ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ಅಧಿಕೃತ ಭಾಷೆಯಾಗಲಿ: ವೇದಿಕೆಯ ಮೇಲೆಯೇ ಪ್ರಧಾನಿಗೆ ಸ್ಟಾಲಿನ್ ಬೇಡಿಕೆ

ಅಕ್ಷರ ಗಾತ್ರ

ಚೆನ್ನೈ: ಭಾರತದ ಸರ್ಕಾರದ ಕಚೇರಿಗಳಲ್ಲಿ ಹಾಗೂ ಮದ್ರಾಸ್‌ ಹೈಕೋರ್ಟ್‌ನಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಪ್ರಸ್ತಾಪಿಸಿದ್ದಾರೆ.

ಚೆನ್ನೈನಲ್ಲಿ ಗುರುವಾರ ಪ್ರಧಾನಿ ಮೋದಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸ್ಟಾಲಿನ್‌ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಶ್ರೀಲಂಕಾದಿಂದ ಕಚ್ಚಾತೀವು ದ್ವೀಪವನ್ನು ಮರಳಿ ಪಡೆಯಬೇಕು ಹಾಗೂ ನೀಟ್‌ ಪರೀಕ್ಷೆಯಿಂದ ವಿನಾಯಿತಿ ನೀಡುವಂತೆ ಆಗ್ರಹಿಸಿದ್ದಾರೆ. ಇದರೊಂದಿಗೆ ಕೇಂದ್ರದಿಂದ ಬಾಕಿ ಇರುವ ₹14,006 ಕೋಟಿ ಜಿಎಸ್‌ಟಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ.

2021ರ ವಿಧಾನಸಭೆ ಚುನಾವಣೆಯಲ್ಲಿ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. 'ತಮಿಳು ಭಾಷೆಯು ಶಾಶ್ವತವಾದುದು ಮತ್ತು ತಮಿಳು ಸಂಸ್ಕೃತಿಯು ಜಾಗತಿಕವಾದುದು' ಎಂದು ಪ್ರಧಾನಿ ಹೇಳಿದ್ದಾರೆ.

ಹಿಂದಿಯ ರೀತಿಯಲ್ಲಿ ತಮಿಳನ್ನೂ ಅಧಿಕೃತ ಭಾಷೆಯಾಗಿ ಮಾಡಿ ಹಾಗೂ ಮದ್ರಾಸ್‌ ಹೈಕೋರ್ಟ್‌ನಲ್ಲೂ ತಮಿಳು ಅಧಿಕೃತ ಭಾಷೆಯಾಗಲಿ ಎಂದು ಮುಖ್ಯಮಂತ್ರಿ ಸ್ಟಾಲಿನ್‌ ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದೆ. ತಮಿಳಿಗೆ 'ಅಧಿಕೃತ ಮತ್ತು ಆಡಳಿತ' ಭಾಷೆಯ ಸ್ಥಾನ ನೀಡುವಂತೆ ಡಿಎಂಕೆ ಆಗ್ರಹಿಸುತ್ತಿದೆ.

ವೈದ್ಯಕೀಯ ಪ್ರವೇಶಾತಿಗೆ ನಡೆಸುವ ರಾಷ್ಟ್ರಮಟ್ಟದ ನೀಟ್‌ ಪರೀಕ್ಷೆಯಿಂದ ರಾಜ್ಯಕ್ಕೆ ವಿನಾಯಿತಿ ನೀಡಬೇಕು. ನೀಟ್‌ ಪರೀಕ್ಷೆಯಿಂದ ವಿನಾಯಿತಿ ಪಡೆಯುವ ಮಸೂದೆಯನ್ನು ತಮಿಳುನಾಡು ವಿಧಾನಸಭೆಯು ಅನುಮೋದಿಸುವ ಕೇಂದ್ರ ಸರ್ಕಾರವು ಸಮ್ಮತಿಸುವಂತೆ ಸ್ಟಾಲಿನ್ ಪ್ರಸ್ತಾಪಿಸಿದ್ದಾರೆ. ಮಸೂದೆಯನ್ನು ಗವರ್ನರ್‌ ಆರ್‌.ಎನ್‌.ರವಿ ಅವರು ಈವರೆಗೂ ಕೇಂದ್ರದ ಅನುಮೋದನೆಗೆ ಕಳುಹಿಸಿಲ್ಲ. ನೇರವಾಗಿ ರಾಷ್ಟ್ರಪತಿಯವರ ಅಂಗೀಕ್ಕಾರಕ್ಕಾಗಿ ಕಳುಹಿಸುವಂತೆ ಸ್ಟಾಲಿನ್‌ ಕೋರಿದ್ದಾರೆ.

ದ್ರಾವಿಡ ಮಾದರಿಯ ಬಗ್ಗೆ ಪ್ರಸ್ತಾಪಿಸಿದ ಸ್ಟಾಲಿನ್‌, ರಾಜ್ಯವು ಅನುಸರಿಸುತ್ತಿರುವ ಮಾದರಿಯಿಂದಾಗಿ ತಮಿಳುನಾಡು ಹಲವು ಮಾನದಂಡಗಳಲ್ಲಿ ಮುಂಚೂಣಿಯ ರಾಜ್ಯವಾಗಿದೆ. ಆರ್ಥಿಕ ಬೆಳವಣಿಗೆ, ಗ್ರಾಮೀಣ ಭಾಗದ ಆರೋಗ್ಯ ಸೌಲಭ್ಯ ಹಾಗೂ ಶಿಕ್ಷಣ ಕೇಂದ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಮಹಿಳೆಯರ ಉದ್ಯೋಗದಲ್ಲೂ ಮುಂಚೂಣಿಯಲ್ಲಿದೆ ಎಂದಿದ್ದಾರೆ.

ತಮಿಳುನಾಡಿನಲ್ಲಿ ಸರ್ಕಾರವು 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡುವ ವ್ಯವಸ್ಥೆ ಅನುಸರಿಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT