ಭಾನುವಾರ, ಜೂನ್ 20, 2021
28 °C

ತಮಿಳುನಾಡು: ಚೊಚ್ಚಲ ಚುನಾವಣೆಯಲ್ಲಿ ಅಣ್ಣಾಮಲೈಗೆ ಹಲವು ಸವಾಲು

ಇ.ಟಿ.ಬಿ. ಶಿವಪ್ರಿಯನ್ Updated:

ಅಕ್ಷರ ಗಾತ್ರ : | |

Prajavani

ಅರವಿಕುರಿಚಿ (ತಮಿಳುನಾಡು): ಕರ್ನಾಟಕದಲ್ಲಿ ಒಂದು ದಶಕ ಐಪಿಎಸ್‌ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಅವರು, ಈಗ ತಮಿಳುನಾಡು ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಲು ಬೆವರು ಹರಿಸುತ್ತಿದ್ದಾರೆ. ಅಧಿಕಾರಿಯಾಗಿದ್ದಾಗ ತಮ್ಮ ಕಾರ್ಯಶೈಲಿಯಿಂದಾಗಿ ‘ಸಿಂಘಂ’ ಎಂದೇ ಖ್ಯಾತರಾಗಿದ್ದ ಅವರು ತಮ್ಮ ಹುಟ್ಟೂರು ಅರವಕುರಿಚಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.  

ಐಪಿಎಸ್‌ಗೆ ರಾಜೀನಾಮೆ ನೀಡಿದ ಬಳಿಕ ಕರೂರು ಜಿಲ್ಲೆಯ ತಮ್ಮ ಹುಟ್ಟೂರಲ್ಲಿ ನೆಲೆಯಾದ ಅಣ್ಣಾಮಲೈ ಅವರು ವಿದ್ಯಾರ್ಥಿಗಳಿಗೆ ನೆರವಾಗುವುದಕ್ಕಾಗಿ ಪ್ರತಿಷ್ಠಾನವೊಂದನ್ನು ಆರಂಭಿಸಿದ್ದಾರೆ. ಅವರು ಸ್ಪರ್ಧಿಸಿರುವ ಅರವಿಕುರಿಚಿ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇನೂ ಇಲ್ಲ. ಮತ ಸೆಳೆಯಲು ಮಿತ್ರಪಕ್ಷ ಎಐಎಡಿಎಂಕೆಯ ಮೇಲೆಯೇ ಅವಲಂಬಿತರಾಗಬೇಕು. ಜತೆಗೆ, ಪ್ರತಿಸ್ಪರ್ಧಿಗಳು ಪ್ರಭಾವಿಗಳಾಗಿರುವುದರಿಂದ ಅಣ್ಣಾಮಲೈ ಮುಂದೆ ದೊಡ್ಡ ಸವಾಲೇ ಇದೆ. 

ಮೈತ್ರಿಕೂಟದ ಇತರ ಪಾಲುದಾರ ಪಕ್ಷಗಳಾದ ಪಿಎಂಕೆ ಮತ್ತು ಟಿಎಂಎಂಕೆ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಪ್ರಭಾವ ಹೊಂದಿವೆ. 

‘ಪ್ರಾಮಾಣಿಕ ಅಧಿಕಾರಿ’ ಎಂಬ ಹೆಸರು ಸ್ವಲ್ಪ ಮಟ್ಟಿಗೆ ನೆರವಾಗಬಹುದು. ಜತೆಗೆ, ಅಣ್ಣಾಮಲೈ ಅವರು ಇಲ್ಲಿನ ಪ್ರಭಾವಿ ಗೌಂಡರ್‌ ಸಮುದಾಯದವರು. ಇದು ಕೂಡ ಸಹಕಾರಿ ಆಗಬಹುದು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಕ್ಷೇತ್ರದ ಅಭಿವೃದ್ಧಿ ತಮಗೆ ಸುಲಭವಾಗಬಹುದು ಎಂದು ಅಣ್ಣಾಮಲೈ ಅವರು ಪ್ರಚಾರ ಸಂದರ್ಭದಲ್ಲಿ ಹೇಳುತ್ತಿದ್ದಾರೆ. 

ಪಕ್ಷದ ಸ್ಥಳೀಯ ಕಾರ್ಯಕರ್ತರ ಜತೆಗೆ, ಕರ್ನಾಟಕದ ‘ಸ್ವಯಂಸೇವಕರ’ ಗುಂಪು ಕೂಡ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಸಣ್ಣ ಸಣ್ಣ ಗುಂಪುಗಳಾಗಿ ಇವರು ಕರಪತ್ರಗಳನ್ನು ಹಂಚುತ್ತಿದ್ದಾರೆ ಮತ್ತು ಅಧಿಕಾರಿಯಾಗಿದ್ದಾಗ ಅಣ್ಣಾಮಲೈ ಹೇಗಿದ್ದರು ಎಂದು ಮತದಾರರಿಗೆ ಹೇಳುತ್ತಿದ್ದಾರೆ. 

‘ಅಣ್ಣಾಮಲೈ ಪರ ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದೇನೆ. ಅವರೊಬ್ಬ ಒಳ್ಳೆಯ ಮನುಷ್ಯ. ಅವರು ಗೆಲ್ಲಬೇಕು. ನನ್ನ ಹರಕುಮುರುಕು ತಮಿಳಿನಲ್ಲಿ ಅವರ ಬಗ್ಗೆ ಜನರಿಗೆ ಹೇಳುತ್ತಿದ್ದೇನೆ’ ಎಂದವರು ಬೆಂಗಳೂರಿನಿಂದ ಬಂದಿರುವ ಪುನೀತ್‌. 

ಕುಡಿಯುವ ನೀರು ಮತ್ತು ನೀರಾವರಿಯೇ ದೊಡ್ಡ ಸಮಸ್ಯೆಗಳಾಗಿರುವ ಈ ಹಿಂದುಳಿದ ಕ್ಷೇತ್ರದಲ್ಲಿ ಗೌಂಡರ್‌ ಸಮುದಾಯದ ಆರ್‌. ಇಳಂಗೊ ಅವರನ್ನು ಡಿಎಂಕೆ ಕಣಕ್ಕಿಳಿಸಿದೆ. ಟಿ.ಟಿ.ವಿ. ದಿನಕರನ್‌ ಅವರ ಎಎಂಎಂಕೆ, ಕಮಲಹಾಸನ್‌ ಅವರ ಎಂಎನ್‌ಎಂ, ನಾಮ್‌ ತಮಿಳರ್‌ ಕಚ್ಚಿ ಪಕ್ಷದ ಅಭ್ಯರ್ಥಿಗಳೂ ಕಣದಲ್ಲಿ ಇದ್ದಾರೆ. 

ಪಕ್ಷದ ಪರಂಪರಾಗತ ಮತಗಳ ಜತೆಗೆ ಮುಸ್ಲಿಂ ಮತಗಳ ಧ್ರುವೀಕರಣಕ್ಕೆ ಡಿಎಂಕೆ ಯತ್ನಿಸುತ್ತಿದೆ. ಬಿಜೆಪಿ ಇಲ್ಲಿ ಸ್ಪರ್ಧಿಸಿರುವುದರಿಂದ ಡಿಎಂಕೆಗೆ ಇದು ಸುಲಭವೂ ಆಗಬಹುದು.

ಪಲ್ಲಪಟ್ಟಿ ಪ್ರದೇಶದಲ್ಲಿರುವ ಮುಸ್ಲಿಮರ 35 ಸಾವಿರ ಮತಗಳೇ ಇಲ್ಲಿ ನಿರ್ಣಾಯಕ. ಬಿಜೆಪಿ ಕೂಡ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯಲು ಯತ್ನಿಸುತ್ತಿದೆ. ಹಿಂದೂ ಮತಗಳ ಧ್ರುವೀಕರಣದ ಯತ್ನವನ್ನೂ ಬಿಜೆಪಿ ಮಾಡುತ್ತಿದೆ. ಮುಸ್ಲಿಂ ಪ್ರಾಬಲ್ಯದ ಪ್ರದೇಶಕ್ಕೆ ಅಣ್ಣಾಮಲೈ ಅವರು ಭೇಟಿ ನೀಡುವುದನ್ನು ಸ್ಥಳೀಯ ಜಮಾತ್‌ ವಿರೋಧಿಸಿದೆ. 

‘ನನಗೆ ಕೋಮು ರಾಜಕಾರಣ ಬೇಕಾಗಿಲ್ಲ. ಹಾಗಾಗಿಯೇ ಪಲ್ಲಪಟ್ಟಿಯಲ್ಲಿರುವ ನನ್ನ ಜನರನ್ನು ಸಮೀಪಿಸಿದ್ದೇನೆ. ಆ ಪ್ರದೇಶವನ್ನೂ ಅಭಿವೃದ್ಧಿ ಮಾಡಬೇಕು. ನಿರುದ್ಯೋಗ ಮತ್ತು ನೀರಿನ ಕೊರತೆ ಇಲ್ಲಿನ ದೊಡ್ಡ ಸಮಸ್ಯೆಗಳು. ಇವುಗಳ ಪರಿಹಾರಕ್ಕೆ ನಾನು ಯೋಜನೆ ರೂಪಿಸಿದ್ದೇನೆ’ ಎಂದು ಅಣ್ಣಾಮಲೈ ಅವರು ‘ಪ್ರಜಾವಾಣಿ’ಗೆ ಹೇಳಿದ್ದಾರೆ. 

ಅಣ್ಣಾಮಲೈ ಅಂಥವರು ಶಾಸಕರಾಗಬೇಕು ಎಂದು ಕರೂರು–ಮದುರೈ ಹೆದ್ದಾರಿಯಲ್ಲಿ ಚಹಾದಂಗಡಿ ನಡೆಸುವ ಅರಿವಳಗನ್‌ ಹೇಳುತ್ತಾರೆ. ಆದರೆ, ಈ ಬಾರಿ ಅವರು ಗೆಲ್ಲುವ ಸಾಧ್ಯತೆ ಬಗ್ಗೆ ಅರಿವಳಗನ್‌ಗೆ ಖಚಿತವಾಗಿ ಹೇಳಲಾಗುತ್ತಿಲ್ಲ. ಈ ಪ್ರದೇಶದಲ್ಲಿ ಬಿಜೆಪಿಗೆ ಜನಪ್ರಿಯತೆ ಇಲ್ಲ ಎಂಬುದು ಅವರು ವಿವರಣೆ.

‘ಎಐಎಡಿಎಂಕೆ ಅಥವಾ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ ಅವರು ಖಂಡಿತವಾಗಿಯೂ ಗೆಲ್ಲುತ್ತಿದ್ದರು’ ಎಂದು ಅವರು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು