ಬುಧವಾರ, ಮೇ 25, 2022
29 °C
ಜಾತಿ ಗಣತಿಗೆ ಕೈಜೋಡಿಸುವಂತೆ ಒತ್ತಾಯ

ಬಿಜೆಪಿಯೇತರ ನಾಯಕರಿಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟ್ನಾ (ಪಿಟಿಐ): ಹಿಂದುಳಿದ ವರ್ಗಗಳ ಜಾತಿ ಗಣತಿ ವಿಷಯದಲ್ಲಿ ಸಹಕಾರ ನೀಡುವಂತೆ ಒತ್ತಾಯಿಸಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಬಿಜೆಪಿಯೇತರ ನಾಯಕರಿಗೆ ಶನಿವಾರ ಪತ್ರ ಬರೆದಿದ್ದಾರೆ.

ನಿತೀಶ್‌ ಕುಮಾರ್‌, ಸೋನಿಯಾ ಗಾಂಧಿ, ಶರದ್‌ ಪವಾರ್‌, ಮಮತಾ ಬ್ಯಾನರ್ಜಿ ಮತ್ತು ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ 33 ರಾಜಕೀಯ ನಾಯಕರಿಗೆ ಯಾದವ್‌ ಪತ್ರ ಬರೆದಿದ್ದು ಜಾತಿ ಗಣತಿಗೆ ಬೆಂಬಲ ನೀಡುವಂತೆ ಕೋರಿದ್ದಾರೆ.

ಜಾತಿ ಗಣತಿಯು ಆಡಳಿತಾತ್ಮಕವಾಗಿ ತೊಡಕಾಗಿದೆ. ಇದರ ಗಣತಿಯನ್ನು ಕೈಬಿಟ್ಟಿರುವುದು ಒಂದು ಪ್ರಜ್ಞಾ ಪೂರ್ವಕವಾದ ನಿರ್ಧಾರವಾಗಿದೆ ಎಂದು ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗಣತಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಆದರೆ ಇದು ಬಿಹಾರ ಸೇರಿದಂತೆ ಇತರೆಡೆ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಸಮಾಧಾನಕ್ಕೆ ಕಾರಣವಾಗಿದೆ.

‘ಜಾತಿ ಗಣತಿಗೆ ಸಂಬಂಧಿಸಿದ ವಿಷಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಮತ್ತು ಈಗಿನ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕಿದೆ’ ಎಂದು ಯಾದವ್‌ ಹೇಳಿದ್ದಾರೆ.

‘ಯಾವುದೇ ವಿಳಂಬವಿಲ್ಲದೆ ಈ ವಿಷಯದಲ್ಲಿ ನಮ್ಮ ಕ್ರಿಯಾ ಯೋಜನೆಯನ್ನು ತಕ್ಷಣ ಸಿದ್ಧಗೊಳಿಸಬೇಕಿದೆ. ಇದಕ್ಕಾಗಿ ನೀವು ಮುಕ್ತವಾಗಿ ಸಲಹೆಗಳನ್ನು ನೀಡಬಹುದು’ ಎಂದು ಯಾದವ್‌ ಅವರು ರಾಜಕೀಯ ನಾಯಕರಿಗೆ ಹೇಳಿದ್ದಾರೆ.  

ನಿತೀಶ್‌ ಕುಮಾರ್‌ ನೇತೃತ್ವದ ನಿಯೋಗವೊಂದು ಇತ್ತೀಚಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಜಾತಿ ಗಣತಿಗೆ ಬೇಡಿಕೆ ಇಟ್ಟಿತ್ತು. ತೇಜಸ್ವಿ ಯಾದವ್‌ ನಿಯೋಗದ ಭಾಗವಾಗಿದ್ದರು. 

ಬಿಜೆಪಿಯೇತರ ಮುಖ್ಯಮಂತ್ರಿಗಳಾದ ಉದ್ಧವ್‌ ಠಾಕ್ರೆ, ಎಂ.ಕೆ.ಸ್ಟಾಲಿನ್‌, ನವೀನ್‌ ಪಟ್ನಾಯಕ್‌, ಕೆ.ಚಂದ್ರಶೇಖರ್ ರಾವ್, ಜಗಮೋಹನ ರೆಡ್ಡಿ, ಎನ್‌ಡಿಎ ಜೊತೆ ಗುರುತಿಸಿಕೊಳ್ಳದ ನಾಯಕರಾದ ಅಖಿಲೇಶ್‌ ಯಾದವ್‌, ಮಾಯಾವತಿ, ಸಿತಾರಾಂ ಯೆಚೂರಿ, ಫಾರೂಕ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಪ್ರಕಾಶ್‌ ಸಿಂಗ್‌ ಬಾದಲ್‌ ಅವರಿಗೂ ಪತ್ರ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು