕಾದ ಸ್ಥಿತಿ ನಿರ್ಮಾಣ ಆಗುತ್ತಿತ್ತು.
-ಸೂರ್ಯಕಾಂತ ಮಿಶ್ರಾ, ಪಶ್ಚಿಮ ಬಂಗಾಳ ಸಿಪಿಎಂ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT