ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19ನಿಂದ ಚೇತರಿಕೆ: ಕೇರಳದ ಆಸ್ಪತ್ರೆಯಿಂದ 103 ವರ್ಷದ ವೃದ್ಧನ ಬಿಡುಗಡೆ

Last Updated 19 ಆಗಸ್ಟ್ 2020, 1:44 IST
ಅಕ್ಷರ ಗಾತ್ರ

ತಿರುವನಂತಪುರಂ: ದೇಶದಾದ್ಯಂತ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ 103 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19ನಿಂದ ಚೇತರಿಸಿಕೊಂಡಿದ್ದು, ಮಂಗಳವಾರ ಕೇರಳದ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೋವಿಡ್-19 ಸೋಂಕು ತಗುಲಿದ್ದ ಅಲುವಾ ಮೂಲದ ವ್ಯಕ್ತಿ ಎರ್ನಾಕುಲಂನ ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈಗ ಸೋಂಕಿನಿಂದ ಗುಣಮುಖರಾಗಿರುವುದರಿಂದಾಗಿ ಆಸ್ಪತ್ರೆಯ ಸಿಬ್ಬಂದಿ ಹೂವುಗಳನ್ನು ನೀಡುವ ಮೂಲಕ ಬೀಳ್ಕೊಟ್ಟಿದ್ದಾರೆ.

ಜುಲೈ 28 ರಂದು ತೀವ್ರ ಜ್ವರ ಮತ್ತು ದೇಹದಲ್ಲಿ ನೋವು ಕಾಣಿಸಿಕೊಂಡ ಬಳಿಕ ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಸೋಂಕು ತಗುಲಿರುವುದು ದೃಢಪಟ್ಟ ಅವರನ್ನು ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಅವರಿಗೆ ಯಾವುದೇ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ. ಆದರೂ, ಅವರ ವೃದ್ಧಾಪ್ಯವನ್ನು ಪರಿಗಣಿಸಿ ವಿಶೇಷ ವೈದ್ಯಕೀಯ ತಂಡವು ಚಿಕಿತ್ಸೆ ನೀಡಿದೆ. ರೋಗ ಪತ್ತೆಯಾದ 20 ದಿನಗಳಲ್ಲಿ ಅವರು ಗುಣಮುಖರಾಗಿದ್ದಾರೆ.

ಆನತ ಪತ್ನಿ ಮತ್ತು ಪುತ್ರರ ವರದಿ ನೆಗೆಟಿವ್ ಬಂದ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

'ನಾವು ವೃದ್ಧ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಮತ್ತು ಗುಣಪಡಿಸುತ್ತಿದ್ದೇವೆ ಎಂಬುದು ಬಹಳ ಹೆಮ್ಮೆಯ ವಿಷಯ' ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ.

ಕೋವಿಡ್-19 ಸೋಂಕಿನಿಂದಾಗಿ ಕೊಲ್ಲಂನ ಪರಿಪ್ಪಳ್ಳಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾದ 105 ವರ್ಷದ ಮಹಿಳೆ ಗುಣಮುಖರಾದ ಬಳಿಕೆ ಇತ್ತೀಚೆಗೆ ಅವರನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ 93 ಮತ್ತು 88 ವರ್ಷದ ದಂಪತಿಗೆ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಯಿತು ಮತ್ತು ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT