ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ನಾಡಿನಲ್ಲಿ ‘ಸಂವಿಧಾನ ಮಂದಿರ’

ನಿವೃತ್ತ ಶಿಕ್ಷಕ ಶಿವದಾಸನ್ ಪಿಳ್ಳೈ ಅವರಿಂದ ನಿರ್ಮಾಣ
Last Updated 8 ಜುಲೈ 2022, 23:45 IST
ಅಕ್ಷರ ಗಾತ್ರ

ಕಾಸರಗೋಡು: ಕೇರಳವನ್ನು ‘ದೇವರ ನಾಡು’ ಎಂದು ಹೇಳುವುದು ವಾಡಿಕೆ. ತಿರುವನಂತಪುರದಲ್ಲಿ ನಿವೃತ್ತ
ಶಿಕ್ಷಕರೊಬ್ಬರು ಸಂವಿಧಾನ ಮಂದಿರ ನಿರ್ಮಿಸಿದ್ದಾರೆ. ಇಲ್ಲಿನ ಗರ್ಭಗುಡಿಯಲ್ಲಿ ಸಂವಿಧಾನ ಪುಸ್ತಕ ಪೂಜಿಸಲಾಗುತ್ತಿದೆ.

ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವದಾಸನ್ ಪಿಳ್ಳೈ ಅವರು ವರ್ಷದ ಹಿಂದೆ ಮಂದಿರ ನಿರ್ಮಿಸಿದ್ದಾರೆ. ಮೂರು ಸೆಂಟ್ಸ್ ಜಾಗದಲ್ಲಿರುವ ಮಂದಿರದಲ್ಲಿ ಮಹಾತ್ಮಗಾಂಧಿ, ಸ್ವಾಮಿ ವಿವೇಕಾನಂದ, ಬಿ.ಆರ್.ಅಂಬೇಡ್ಕರ್ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ ಝಾಯಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಗರ್ಭಗುಡಿಯಲ್ಲಿ ಸಂವಿಧಾನದ ಪೀಠಿಕೆ ಕೆತ್ತಲಾಗಿದೆ.

ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡುವವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಇಲ್ಲಿ ಭಕ್ತರಿಗೆ ಪ್ರಸಾದ ವಿತರಣೆಯೂ ಇದೆ. ‘ಸಂವಿಧಾನವೇ ಈ ಮನೆಯ ಅಭ್ಯುದಯ’ ಎಂಬ ಪೋಸ್ಟರ್‌ ಅನ್ನು ಪ್ರತಿಯೊಬ್ಬರಿಗೂ ನೀಡಲಾಗುತ್ತದೆ.

‘ಸಂವಿಧಾನವೇ ದೇಶದ ಅಡಿಪಾಯ. ಇದು ಸಹೋದರತ್ವ ಮತ್ತು ವೈವಿಧ್ಯದ ಮೂಲ. ದೈವಿಕ ಸಂವಿಧಾನವನ್ನು ಪೂಜಿಸಲು ಮತ್ತು ಅದರ ಮೌಲ್ಯಗಳನ್ನು ಪೋಷಿಸಲು ಸಂವಿಧಾನ ಮಂದಿರವನ್ನು ನಿರ್ಮಿಸಲಾಗಿದೆ’ ಎಂದು ಪಿಳ್ಳೈ ಹೇಳುತ್ತಾರೆ.

‘ಹೊಸ ಪೀಳಿಗೆಗೆ ಸಂವಿಧಾನದ ಬಗ್ಗೆ ತಿಳಿದಿಲ್ಲ. ಮಕ್ಕಳ ಪಾಲಿಗೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಗಳು ಕೇವಲ ರಜಾ ದಿನಗಳಾಗಿವೆ. ಸಾಂವಿಧಾನಿಕ ಮೌಲ್ಯಗಳನ್ನು ಕಲಿಸಿ ಯುವಜನರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಅಗತ್ಯವಿದೆ’ ಎನ್ನುತ್ತಾರೆ ಅವರು.

ಸಂವಿಧಾನವನ್ನು ಧರ್ಮಗ್ರಂಥಗಳಿಗೆ ಹೋಲಿಸುವ ಅವರು, ಭಾರತದ ಸಂವಿಧಾನವು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ಕೇರಳದಲ್ಲೀಗ ಸಂವಿಧಾನದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವಾಗ ಈ ಸಂವಿಧಾನ ಮಂದಿರ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT